ಪುಣೆ : 2009ರ ಅಕ್ಟೋಬರ್‌ನಲ್ಲಿ ನಡೆದಿದ್ದ ಸಾಫ್ಟ್ ವೇರ್ ಇಂಜಿನಿಯರ್ ನಯನಾ ಪೂಜಾರಿ ಅಪಹರಣ, ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿನ ಸೆಶನ್ಸ್ ನ್ಯಾಯಾಲಯ ಮೂವರು ಆರೋಪಿಗಳನ್ನು ಅಪರಾಧಿಗಳೆಂದು ಘೋಷಿಸಿದೆ.
ಈ ಕೇಸಿನಲ್ಲಿ ಮಾಫಿ ಸಾಕ್ಷಿಯಾಗಿ ಪರಿವರ್ತಿತನಾದ ಐದನೇ ಆರೋಪಿಯನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ.
ನಾಳೆ ಮಂಗಳವಾರ ಬೆಳಗ್ಗೆ 11 ಗಂಟೆಯ ಹೊತ್ತಿಗೆ ಹೆಚ್ಚುವರಿ ನ್ಯಾಯಾಧೀಶ ಎಲ್ ಎಲ್ ಏಣಕರ್ ಅವರು ಅಪರಾಧಿಗಳ ಶಿಕ್ಷೆಯ ಪ್ರಮಾಣವನ್ನು ಘೋಷಿಸಲಿದ್ದಾರೆ. ಶಿಕ್ಷೆಯ ಪ್ರಮಾಣವನ್ನು ನಿರ್ಧರಿಸುವ ನಿಟ್ಟಿನಲ್ಲಿ ಇಂದು ನ್ಯಾಯಾಲಯವು ಪಾಸಿಕ್ಯೂಶನ್ ಮತ್ತು ಡಿಫೆನ್ಸ್ ನ ವಾದ ಪ್ರತಿವಾದವನ್ನು ಆಲಿಸಿತು.
ನಯನಾ ಪೂಜಾರಿ ಅಪಹರಣ, ಅತ್ಯಾಚಾರ ಮತ್ತು ಕೊಲೆ ಕೇಸಿನಲ್ಲಿ ಅಪರಾಧಿಗಳೆಂದು ನ್ಯಾಯಾಲಯ ಘೋಷಿಸಿರುವ ಮೂವರು ಆರೋಪಿಗಳೆಂದರೆ ಯೋಗೇಶ್ ರಾವತ್, ಮಹೇಶ್ ಠಾಕೂರ್ ಮತ್ತು ವಿಶ್ವಾಸ್ ಕದಂ.
ಪುಣೆಯ ಖರಾಡಿ ಎಂಬಲ್ಲಿನ ಸಾಫ್ಟ್ ವೇರ್ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದ ನಯನಾ ಪೂಜಾರಿ ಅವರನ್ನು 2009ರ ಅಕ್ಟೋಬರ್ 7ರಂದು ಸಂಜೆ ಖರಾಡಿ – ಮುಂಧ್ವಾ ಬೈಪಾಸ್‌ನಲ್ಲಿ ಆಕೆ ಆಫೀಸಿನಿಂದ ಮನೆಗೆ ಹೋಗುವ ಕಂಪೆನಿ ವಾಹನವನ್ನು ಕಾಯುತ್ತಿದ್ದಾಗ ಅಪಹರಿಸಲಾಗಿತ್ತು. ಎರಡು ದಿನಗಳ ಬಳಿಕ ಆಕೆಯ ವಿರೂಪಗೊಂಡ ಮೃತದೇಹವು ಖೇಡ್ ತಾಲೂಕಿನ ಝರೇವಾಡಿ ಅರಣ್ಯದಲ್ಲಿ ಪತ್ತೆಯಾಗಿತ್ತು.
ನಯನಾ ಪೂಜಾರಿ ಅವರನ್ನು ಆರೋಪಿಗಳು ಅಪಹರಿಸಿ, ಅತ್ಯಮಾನುಷ ರೀತಿಯಲ್ಲಿ ಸಾಮೂಹಿಕ ಅತ್ಯಾಚಾರಗೈದು ಆಕೆಯನ್ನು ಕೊಂದಿದ್ದು ಈ ಘೋರ ಕೃತ್ಯವು ಅಪರೂಪದಲ್ಲೇ ಅಪರೂಪದ್ದಾಗಿರುವುದರಿಂದ ಆರೋಪಿಗಳು ಗಲ್ಲು ಶಿಕ್ಷೆಗೆ ಅರ್ಹರಾಗಿದ್ದಾರೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಹರ್ಷದ್ ನಿಂಬಾಳ್ಕರ್ ಹೇಳಿದ್ದಾರೆ.