ಗುವಾಹಟಿ: ಅಕ್ರಮ ಸಂಬಂಧ ಹೊಂದಿದ್ದ ಆರೋಪದ ಹಿನ್ನೆಲೆಯಲ್ಲಿ ಜೋಡಿಯೊಂದನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಗ್ರಾಮಸ್ಥರು ಥಳಿಸಿರುವ ಘಟನೆ ದಕ್ಷಿಣ ತ್ರಿಪುರಾ ಜಿಲ್ಲೆಯ ಬೆಲೋನಿಯಾ ಪಟ್ಟಣದಲ್ಲಿ ನಡೆದಿದೆ.
ಮದುವೆಯಾಗಿ ಎರಡು ಮಕ್ಕಳನ್ನು ಹೊಂದಿರುವ ವ್ಯಕ್ತಿ, ಅದೇ ಗ್ರಾಮದಲ್ಲಿ ತನ್ನ ಸೋದರ ಸಂಬಂಧಿಯೊಂದಿಗೆ ವಾಸಿಸುತ್ತಿರುವ ಯುವತಿಯೊಂದಿಗೆ ಅಕ್ರಮ ಸಂಬಂಧವನ್ನು ಇಟ್ಟುಕೊಂಡಿದ್ದ. ಶನಿವಾರ ಬೆಳಗ್ಗೆ (ಆ.19 ರಂದು) ವಿವಾಹಿತ ವ್ಯಕ್ತಿ ಹಾಗೂ ಯುವತಿ ಜೊತೆಯಾಗಿ ಇರುವುದನ್ನು ಗ್ರಾಮಸ್ಥರು ನೋಡಿದ್ದಾರೆ. ಇದನ್ನು ನೋಡಿದವರು ಇಬ್ಬರನ್ನು ಎಳೆದು ತಂದಿದ್ದಾರೆ.
ಆ ಬಳಿಕವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಇಬ್ಬರನ್ನು ಥಳಿಸಿದ್ದಾರೆ. ಯುವತಿಯ ಕೂದಲನ್ನು ಹಿಡಿದು, ಆಕೆ ಮೇಲೆ ಮಹಿಳೆಯೊಬ್ಬರು ಹಲ್ಲೆ ನಡೆಸಿದ್ದಾರೆ. ಇಬ್ಬರನ್ನು ಥಳಿಸಿದರೂ ಅಕ್ಕಪಕ್ಕದಲ್ಲಿದ್ದ ಜನರು ಯಾರೂ ಕೂಡ ಸಹಾಯಕ್ಕೆ ಬಾರದೇ ಇರುವುದನ್ನು ಘಟನೆಯ ವೈರಲ್ ವಿಡಿಯೋದಲ್ಲಿ ಕಾಣಬಹುದು.
ಇದಾದ ಬಳಿಕ ಪೊಲೀಸರು ಘಟನಾ ಸ್ಥಳಕ್ಕೆ ಬಂದು, ಕಂಬಕ್ಕೆ ಕಟ್ಟಿದವರನ್ನು ಬಿಡುಗಡೆ ಮಾಡಿದ್ದಾರೆ. ಎರಡೂ ಪಾರ್ಟಿ ಕಡೆಯವರು ಈ ಬಗ್ಗೆ ಯಾವ ದೂರನ್ನು ನೀಡಿಲ್ಲ. ಥಳಿತಕ್ಕೆ ಒಳಗಾದವರು ಕೂಡ ದೂರನ್ನು ನೀಡಿಲ್ಲ. ಪೊಲೀಸರು ಸ್ವತಃ ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಯುವತಿಯ ಸೋದರ ಸಂಬಂದಿ ಹಾಗೂ ದೈಹಿಕ ಹಲ್ಲೆಗೈದ ಅತ್ತಿಗೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.