Advertisement

ತ್ರಿಪುರ ಸಿಎಂ ಮಾಣಿಕ್‌ ಸರ್ಕಾರ್‌ಗೆ ಬಸವ ಕೃಷಿ ಪ್ರಶಸ್ತಿ ಪ್ರದಾನ

03:45 AM Jan 16, 2017 | |

ಬಾಗಲಕೋಟೆ: ಇಲ್ಲಿನ ಕೂಡಲಸಂಗಮ ಪಂಚಮಸಾಲಿ ಜಗದ್ಗುರು ಪೀಠದಿಂದ ನೀಡುವ ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿಯನ್ನು ಭಾನುವಾರ ತ್ರಿಪುರಾ ಸಿಎಂ ಮಾಣಿಕ್‌ ಸರ್ಕಾರ್‌ ಅವರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿಯು 1 ಲಕ್ಷ ರೂ. ನಗದನ್ನು ಹೊಂದಿದೆ.

Advertisement

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಧರ್ಮದ ಹೆಸರಿನಲ್ಲಿ ಘರ್‌ ವಾಪಸಿ ನಡೆಸಲಾಗುತ್ತಿದೆ. ಈ ಮೂಲಕ ದೇಶದ ಮುಸ್ಲಿಮರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ದೇಶದ ಹೊರಗೆ ಭಾರತ ದೇಶದ ಬಗ್ಗೆ ಮಾತನಾಡುವ ಪ್ರಧಾನಿ ನರೇಂದ್ರ ಮೋದಿ, ಮುಸ್ಲಿಮರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಕುರಿತು ಸಂಸತ್ತಿನ ಒಳಗೆ ಮಾತನಾಡಲಿ ಎಂದರು.

21ನೇ ಶತಮಾನದ ಬಸವಣ್ಣ:
ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, 11ನೇ ಶತಮಾನದಲ್ಲಿ ಬಸವಣ್ಣವರು ದುಡಿಯುವ ವರ್ಗದ ಧ್ವನಿಯಾಗಿದ್ದರು. ಇಂದು ತ್ರಿಪುರಾ ಸಿಎಂ ಮಾಣಿಕ ಸರ್ಕಾರ್‌,  ಬಸವಣ್ಣನವರ ತಾತ್ವಿಕ ವ್ಯಕ್ತಿಯಾಗಿ ನಿಂತಿದ್ದಾರೆ. ಇಡೀ ಭಾರತಕ್ಕೆ ತ್ರಿಪುರಾ ಪ್ರೇರಣೆಯಾದರೆ, ದೇಶದ ರಾಜಕಾರಣಿಗಳಿಗೆ ಸಿಎಂ ಮಾಣಿಕ್‌ ಸರ್ಕಾರ್‌ ಮಾದರಿಯಾಗಬೇಕು. 2012ರಿಂದ ಬಸವ ಕೃಷಿ ಪ್ರಶಸ್ತಿ ನೀಡಲಾಗುತ್ತಿದೆ ಎಂದರು.

1.50 ಲಕ್ಷ ಕೋಟಿ ಹಾನಿ:
ನೋಟು ನಿಷೇಧದಿಂದ ದೇಶದ ಆರ್ಥಿಕ ಪರಿಸ್ಥಿತಿಯ ಮೇಲೆ ದೊಡ್ಡ ಪರಿಣಾಮವಾಗಿದ್ದು, ಜಿಡಿಪಿ 1.5ರಷ್ಟು ಕುಸಿದಿದೆ. ಕೇವಲ 60 ದಿನಗಳಲ್ಲಿ ದೇಶಕ್ಕೆ 1.50 ಲಕ್ಷ ಕೋಟಿ ಹಾನಿಯಾಗಿದೆ ಎಂದು  ಮಾಣಿಕ್‌ ಸರ್ಕಾರ್‌ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ದೇಶದಲ್ಲಿ ನೋಟು ನಿಷೇಧದಿಂದ ಭ್ರಷ್ಟಾಚಾರ ತಡೆಯಲು ಸಾಧ್ಯವೇ ಇಲ್ಲ. ಭ್ರಷ್ಟಾಚಾರ ತಡೆಗೆ ಸರ್ಕಾರ ಮತ್ತು ಜನರ ಇಚ್ಛಾಶಕ್ತಿ ಬೇಕು. ನೋಟು ನಿಷೇಧದ ಬಳಿಕ ದೇಶದಲ್ಲಿ ಭ್ರಷ್ಟಾಚಾರ ನಿಂತಿದೆಯಾ? ನೋಟು ನಿಷೇಧಗೊಂಡು 65 ದಿನಗಳ ಕಳೆದಿವೆ. ಕಪ್ಪುಹಣ ಹೊರ ತರುತ್ತೇವೆ ಎಂದವರು ಎಷ್ಟು ಕಪ್ಪು ಹಣ ಪತ್ತೆ ಹಚ್ಚಿದ್ದಾರೆ? ಎಂದು ಅವರು ಪ್ರಶ್ನಿಸಿದರು.

ಯಾವುದೇ ಧರ್ಮ, ಇನ್ನೊಂದು ಧರ್ಮದ ಮೇಲೆ ದಾಳಿ, ದೌರ್ಜನ್ಯ ಮಾಡು ಎಂದು ಹೇಳಿಲ್ಲ. ಭಾರತದಲ್ಲಿ 18 ಕೋಟಿ ಜನ ಮುಸ್ಲಿಮರಿದ್ದಾರೆ. 4.50 ಕೋಟಿ ಕ್ರಿಶ್ಚಿಯನ್‌ ಇದ್ದಾರೆ. ಜತೆಗೆ ಇನ್ನುಳಿದ ಧರ್ಮದವರು ಸೇರಿ ಅಲ್ಪಸಂಖ್ಯಾತರು 30 ಕೋಟಿಯಷ್ಟಿದ್ದಾರೆ. ಅವರೆಲ್ಲರ ಮೇಲೆ ದೌರ್ಜನ್ಯ ನಡೆಯುತ್ತಿವೆ. ಉದ್ದೇಶಿತ ಕೋಮು-ಗಲಭೆ ನಡೆಯುತ್ತಿವೆ ಎಂದು ಸರ್ಕಾರ್‌ ಆರೋಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next