Advertisement

Kundapura: ಅಮೆರಿಕದಲ್ಲಿ ಟ್ರಿಪಲ್‌ ತಲಾಕ್‌; ಅಲ್ಲಿಗೆ ಹೋಗಲು ನಿರ್ದೇಶಕನ ಕೈಲಿ ದುಡ್ಡಿಲ್ಲ!

02:29 PM Aug 23, 2024 | Team Udayavani |

ಕುಂದಾಪುರ: ಅಮೆರಿಕದ ವಾಷಿಂಗ್ಟನ್‌ ಡಿಸಿಯ ರಿಚ್‌ಮಂಡ್‌ನ‌ಲ್ಲಿ ನಡೆಯುವ 12ನೇ “ಅಕ್ಕ’ ವಿಶ್ವ ಕನ್ನಡ ಸಮ್ಮೇಳನದಲ್ಲಿ (ಅಮೇರಿಕ ಕನ್ನಡ ಕೂಟಗಳ ಆಗರ) ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಯಾಕೂಬ್‌ ಖಾದರ್‌ ಗುಲ್ವಾಡಿ ನಿರ್ದೇಶನದ ಸೂಕ್ಷ್ಮ ಸಂವೇದನೆಯ ಸಿನಿಮಾ ‘ಟ್ರಿಪಲ್‌ ತಲಾಖ್‌’ ಪ್ರದರ್ಶನ ಮತ್ತು ಸಂವಾದ ಇದೇ ಆ.30,31ಮತ್ತು ಸೆ.1ರಂದು ನಡೆಯಲಿದೆ.

Advertisement

ಆದರೆ, ಹಣ ಕಾಸಿನ ಅಡಚಣೆಯಿಂದ ನಿರ್ದೇಶಕರಿಗೆ ಸಮ್ಮೇಳನಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ ಎಂಬ ವಿಚಾರ ತಿಳಿದು ಸಚಿವ ಜಮೀರ್‌ ಅಹಮದ್‌ ಸೇರಿ ಹಲವರು ನೆರವು ನೀಡಿ ಪ್ರಯಾಣಕ್ಕೆ ವ್ಯವಸ್ಥೆ ಮಾಡಿದ್ದಾರೆ. ಅಕ್ಕ ಸಮಿತಿ ಸಿನೆಮಾ ಪ್ರದರ್ಶನಕ್ಕೆ ಅನುಮತಿ ನೀಡಿದರೂ ನಿರ್ದೇಶಕ ಗುಲ್ವಾಡಿ ಅವರಿಗೆ ಹಣಕಾಸಿನ ಅಡಚಣೆಯಿಂದ ಅಲ್ಲಿಗೆ ಹೋಗಲು ಸಾಧ್ಯವಾಗದ ಸ್ಥಿತಿ ಇದೆ. ಯಾಕೆಂದರೆ ಅವರು ಈಗಲೂ ಗುಜರಿ ಅಂಗಡಿ ವ್ಯಾಪಾರ ಮಾಡುತ್ತಿದ್ದಾರೆ.

ಈ ವಿಚಾರ ಗೊತ್ತಾಗಿ ರಾಜ್ಯ ಅಲ್ಪಸಂಖ್ಯಾಕರ ಆಯೋಗದ ಮಾಜಿ ಅಧ್ಯಕ್ಷ ಜಿ.ಎ.ಬಾವ, ಕರ್ನಾಟಕ ವಕ್ಫ್ ಮಂಡಳಿ ಸದಸ್ಯ ಯಾಕೂಬ್‌ ಯೂಸುಫ್‌, ಮಾಜಿ ಅಧ್ಯಕ್ಷ ಮೌಲಾನ ಶಾಫಿ ಸಹದಿ ಉಸ್ತಾದ್‌ ಅವರು ಕರ್ನಾಟಕ ಸರಕಾರದ ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವ ಬಿ.ಝಡ್‌. ಜಮೀರ್‌ ಅಹಮದ್‌ ಖಾನ್‌ ಅವರಿಗೆ ಮನವಿ ಮಾಡಿದರು. ಅವರು ಸ್ಪಂದಿಸಿ ಯಾಕುಬ್‌ ಅವರ ಅಮೆರಿಕ ಕಾರ್ಯಕ್ರಮದ ಖರ್ಚು ವೆಚ್ಚಗಳನ್ನು ಸ್ವತಃ ಭರಿಸಿದರು.

ಈ ಹಿಂದೆಯೂ ಪ್ರದರ್ಶನ
2018ರಲ್ಲಿ ಅಮೇರಿಕಾದ ಡಲ್ಲಾಸ್‌ನಲ್ಲಿ ನಡೆದ ಸಮ್ಮೇಳನದಲ್ಲಿ ಕೂಡ ಇವರ ನಿರ್ಮಾಣದ ರಾಷ್ಟ್ರ ಪ್ರಶಸ್ತಿ ಪಡೆದ ‘ರಿಸರ್ವೇಶನ್‌’ ಸಿನಿಮಾದ ಪ್ರದರ್ಶನ ನಡೆದಿತ್ತು. 2016ರಲ್ಲಿ ನ್ಯೂಯಾರ್ಕ್‌ ನ್ಯೂಜೆರ್ಸಿಯಲ್ಲಿ, 2014ರಲ್ಲಿ ಕ್ಯಾಲಿಫೋರ್ನಿಯಾದ ಸ್ಯಾನ್‌ ಫ್ರಾನ್ಸಿಸ್ಕೊದಲ್ಲಿ ನಡೆದ ಸಮ್ಮೇಳನದ ಬಹುಭಾಷ ಕವಿಗೋಷ್ಟಿಯ ಭಾಗವಹಿಸುವ ಮೂಲಕ ಸತತ ನಾಲ್ಕು ಸಮ್ಮೇಳನಗಳಲ್ಲಿ ಪ್ರತಿನಿಧಿಯಾಗಿ ಭಾಗವಹಿಸಿದ್ದಾರೆ.

ಹಣಕಾಸಿನ ಅಡಚಣೆ
ನನ್ನ ಸಾಧನೆಯ ಹಿಂದೆ ಹಲವು ಗೆಳೆಯರ ಸಹಕಾರವಿದೆ. ಈ ಬಾರಿಯ ಅಕ್ಕ ಸಮ್ಮೇಳನದಲ್ಲಿ ನನ್ನ ಸಿನಿಮಾ ಪ್ರದರ್ಶನಕ್ಕೆ ಸಮಿತಿ ಅವಕಾಶ ಮಾಡಿಕೊಟ್ಟರೂ ಹಣಕಾಸಿನ ಕಾರಣದಿಂದ ಭಾಗವಹಿಸುವ ಸ್ಥಿತಿಯಲ್ಲಿ ಇರಲಿಲ್ಲ. ಸಚಿವ ಜಮೀರ್‌ ಖಾನ್‌ ಅವರ ನೆರವಿನಿಂದ ಅಮೆರಿಕ ಕಾರ್ಯಕ್ರಮದ ಖರ್ಚು ವೆಚ್ಚಗಳನ್ನು ಭರಿಸುವಂತಾಗಿದೆ. ಸಾಮಾನ್ಯ ಕಲಾವಿದನಾದ ನನ್ನ ಸಹಾಯಕ್ಕೆ ಬಂದ ಸಚಿವರಿಗೆ ಧನ್ಯವಾದಗಳು.
-ಯಾಕೂಬ್‌ ಖಾದರ್‌ ಗುಲ್ವಾಡಿ

Advertisement

ರಿಸರ್ವೇಷನ್‌ಗೆ ಚಿತ್ರಕ್ಕೆ ರಜತ ಕಮಲ ಪ್ರಶಸ್ತಿ ಬಂದಿತ್ತು
2006ರಲ್ಲಿ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪಡೆದ ಚಲನಚಿತ್ರಗಳ ಮೂಲಕ ಸಿನಿಮಾ ರಂಗ ಪ್ರವೇಶಿಸಿದ ಯಾಕೂಬ್‌ ಖಾದರ್‌ ಗುಲ್ವಾಡಿ ಕನ್ನಡದ ನಿರ್ದೇಶಕ ಡಾ| ಗಿರೀಶ ಕಾಸರವಳ್ಳಿಯವರ “ಗುಲಾಬಿ ಟಾಕೀಸ್‌’ ನಿರ್ದೇಶಕ ನಿಖೀಲ್‌ ಮಂಜು ಲಿಂಗೇಗೌಡ ಅವರ ‘ಹಜ್‌ ಮತ್ತು ಗೆರೆಗಳು’ ಡಾ| ನಾಗತಿಹಳ್ಳಿ ಚಂದ್ರಶೇಖರ ಅವರ “ಇಷ್ಟಕಾಮ್ಯ’ ಮತ್ತು ‘ಇಂಡಿಯ ವರ್ಸಸ್‌ ಇಂಗ್ಲೆಂಡ್‌’ ಸಿನೆಮಾಗಳಿಗೆ ವಸ್ತ್ರ ವಿನ್ಯಾಸ, ಕಲಾ ನಿರ್ದೇಶನ, ನಟನೆಯ ಮೂಲಕ ಕೆಲಸ ಮಾಡಿದ್ದರು. 2016 ರಲ್ಲಿ ತನ್ನದೆ ‘ಗುಲ್ವಾಡಿ ಟಾಕೀಸ್‌’ ಸಂಸ್ಥೆಯ ಮೂಲಕ ಮೊದಲ ಬಾರಿಗೆ ಕುಂದಾಪ್ರ ಕನ್ನಡದಲ್ಲಿ ‘ರಿಸರ್ವೇಶನ್‌’ ಎಂಬ ಸಿನಿಮಾ ಮಾಡಿದ್ದು ರಾಷ್ಟ್ರ ಪ್ರಶಸ್ತಿ (ರಜತ ಕಮಲ) ಪಡೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next