ಲಕ್ನೋ : ತ್ರಿವಳಿ ತಲಾಕ್‌ನಿಂದ ಅನ್ಯಾಯಕ್ಕೆ ಗುರಿಯಾಗುತ್ತಿರುವ ಮುಸ್ಲಿಂ ಮಹಿಳೆಯರ ವಿರುದ್ಧ ಧ್ವನಿ ಎತ್ತುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಕೊಂಡಾಡಿರುವ ಉತ್ತರ ಪ್ರದೇಶದ ಮುಸ್ಲಿಂ ಸಮುದಾಯದ ಮಹಿಳೆಯರು ಈಗ ಈ ಇಬ್ಬರು ಬಿಜೆಪಿ ನಾಯಕರಿಗೆ ರಾಖಿಯನ್ನು ಕಳುಹಿಸುತ್ತಿದ್ದಾರೆ.
ಮುಸ್ಲಿಂ ಮಹಿಳೆಯರಿಗೆ ಅನ್ಯಾಯವಾಗುತ್ತಿರುವ ತ್ರಿವಳಿ ತಲಾಕ್ ವಿಷಯದಲ್ಲಿ ಯಾರೇ ಆದರೂ ರಾಜಕೀಯ ಮಾಡಬಾರದು; ಈ ಪಿಡುಗಿಗೆ ಸರಿಯಾದ ಪರಿಹಾರವನ್ನು ಸೂಚಿಸಿ ಮುಂಬರಬೇಕು ಎಂದು ಪ್ರಧಾನಿ ಮೋದಿ ಅವರು ಜನರನ್ನು ಒತ್ತಾಯಿಸುತ್ತಲೇ ಬಂದಿದ್ದರು.
“ತ್ರಿವಳಿ ತಲಾಕ್ ಒಂದು ಅನಿಷ್ಟ ಪದ್ಧತಿ. ಇದರ ನಿರ್ಮೂಲನೆಗೆ ಸಾಮಾಜಿಕ ಜಾಗೃತಿ ಸಾಧಿಸುವುದೇ ಉತ್ತಮವಾದ ಉಪಾಯವಾಗಿದೆ’ ಎಂದು ಮೋದಿ ಹೇಳುತ್ತಾ ಬಂದಿದ್ದಾರೆ.
ಅಸಂಖ್ಯಾತ ಮುಸ್ಲಿಂ ಮಹಿಳೆಯರು ತ್ರಿವಳಿ ತಲಾಕ್ ಪದ್ಧತಿಯನ್ನು ಪ್ರಶ್ನಿಸಿದ್ದಾರೆ. ಮುಸ್ಲಿಂ ಪತಿಯು ತನ್ನ ಪತ್ನಿಗೆ ಒಂದೇ ಬಾರಿಗೆ ಮೂರು ಸಲ ತಲಾಕ್ ಎಂದು ಹೇಳುವ ಮೂಲಕ ಅಥವಾ ಫೋನ್‌ನಲ್ಲಿ ಹೇಳುವ ಮೂಲಕ ಇಲ್ಲವೇ ಮೊಬೈಲ್ ಸಂದೇಶ ಕಳುಹಿಸುವ ಮೂಲಕ ತ್ರಿವಳಿ ತಲಾಕ್ ಘೋಷಿಸುವುದು ಸಾಮಾನ್ಯವಾಗಿದೆ.
ಮುಸ್ಲಿಮರಲ್ಲಿರುವ ತ್ರಿವಳಿ ತಲಾಕ್ ಪದ್ಧತಿಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಲಾದ ಹಲವು ಮನವಿಗಳ ಮೇಲಿನ ತನ್ನ ತೀರ್ಪನ್ನು ಸುಪ್ರೀಂ ಕೋರ್ಟ್ ಕಳೆದ ಮೇ 18ರಂದು ಕಾದಿರಿಸಿತ್ತು.