Advertisement

ತ್ರಿಪುರ ಸುಂದರಿ ದೇಗುಲಕ್ಕೆ 20 ಕೋಟಿ ರೂ.

09:04 PM Jun 26, 2019 | Lakshmi GovindaRaj |

ತಿ.ನರಸೀಪುರ: ಮೂಗೂರು ಗ್ರಾಮದ ತ್ರಿಪುರ ಸುಂದರಿ ಅಮ್ಮನವನ ದೇವಾಲಯವನ್ನು ಸಮಗ್ರ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿದ್ದು, ಪುರಾತತ್ವ ಇಲಾಖೆಯ ಶಿಫಾರಸ್ಸಿನಂತೆ ದೇವಾಲಯದ ಜೀರ್ಣೋದ್ಧಾರಕ್ಕೆ ರಾಜ್ಯ ಸರ್ಕಾರದಿಂದ 20 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್‌.ಪುಟ್ಟರಾಜು ಹೇಳಿದರು.

Advertisement

ತಾಲೂಕಿನ ಮೂಗೂರು ಗ್ರಾಮದಲ್ಲಿ ಬುಧವಾರ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ 1.50 ಕೋಟಿ ರೂ. ವೆಚ್ಚದಲ್ಲಿ ತ್ರಿಪುರ ಸುಂದರಿ ಅಮ್ಮನವರ ದೇವಸ್ಥಾನದ ಕಲ್ಯಾಣಿ ಅಭಿವೃದ್ಧಿಗೆ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ಟೆಂಡರ್‌ ಪೂರ್ಣ: ದೇಗುಲ ಜೀರ್ಣೋದ್ಧಾರ ಯೋಜನೆಯ ಟೆಂಡರ್‌ ಪ್ರಕ್ರಿಯೆ ಮುಗಿದಿದ್ದು, ಮೊದಲ ಹಂತದಲ್ಲಿ 5 ಕೋಟಿ ರೂ. ಬಿಡುಗಡೆಯಾಗಿದೆ. ನನ್ನ ಇಲಾಖೆಯಿಂದ ಕಲ್ಯಾಣಿ ಅಭಿವೃದ್ಧಿಗೆ ಅನುದಾನ ನೀಡಲಾಗಿದೆ ಎಂದರು.

ಪ್ರವಾಸಿಗರಿಗೆ ಸೌಲಭ್ಯ: ಈಗಾಗಲೇ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ದೇವಾಲಯ ಅಭಿವೃದ್ಧಿಗೆ ಚಾಲನೆ ನೀಡಿದ್ದಾರೆ. ಲೋಕೋಪಯೋಗಿ ಇಲಾಖೆಯಿಂದ ಪ್ರವಾಸಿ ಮಂದಿರ ನಿರ್ಮಾಣಕ್ಕೆ 5 ಕೋಟಿ, ಪ್ರವಾಸೋದ್ಯಮ ಇಲಾಖೆಯಿಂದ ಯಾತ್ರಿ ನಿವಾಸಕ್ಕೆ 1 ಕೋಟಿ ರೂ.ಬಿಡುಗಡೆಯಾಗಿದೆ.

ತ್ರಿಪುರ ಸುಂದರಿ ಅಮ್ಮನವರ ಆಶೀರ್ವಾದದಿಂದ ಗ್ರಾಮದಲ್ಲಿ ಧಾರ್ಮಿಕ ಮತ್ತು ಪ್ರವಾಸೋದ್ಯಮ ಸೌಲಭ್ಯ ಕಲ್ಪಿಸಲು ಬದ್ಧರಾಗಿದ್ದೇವೆ. ಪ್ರವಾಸಿಗರಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಲೋಕೋಪಯೋಗಿ ಇಲಾಖೆಯ 1 ಎಕರೆ ನಿವೇಶನ್ನ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.

Advertisement

ಕೆರೆಗಳ ಅಭಿವೃದ್ಧಿಗೆ 50 ಕೋಟಿ: ರಾಜಕಾರಣದಲ್ಲಿ ಮರ್ಮವನ್ನು ಅರಿಯದ ಶಾಸಕ ಎಂ.ಅಶ್ವಿ‌ನ್‌ಕುಮಾರ್‌ ಅವರ ಮಾತೃಹೃದಯಕ್ಕೆ ಮಣಿದು ಹೊಸಹಳ್ಳಿ ಕೆರೆಯನ್ನು ಪರಿಶೀಲಿಸಿದ್ದೇನೆ. ಕೆರೆಗಳನ್ನು ಅಭಿವೃದ್ಧಿಪಡಿಸಲು ಸಣ್ಣ ನೀರಾವರಿ ನಿಗಮದಿಂದ ಹೆಚ್ಚುವರಿಯಾಗಿ 50 ಕೋಟಿ ರೂ. ಮಂಜೂರು ಮಾಡುತ್ತೇನೆ.

ಕೆರೆಯ ಸುತ್ತಲಿನ ಒತ್ತುವರಿ ತೆರವುಗೊಳಿಸಲು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಸಚಿವ ಸಿ.ಎಸ್‌.ಪುಟ್ಟರಾಜು ತಿಳಿಸಿದರು. ಶಾಸಕ ಎಂ.ಅಶ್ವಿ‌ನ್‌ಕುಮಾರ್‌ ಮಾತನಾಡಿ, ತ್ರಿಪುರ ಸುಂದರಿ ಅಮ್ಮನವರ ಮೇಲೆ ಅಪಾರ ಭಕ್ತಿ ಇರುವುದರಿಂದ ಸಚಿವ ಸಿ.ಎಸ್‌.ಪುಟ್ಟರಾಜು ಮೂಗೂರು ಅಭಿವೃದ್ಧಿಗೆ ಒತ್ತು ನೀಡುತ್ತಿದ್ದಾರೆ.

ಆದ್ದರಿಂದ ತಾಲೂಕು ಆಡಳಿತ ಹಾಗೂ ತಾಂತ್ರಿಕ ಅಧಿಕಾರಿಗಳು ಉದ್ದೇಶಿತ ಅಭಿವೃದ್ಧಿ ಸ್ಥಳಗಳನ್ನು ಖುದ್ದಾಗಿ ಪರಿಶೀಲಿಸಿ, ಸರ್ಕಾರ ಯೋಜನೆಗಳನ್ನು ಅನುಷ್ಠಾನಗೊಳಿಸಲಿಕ್ಕೆ ಹೆಚ್ಚಿನ ಗಮನ ನೀಡಬೇಕು. ಮೂಗೂರು ಗ್ರಾಮಸ್ಥರು ಕೂಡ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಈ ವೇಳೆ ಜಿಪಂ ಸದಸ್ಯ ಎಸ್‌.ಜಯಪಾಲ ಭರಣಿ, ಮಾಜಿ ಸದಸ್ಯ ಎಂ.ಆರ್‌.ಸೋಮಣ್ಣ, ತಾಪಂ ಅಧ್ಯಕ್ಷ ಆರ್‌.ಚಲುವರಾಜು, ಸದಸ್ಯರಾದ ರಾಮಲಿಂಗಯ್ಯ, ಎಂ.ಚಂದ್ರಶೇಖರ್‌, ಗ್ರಾಪಂ ಮಾಜಿ ಅಧ್ಯಕ್ಷ ಗೌಡ್ರು ಜಗದೀಶ್‌, ಎಪಿಎಂಸಿ ಅಧ್ಯಕ್ಷ ವೆಂಕಟೇಶ್‌, ಜೆಡಿಎಸ್‌ ಕ್ಷೇತ್ರಾಧ್ಯಕ್ಷ ಸಿ.ಬಿ.ಹುಂಡಿ ಚಿನ್ನಸ್ವಾಮಿ, ಮುಖಂಡರಾದ ಎಂ.ಆರ್‌.ಶಿವಮೂರ್ತಿ, ಶಂಭುದೇವಪುರ ರಮೇಶ, ದೀಪುದರ್ಶನ್‌, ಬೆನಹಳ್ಳಿ ಸತೀಶ್‌, ಮಾವಿನಹಳ್ಳಿ ರಾಜೇಶ, ನಾಗೇಂದ್ರ, ರಮೇಶ, ದೇವೇಂದ್ರಪ್ಪ, ಬೂದಹಳ್ಳಿ ಸಿದ್ದರಾಜು, ಪ್ರಭಾರ ಇಓ ನಿಂಗಯ್ಯ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಎಇಇ ಮೋಹನ್‌, ಜೆಇ ಅಜರುದ್ಧೀನ್‌, ಪಾರುಪತ್ತೇಗಾರ್‌ ಎಂ.ಬಿ.ಸಾಗರ್‌, ತಹಶೀಲ್ದಾರ್‌ ನಾಗಪ್ರಶಾಂತ್‌ ಇತರರಿದ್ದರು.

ಅಡ್ಡಹಳ್ಳ ಆಕರ್ಷಣೆಗೆ ಯೋಜನೆ: ಕ್ಷೇತ್ರದ ಶಾಸಕ ಎಂ.ಅಶ್ವಿ‌ನ್‌ಕುಮಾರ್‌ ಕಾಳಜಿವಹಿಸಿ ಹೊಸಹಳ್ಳಿ ಕೆರೆ ಅಭಿವೃದ್ಧಿಗೆ ಅನುದಾನ ನೀಡುವಂತೆ ಪ್ರಸ್ತಾಪಿಸಿದ್ದಾರೆ. ಈಗಾಗಲೇ ಮೂಗೂರು ಕೆರೆಯನ್ನು 2 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ್ದೇವೆ.

ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಅಡ್ಡಹಳ್ಳಕ್ಕೆ ಮತ್ತೂಂದು ಸೇತುವೆ ನಿರ್ಮಿಸಿ, ಅಡ್ಡಹಳ್ಳವನ್ನು ಅಭಿವೃದ್ಧಿಪಡಿಸುವ ಮೂಲಕ ಸದಾಕಾಲ ನೀರು ನಿಲುವಂತೆ ಅದನ್ನೂ ಕೂಡ ಆಕರ್ಷಣೀಯವಾಗಿ ಅಭಿವೃದ್ಧಿ ಪಡಿಸಲಿಕ್ಕೆ ಯೋಜನೆ ರೂಪಿಸುತ್ತೇವೆ. ಮುಂದಿನ ದಿನಗಳಲ್ಲಿ ಈ ಭಾಗಕ್ಕೆ ಹೆಚ್ಚಿನ ಯೋಜನೆಗಳನ್ನು ಮಂಜೂರು ಮಾಡುತ್ತೇವೆ ಎಂದು ಸಿ.ಎಸ್‌.ಪುಟ್ಟರಾಜು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next