ನವದೆಹಲಿ:ತ್ರಿವಳಿ ತಲಾಖ್ ನಿಷೇಧಿಸುವ ಹಾಗೂ ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸುವುದಕ್ಕೆ ಸಂಬಂಧಿಸಿದಂತೆ ತಿದ್ದುಪಡಿ ಮಸೂದೆಯ ಸುಗ್ರೀವಾಜ್ಞೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.
ಕಳೆದ ವರ್ಷದ ಚಳಿಗಾಲದ ಲೋಕಸಭಾ ಅಧಿವೇಶನದಲ್ಲಿ ಮುಸ್ಲಿಂ ಮಹಿಳಾ (ವೈವಾಹಿಕ ಹಕ್ಕುಗಳ ರಕ್ಷಣೆ) ಮಸೂದೆಗೆ ಒಪ್ಪಿಗೆ ಸಿಕ್ಕಿತ್ತು. ಆದರೆ ರಾಜ್ಯಸಭೆಯಲ್ಲಿ ವಿಪಕ್ಷಗಳ ತೀವ್ರ ವಿರೋಧದಿಂದ ಮಸೂದೆ ಅಂಗೀಕಾರ ಪಡೆಯಲು ವಿಫಲವಾಗಿತ್ತು. ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರಕ್ಕೆ ಪೂರ್ಣ ಬಹುಮತ ಇಲ್ಲದ ಹಿನ್ನೆಲೆಯಲ್ಲಿ ಮಸೂದೆ ಅಂಗೀಕಾರಕ್ಕೆ ಅಡ್ಡಿಯಾಗಿತ್ತು. ಈ ನಿಟ್ಟಿನಲ್ಲಿ ಲೋಸಭೆಯಲ್ಲಿ ಮಂಡನೆಯಾದ 6 ತಿಂಗಳೊಳಗೆ ಸುಗ್ರೀವಾಜ್ಞೆ ಮೂಲಕ ಅಂಗೀಕರಿಸಿದಂತಾಗಿದೆ.
ತಕ್ಷಣಕ್ಕೆ ನೀಡುವ ತ್ರಿವಳಿ ತಲಾಖ್ ಕಾನೂನು ಬಾಹಿರ ಮತ್ತು ಅಸಂವಿಧಾನಿಕ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ರಾಷ್ಟ್ರಪತಿ ಸುಗ್ರೀವಾಜ್ಞೆಗೆ ಅಂಕಿತ ಹಾಕುವ ಮೂಲಕ ತ್ರಿವಳಿ ತಲಾಖ್ ಪದ್ಧತಿ ಶಿಕ್ಷಾರ್ಹ ಅಪರಾಧವಾಗಲಿದೆ, ಅಲ್ಲದೇ ಮೂರು ವರ್ಷಗಳ ಜೈಲುಶಿಕ್ಷೆ ಹಾಗೂ ದಂಡನೆಗೆ ಅವಕಾಶವಿದೆ. ಮುಸ್ಲಿಂ ಮಹಿಳೆಯರು ಜೀವನಾಂಶಕ್ಕೂ ಅರ್ಹರಾಗಲಿದ್ದಾರೆ ಎಂದು ವರದಿ ತಿಳಿಸಿದೆ.
ಕೇಂದ್ರ ಸಚಿವ ಸಂಪುಟದಲ್ಲಿ ಸುಗ್ರೀವಾಜ್ಞೆಗೆ ಗ್ರೀನ್ ಸಿಗ್ನಲ್ ದೊರೆತ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಕಾನೂನು ಸಚಿವ ರವಿ ಶಂಕರ್ ಪ್ರಸಾದ್, ಮುಸ್ಲಿಂ ಮಹಿಳಾ (ವೈವಾಹಿಕ ಹಕ್ಕುಗಳ ರಕ್ಷಣೆ) ಮಸೂದೆ ಜಾರಿಗೆ ಕಾಂಗ್ರೆಸ್ ಪಕ್ಷ ಸಹಕಾರ ನೀಡಿಲ್ಲ ಎಂದು ಆರೋಪಿಸಿದರು.
ಈ ಪದ್ಧತಿ ಅಮಾನವೀಯ ಮತ್ತು ಅನಾಗರಿಕ. ಈಗಾಗಲೇ ಜಗತ್ತಿನ 22 ದೇಶಗಳಲ್ಲಿ ತ್ರಿವಳಿ ತಲಾಖ್ ಅನ್ನು ನಿಷೇಧಿಸಲಾಗಿದೆ. ಜಾತ್ಯತೀತ ಭಾರತದಂತಹ ದೇಶದಲ್ಲಿ ಲಿಂಗತಾರತಮ್ಯ ಮಾಡದೇ ನ್ಯಾಯ ಕೊಡಬೇಕಾಗಿದೆ. ಆದರೆ ವೋಟ್ ಬ್ಯಾಂಕ್ ರಾಜಕೀಯದಿಂದ ಅದಕ್ಕೆ ತಡೆಯೊಡ್ಡಲಾಗುತ್ತಿತ್ತು ಎಂದರು.
ನಾನು ಮತ್ತೊಮ್ಮೆ ಕಾಂಗ್ರೆಸ್ ವರಿಷ್ಠೆ ಸೋನಿಯಾಜೀ ಅವರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ದೇಶದ ಜನರ ಹಿತಾಸಕ್ತಿ ಮೇರೆಗೆ ನ್ಯಾಯ ಕೊಡಲು ಸುಗ್ರೀವಾಜ್ಞೆ ಮೂಲಕ ಕಾನೂನನ್ನು ಜಾರಿಗೆ ತಂದಿದ್ದೇವೆ. ನೀವು ವೋಟ್ ಬ್ಯಾಂಕ್ ರಾಜಕೀಯವನ್ನು ಮೀರಿ, ಮಹಿಳೆಯರ ನ್ಯಾಯಕ್ಕಾಗಿ ನೆರವು ನೀಡಬೇಕು ಎಂದು ತಿಳಿಸಿದರು.