ಈಗಾಗಲೇ ಕನ್ನಡದಲ್ಲಿ ನೈಜ ಘಟನೆಯ ಚಿತ್ರಗಳು ಸಾಕಷ್ಟು ಬಂದಿವೆ. ಆ ಸಾಲಿಗೆ ಈಗ “ತ್ರಿನೇತ್ರಂ’ ಚಿತ್ರ ಕೂಡ ಸೇರಿಕೊಂಡಿದೆ. ಇದು ಹೊಸಬರೇ ಸೇರಿ ಮಾಡುತ್ತಿರುವ ಸಿನಿಮಾ. ಈ ಮೂಲಕ ನಿರ್ದೇಶಕ, ನಿರ್ಮಾಪಕರು ಸೇರಿದಂತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿರುವ ಪ್ರತಿಯೊಬ್ಬರಿಗೂ ಇದು ಮೊದಲ ಅನುಭವ. ತಮ್ಮ ಚೊಚ್ಚಲ ಸಿನಿಮಾ ಬಗ್ಗೆ ಹೇಳಿಕೊಳ್ಳಲು ಚಿತ್ರತಂಡದ ಜೊತೆ ಆಗಮಿಸಿದ್ದ ನಿರ್ದೇಶಕ ಮನು ಕುಮಾರ್ ಹೇಳಿದ್ದಿಷ್ಟು, “ಇದು ನನ್ನ ಮೊದಲ ಚಿತ್ರ. “ತ್ರಿನೇತ್ರಂ’ ಅಂದರೆ ಕಣ್ಣು ಅನ್ನೋದು ಎಲ್ಲರಿಗೂ ಗೊತ್ತು. ನಾಯಕ ಒಂದು ಕಣ್ಣಾದರೆ, ನಾಯಕಿ ಮತ್ತೂಂದು ಕಣ್ಣು. ಇನ್ನೊಂದು ಕಣ್ಣಾಗಿ ಇಲ್ಲಿ ಮಂಗಳಮುಖೀ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಮಡಿಕೇರಿಯಲ್ಲಿ 1992 ರಲ್ಲಿ ನಡೆದಂತಹ ನೈಜ ಘಟನೆ. ಅದೇ ಈಗ ಸಿನಿಮಾ ಆಗುತ್ತಿದೆ. ಕಥೆ ಬಗ್ಗೆ ಹೇಳುವುದಾದರೆ, ಹೀರೋ ಅಧಿಕಾರಿ ಆಗುವ ಆಸೆ ಇಟ್ಟುಕೊಂಡಿರುತ್ತಾನೆ. ಆದರೆ, ಫ್ಯಾಮಿಲಿಯಲ್ಲಿ ಒಂದಷ್ಟು ಸಮಸ್ಯೆ ಎದುರಾಗುತ್ತವೆ. ಅಲ್ಲಿಂದ ಅವನು ಸಿಟಿಗೆ ಬರುತ್ತಾನೆ. ಆ ಸಿಟಿಯಲ್ಲಿ ಅವನ ಆಸೆಗೆ ಯಾರು ಆಸರೆಯಾಗುತ್ತಾರೆ ಅನ್ನೋದೇ ಕಥೆ. ಮಂಡ್ಯ, ಮೈಸೂರು ಹಾಗು ಮಡಿಕೇರಿ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ’ ಎಂಬ ವಿವರ ಕೊಟ್ಟರು ನಿರ್ದೇಶಕ ಮನು.
ಚಿತ್ರಕ್ಕೆ ಕವಿತಾಗೌಡ ನಾಯಕಿಯಾಗಿ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲ, ಈ ಚಿತ್ರಕ್ಕೆ ನಿರ್ಮಾಣವೂ ಅವರದೇ. ಅವರಿಲ್ಲಿ ಕಾಲೇಜ್ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರಿಗೂ ಇದು ಮೊದಲ ಅನುಭವವಂತೆ. ಕಥೆ ಚೆನ್ನಾಗಿದೆ ಎಂಬ ಕಾರಣಕ್ಕೆ ಅವರೇ ಹಣ ಹಾಕಿ, ನಾಯಕಿಯಾಗುತ್ತಿದ್ದಾರೆ.
ಚಿತ್ರದಲ್ಲಿ ಅರ್ಪಿತ್ ಗೌಡ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದು ಅವರಿಗೆ ಇದು ಮೂರನೇ ಸಿನಿಮಾ. ಈ ಹಿಂದೆ “ಮಂತ್ರಂ’ ಮತ್ತು “ಆವಂತಿಕ’ ಚಿತ್ರದಲ್ಲಿ ನಟಿಸಿದ್ದಾರೆ. ಅವರಿಗೂ ಇಲ್ಲಿ ಕಾಲೇಜ್ ಹುಡುಗನ ಪಾತ್ರ ಸಿಕ್ಕಿದೆಯಂತೆ. ಕಷ್ಟಪಟ್ಟು ಓದುವ ಹುಡುಗನಿಗೆ ಅಧಿಕಾರಿ ಆಗುವ ಆಸೆ ಇರುತ್ತೆ. ಆದರೆ, ಒಂದಷ್ಟು ಸಮಸ್ಯೆಗಳು ಎದುರಾದಾಗ, ಅವನು ಅಧಿಕಾರಿ ಆಗುತ್ತಾನಾ ಇಲ್ಲವಾ ಅನ್ನೋದು ಕಥೆ’ ಎಂದರು ಅರ್ಪಿತ್‌ಗೌಡ.
ರಮೇಶ್ ಪಂಡಿತ್ ಅವರಿಲ್ಲಿ ನಾಯಕಿಯ ತಂದೆ ಪಾತ್ರ ಮಾಡಿದ್ದಾರಂತೆ. “ನಿರ್ದೇಶಕರು ಹಳೆಯ ಪರಿಚಯ ಆಗಿದ್ದರಿಂದ ಫೋನ್ ಮಾಡಿ, ಚಿತ್ರದಲ್ಲೊಂದು ಪಾತ್ರವಿದೆ. ಮಾಡಬೇಕು ಅಂದರಂತೆ. ಕಥೆ, ಪಾತ್ರ ಏನನ್ನೂ ಕೇಳದೆ, ಒಪ್ಪಿದ್ದೇನೆ. ಸಿನಿಮಾ ಚೆನ್ನಾಗಿ ಮಾಡುತ್ತಾರೆ ಎಂಬ ನಂಬಿಕೆ ನನಗಿದೆ’ ಎಂಬುದು ರಮೇಶ್ ಪಂಡಿತ್ ಅವರ ಮಾತು.
ಸುಶಾಂತ್ ಎಂಬ ಹೊಸ ಪ್ರತಿಭೆ ಇಲ್ಲಿ ಮಂಗಳಮುಖಿ ಪಾತ್ರ ನಿರ್ವಹಿಸುತ್ತಿರುವುದಾಗಿ ಹೇಳಿಕೊಂಡರು. “ನನಗೂ ಇದು ಮೊದಲ ಅನುಭವ. ಮಂಗಳ ಮುಖೀ ಪಾತ್ರ ಚಾಲೆಂಜ್ ಆಗಿದೆ. ಈಗಾಗಲೇ ಅವರ ಚಲನವಲನ ಗಮನಿಸಿ, ಒಂದಷ್ಟು ಮಂಗಳ ಮುಖೀ ಪಾತ್ರಗಳಿರುವ ಸಿನಿಮಾ ವೀಕ್ಷಿಸಿದ್ದೇನೆ. ಸಾಧ್ಯವಾದಷ್ಟು ಪಾತ್ರಕ್ಕೆ ಜೀವ ತುಂಬುವ ಪ್ರಯತ್ನ ಮಾಡುವುದಾಗಿ ಹೇಳಿಕೊಂಡರು ಸುಶಾಂತ್.
ಚಿತ್ರಕ್ಕೆ ವಿನಯ್ ಕೊಪ್ಪ ಸಂಭಾಷಣೆ ಬರೆದಿದ್ದಾರೆ. ನಿರ್ಮಾಪಕಿ ಸಹೋದರ ಗೋವಿಂದರಾಜ್ ಇಲ್ಲಿ ರಾಜಕಾರಣಿ ಪಾತ್ರ ಮಾಡುತ್ತಿದ್ದಾರೆ. ಅದು ನೆಗೆಟಿವ್ ಶೇಡ್ ಎಂಬುದು ಅವರ ಮಾತು. ಬಹುತೇಕ ಹೊಸಬರು ವೇದಿಕೆ ಮೇಲೇರಿ, “ತ್ರಿನೇತ್ರಂ’ ಕುರಿತು ಹೇಳಿಕೊಳ್ಳುವ ಹೊತ್ತಿಗೆ, ನಿರ್ಮಾಪಕ ಭಾ.ಮ.ಹರೀಶ್ ಪೋಸ್ಟರ್ ಲಾಂಚ್ ಮಾಡಿದರು.ಅಲ್ಲಿಗೆ ಸಿನಿಮಾದ ಮಾತುಕತೆಗೂ ಬ್ರೇಕ್ ಬಿತ್ತು.