ಹೊಸದಿಲ್ಲಿ : ತ್ರಿವಳಿ ತಲಾಕ್‌ನ ಸಾಂವಿಧಾನಿಕ ಸಿಂಧುತ್ವ ಕುರಿತಾದ ಇಂದು ಮಂಗಳವಾರದ ನಾಲ್ಕನೇ ದಿನದ ಸುಪೀಂ ಕೋರ್ಟ್ ವಿಚಾರಣೆಯಂದು ಅಖೀಲ ಭಾರತ ಮುಸ್ಲಿಂ ಖಾಸಗಿ ಕಾನೂನು ಮಂಡಳಿಯು (AIMPLB) ತ್ರಿವಳಿ ತಲಾಕ್ ಪರ ತನ್ನ ವಾದವನ್ನು ಮಂಡಿಸುತ್ತಾ “ಮುಸ್ಲಿಮರು ತ್ರಿವಳಿ ತಲಾಕ್ ಪದ್ಧತಿಯನ್ನು ಕಳೆದ 1,400 ವರ್ಷಗಳಿಂದ ನಂಬಿಕೆಯ ತಳಹದಿಯಲ್ಲಿ ಅನುಸರಿಸುತ್ತಾ ಬರುತ್ತಿದ್ದಾರೆ’ ಎಂದು ಹೇಳಿತು.
“ಮುಸ್ಲಿಮರಿಗೆ ತ್ರಿವಳಿ ತಲಾಕ್ ಎನ್ನುವುದು ನಂಬಿಕೆಗೆ ಸಂಬಂಧಿಸಿದ ವಿಷಯವಾಗಿದೆ. ಹಿಂದುಗಳಿಗೆ ಆಯೋಧ್ಯೆಯು ರಾಮ ಜನ್ಮಭೂಮಿ ಆಗಿರುವುದು ನಂಬಿಕೆಗೆ ಸಂಬಂಧಿಸಿದ ವಿಷಯ ಹೇಗೋ ಹಾಗೆಯೇ ಮುಸ್ಲಿಮರಿಗೆ ತ್ರಿವಳಿ ತಲಾಕ್ ನಂಬಿಕೆಗೆ ಸಂಬಂಧಿಸಿದ್ದಾಗಿದೆ. ಆದುದರಿಂದ ಇದರಲ್ಲಿ ಸಾಂವಿಧಾನಿಕ ನೈತಿಕತೆಯ ಅಥವಾ ಸಮಾನತೆಯ ಪ್ರಶ್ನೆ ಉದ್ಭವವಾಗುವುದಿಲ್ಲ’ ಎಂದು ಮಾಜಿ ಕೇಂದ್ರ ಕಾನೂನು ಸಚಿವ ಹಾಗೂ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಎಐಎಂಪಿಎಲ್‌ಬಿ ಪರ ವಾದಿಸುತ್ತಾ ಹೇಳಿದರು.
“ತ್ರಿವಳಿ ತಲಾಕ್ ಪದ್ಧತಿಯು ಕ್ರಿ.ಶ. 637ರಿಂದಲೂ ಜಾರಿಯಲ್ಲಿದೆ. ಇದು ಇಸ್ಲಾಮ್‌ಗೆ ತಕ್ಕುದಾದುದಲ್ಲ ಎಂದು ಹೇಳಲು ನಾವ್ಯಾರು? ಮುಸ್ಲಿಮರು ಈ ಪದ್ಧತಿಯನ್ನು ಕಳೆದ 1,400 ವರ್ಷಗಳಿಂದಲೂ ಅನುಸರಿಸಿಕೊಂಡು ಬರುತ್ತಿದ್ದಾರೆ.ಆದುದರಿಂದ ಇದರಲ್ಲಿ ಸಾಂವಿಧಾನಿಕ ನೈತಿಕತೆ ಮತ್ತು ಸಮಾನತೆಯ ಪ್ರಶ್ನೆ ಏಳುವುದಿಲ್ಲ’ ಎಂದು ಸಿಬಲ್ ಹೇಳಿದರು.
ತ್ರಿವಳಿ ತಲಾಕ್ ಹದಿತ್‌ನಲ್ಲೇ ಇದೆ ಮತ್ತು ಇದು ಪ್ರವಾದಿ ಮಹಮ್ಮದರ ಕಾಲಾನಂತರದಲ್ಲಿ ಜಾರಿಗೆ ಬಂದಿರುವುದಾಗಿದೆ ಎಂದು ಸಿಬಲ್ ಹೇಳಿದರು.
ಸುಪ್ರೀಂ ಕೋರ್ಟ್ ವರಿಷ್ಠ ನ್ಯಾಯಮೂರ್ತಿ ಜೆ ಎಸ್ ಖೇಹರ್ ನೇತೃತ್ವದಲ್ಲಿ ಜಸ್ಟಿಸ್ ಕುರಿಯನ್ ಜೋಸೆಫ್, ರೊಹಿನ್‌ಟನ್ ಫಾಲಿ ನಾರಿಮನ್, ಉದಯ್ ಉಮೇಶ್ ಲಲಿತ್ ಮತ್ತು ಎಸ್ ಅಬ್ದುಲ್ ನಜೀರ್ ಅವರನ್ನು ಒಳಗೊಂಡ ಪೀಠದೆದುರು ಎಐಎಂಪಿಎಲ್‌ಬಿ ತ್ರಿವಳಿ ತಲಾಕ್ ಪರವಾಗಿ ತನ್ನ ವಾದವನ್ನು ಮಂಡಿಸುತ್ತಿದೆ.