ಮೈಸೂರು: ತ್ರಿವಿಧ ದಾಸೋಹಿ, ಲಿಂಗಕೈ ಡಾ.ಶಿವಕುಮಾರ ಸ್ವಾಮೀಜಿ 112ನೇ ಜನ್ಮ ದಿನವನ್ನು ಭಕ್ತರು ನಗರದ ಪ್ರಮುಖ ವೃತ್ತಗಳಲ್ಲಿ ಶ್ರದ್ಧಾ-ಭಕ್ತಿಯಿಂದ ಆಚರಿಸಿ ಸಿದ್ಧಗಂಗಾ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸಾರ್ವಜನಿಕರಿಗೆ ಪ್ರಸಾದ ವಿತರಿಸಲಾಯಿತು.
ನಗರದ ಆರ್‌ಟಿಒ ಕಚೇರಿ ಸಮೀಪದ ಶ್ರೀ ಬಸವೇಶ್ವರ ಎಂಟರ್ ಪ್ರೈಸಸ್‌ನಿಂದ ಸಿದ್ಧಗಂಗಾ ಶ್ರೀಗಳ 112ನೇ ಜನ್ಮ ದಿನೋತ್ಸವ ಪ್ರಯುಕ್ತ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ನೂರಾರು ಮಂದಿಗೆ ಪ್ರಸಾದ ವಿತರಿಸುವ ಮೂಲಕ ಶ್ರೀಗಳ ಜನ್ಮ ದಿನ ಆಚರಿಸಿ, ಸಮಾಜಕ್ಕೆ ಶ್ರೀಗಳ ಕೊಡುಗೆಯನ್ನು ಸ್ಮರಿಸಲಾಯಿತು.
ಮೈಸೂರಿನ ಪ್ರಜ್ಞಾವಂತ ನಾಗರಿಕ ವೇದಿಕೆಯ ವತಿಯಿಂದ ಚಾಮುಂಡಿಪುರಂ ವೃತ್ತದಲ್ಲಿರುವ ತಗಡೂರು ರಾಮಚಂದ್ರರಾವ್ ಉದ್ಯಾನದಲ್ಲಿ ವಿವಿಧ ತಳಿಯ ಸಸಿಗಳನ್ನು ನೆಡುವ ಮೂಲಕ ಪರಿಸರ ಗಂಗೆ ಎಂಬ ವಿಶಿಷ್ಠ ಕಾರ್ಯಕ್ರಮದ ಮೂಲಕ ಶ್ರೀಗಳನ್ನು ಸ್ಮರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಕಸಾಪ ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ ಮಾತನಾಡಿ, ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿಯವರು, ಅಕ್ಷರ,ಅನ್ನ, ವಸತಿ ನೀಡುವ ಮೂಲಕ ಕ್ರಾಂತಿ ಮಾಡಿ,111 ವರ್ಷಗಳ ಸಾರ್ಥಕ ಜೀವನ ನಡೆಸಿದ ಅವರು ಪರಿಸರ ಪ್ರೇಮಿಗಳಾಗಿದ್ದರು ಎಂದು ನೆನೆದರು.
ನಗರಪಾಲಿಕೆ ಸದಸ್ಯ ಮಾ.ವಿ.ರಾಮಪ್ರಸಾದ್, ಹೋಟೆಲ್ ಮಾಲಿಕರ ಸಂಘದ ಅಧ್ಯಕ್ಷ ಸಿ.ನಾರಾಯಣ ಗೌಡ, ಅಪೂರ್ವ ಸುರೇಶ್,ವಿಪ್ರ ಸಮುದಾಯದ ಮುಖಂಡರಾದ ಕೆ.ರಘುರಾಂ, ಡಿ.ಟಿ. ಪ್ರಕಾಶ್, ಯೋಗಾನರಸಿಂಹ, ಪ್ರಜ್ಞಾವಂತ ನಾಗರಿಕ ವೇದಿಕೆಯ ಅಧ್ಯಕ್ಷ ಕಡಕೊಳ ಜಗದೀಶ್, ಕಾರ್ಯದರ್ಶಿ ಜಯಸಿಂಹ, ರಂಗನಾಥ್, ಚಕ್ರಪಾಣಿ, ಸುಚೀಂದ್ರ, ಹರೀಶ್ ನಾಯ್ಡು, ಪರಿವರ್ತನಂ ಸಂಸ್ಥೆಯ ವಿನಯ್ ಕಣಗಾಲ್ ಹಾಜರಿದ್ದರು.