ಅಗರ್ತಲಾ: ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ತ್ರಿಪುರ ಟಿಎಂಸಿ ಮಾಜಿ ಮುಖ್ಯಸ್ಥ ಸುಬಲ್ ಭೌಮಿಕ್ ಮತ್ತು ಸಿಪಿಐ(ಎಂ) ಶಾಸಕ ಮೊಬೋಶರ್ ಅಲಿ ಶುಕ್ರವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಅಲಿ 2018 ರಲ್ಲಿ ಉತ್ತರ ತ್ರಿಪುರಾದ ಕೈಲಾಸಹರ್ ಕ್ಷೇತ್ರದಿಂದ ತ್ರಿಪುರ ವಿಧಾನಸಭೆಗೆ ಚುನಾಯಿತರಾಗಿದ್ದರು.
ತ್ರಿಪುರ ಸಿಎಂ ಮಾಣಿಕ್ ಸಹಾ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಸಿಪಿಐ-ಎಂ ನೇತೃತ್ವದ ಐದು ಎಡಪಕ್ಷಗಳು ಬುಧವಾರ ತಮ್ಮ 47 ಅಭ್ಯರ್ಥಿಗಳನ್ನು ಘೋಷಿಸಿದ್ದು, ತಮ್ಮ ಹೊಸ ಮಿತ್ರ ಪಕ್ಷವಾದ ಕಾಂಗ್ರೆಸ್‌ಗೆ 13 ಸ್ಥಾನಗಳನ್ನು ಬಿಟ್ಟುಕೊಟ್ಟಿದ್ದು, ಅಲಿ ಸೇರಿದಂತೆ 8 ಹಾಲಿ ಶಾಸಕರನ್ನು ಕೈಬಿಡಲಾಗಿದೆ.
2018 ರ ವಿಧಾನಸಭಾ ಚುನಾವಣೆಯಲ್ಲಿ ಅಲಿ ಆಯ್ಕೆಯಾದ ಕೈಲಾಸಹರ್ ವಿಧಾನಸಭಾ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲಾಗಿದೆ.
ನಾಲ್ಕು ಬಾರಿ ಮಾಜಿ ಮುಖ್ಯಮಂತ್ರಿ ಮತ್ತು ಸಿಪಿಐ-ಎಂನ ಪಾಲಿಟ್‌ಬ್ಯುರೊ ಸದಸ್ಯ ಮಾಣಿಕ್ ಸರ್ಕಾರ್, ಪಕ್ಷದ ಧೀಮಂತ ಮತ್ತು ಮಾಜಿ ಸಚಿವ ಬಾದಲ್ ಚೌಧರಿ, ಇನ್ನೂ ಮೂವರು ಮಾಜಿ ಸಚಿವರಾದ ತಪನ್ ಚಕ್ರವರ್ತಿ, ಸಾಹಿದ್ ಚೌಧರಿ, ಭಾನುಲಾಲ್ ಸಹಾ ಅವರನ್ನೂ ಆರೋಗ್ಯದ ಕಾರಣದಿಂದ ಕೈಬಿಡಲಾಗಿದೆ.
ತಮಗೆ ಸಿಗುವ ಅಲ್ಪಸ್ವಲ್ಪ ಸೀಟುಗಳ ಬಗ್ಗೆ ಕಾಂಗ್ರೆಸ್ ನಾಯಕರು ಅಸಮಾಧಾನಗೊಂಡಿರುವುದು ಗೋಚರವಾಗಿದೆ. ನಿರಾಶ ಕಾಂಗ್ರೆಸ್ ನಾಯಕ ಮತ್ತು ಪಕ್ಷದ ಏಕೈಕ ಶಾಸಕ ಸುದೀಪ್ ರಾಯ್ ಬರ್ಮನ್, ನಾವು ಮೊದಲು 27 ಸ್ಥಾನಗಳನ್ನು ಮತ್ತು ನಂತರ ಎಡಪಕ್ಷಗಳಿಂದ 23 ಸ್ಥಾನಗಳನ್ನು ಕೇಳಿದ್ದೇವೆ ಎಂದು ಹೇಳಿದ್ದಾರೆ.
ಎಡ ಪಕ್ಷಗಳು ಅವರ ಇಚ್ಛೆ ಮತ್ತು ಅಭಿಲಾಷೆಗಳಿಗೆ ಅನುಗುಣವಾಗಿ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ, ನಾವು ಜನರ ಇಚ್ಛೆಯಂತೆ ಹೋಗುತ್ತೇವೆ ಎಂದು ರಾಯ್ ಬರ್ಮನ್ ಹೇಳಿದ್ದಾರೆ.