ಬೆಂಗಳೂರು: ರಾಜಧಾನಿ ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಮೈಸೂರು ಮಾದರಿಯ “ಟ್ರಿಣ್ ಟ್ರಿಣ್’ ಬಾಡಿಗೆ ಸೈಕಲ್ ಯೋಜನೆ ಜಾರಿಗೊಳಿಸಲು ಮುಂದಾಗಿರುವ ಬಿಬಿಎಂಪಿ, ಯೋಜನೆಗಾಗಿ 6 ಸಾವಿರ ಸೈಕಲ್ ಖರೀದಿಸಲು ಟೆಂಡರ್ ಆಹ್ವಾನಿಸುತ್ತಿದೆ.
ವಾಹನ ದಟ್ಟಣೆ ಹಾಗೂ ವಾಯು ಮಾಲಿನ್ಯ ಪ್ರಮಾಣ ನಿಯಂತ್ರಿಸುವ ಉದ್ದೇಶದಿಂದ ಬಿಬಿಎಂಪಿ ಹಾಗೂ ನಗರ ಭೂಸಾರಿಗೆ ನಿರ್ದೇಶನಾಲಯ (ಡಲ್ಟ್) ಜಂಟಿಯಾಗಿ ಯೋಜನೆ ಜಾರಿಗೊಳಿಸುತ್ತಿವೆ. ಯೋಜನೆ ಜಾರಿ ಕುರಿತಂತೆ ಈಗಾಗಲೇ ಅಧ್ಯಯನ ನಡೆಸಿರುವ ಡಲ್ಟ್ ಅಧಿಕಾರಿಗಳು, ಬಾಡಿಗೆ ಸೈಕಲ್ ನಿಲುಗಡೆ ತಾಣ ನಿರ್ಮಿಸಲು 345 ಜಾಗಗಳನ್ನು ಗುರುತಿಸಿದ್ದು, ಪಾಲಿಕೆಗೆ ವರದಿ ಸಲ್ಲಿಸಿದ್ದಾರೆ.
ಡಲ್ಟ್ ರೂಪಿಸಿರುವ ಯೋಜನೆಯಂತೆ ಪ್ರತಿ 250 ರಿಂದ 350 ಮೀಟರ್ ಅಂತರದಲ್ಲಿ ಒಂದು ಸೈಕಲ್ ನಿಲುಗಡೆ ತಾಣ ನಿರ್ಮಿಸಲಾಗುತ್ತದೆ. ಅದರಂತೆ ಸುಮಾರು 25 ಕಿ.ಮೀ. ವ್ಯಾಪ್ತಿಯಲ್ಲಿ 345 ಸೈಕಲ್ ನಿಲುಗಡೆ ತಾಣಗಳು ನಿರ್ಮಾಣವಾಗಲಿವೆ. ಪಾಲಿಕೆಯಿಂದ ಡಲ್ಟ್ ಗುರುತಿಸಿರುವ ಜಾಗಗಳು ಹಸ್ತಾಂತರ ಕಾರ್ಯ ಬಾಕಿ ಉಳಿದಿದ್ದು, ಅದಾದ ಕೂಡಲೇ ಸೈಕಲ್ ನಿಲುಗಡೆ ತಾಣ ನಿರ್ಮಾಣ ಕಾರ್ಯಕ್ಕೆ ಟೆಂಡರ್ ಕರೆಯಲು ಸಿದ್ಧತೆ ನಡೆಸಲಾಗಿದೆ.
ಪ್ರತಿ ಗಂಟೆಗೆ 5 ರೂ. ನಿಗದಿಗೆ ಚಿಂತನೆ: ನಗರದಲ್ಲಿ ನಿತ್ಯ ಲಕ್ಷಾಂತರ ಜನರು ಸಂಚಾರ ಮಾಡುವುದರಿಂದಾಗಿ ಸೈಕಲ್‌ಗಳ ಕೊರತೆ ಉಂಟಾಗದಿರಲು 6 ಸಾವಿರ ಸೈಕಲ್‌ಗಳ ಖರೀದಿಸಲು ಬಿಬಿಎಂಪಿ ನಿರ್ಧರಿಸಿದೆ. ಅದರಂತೆ ಪ್ರತಿ ನಿಲುಗಡೆ ತಾಣದಲ್ಲಿ 14-15 ಸೈಕಲ್‌ಗಳು ಇರಲಿದ್ದು, ಹೆಚ್ಚುವರಿಯಾಗಿ ಒಂದು ಸಾವಿರ ಸೈಕಲ್‌ಗಳನ್ನು ಖರೀದಿಸಲಾಗುತ್ತಿದೆ. ಜತೆಗೆ ಸೈಕಲ್‌ಗಳ ಬಾಡಿಗೆಯನ್ನು ಪ್ರತಿ ಗಂಟೆಗೆ 5 ರೂ. ನಿಗದಿಪಡಿಸುವ ಕುರಿತಂತೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.
ಸ್ಮಾರ್ಟ್ ಕಾರ್ಡ್ ಪರಿಚಯ: ನಮ್ಮ ಮೆಟ್ರೋದಲ್ಲಿರುವಂತೆ ಸ್ಮಾರ್ಟ್ ಕಾರ್ಡ್‌ನ್ನು ಪರಿಚಯಿಸಲು ಅಧಿಕಾರಿಗಳು ಯೋಜನೆ ರೂಪಿಸಿದ್ದಾರೆ. ಮೊದಲ ಬಾರಿಗೆ ಸೈಕಲ್ ಬಾಡಿಗೆ ಪಡೆಯುವ ವೇಳೆ ಸಾರ್ವಜನಿಕರು ತಮ್ಮ ಗುರುತಿನ ಚೀಟಿ ಸಲ್ಲಿಸಿ ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳಬೇಕಾಗುತ್ತದೆ. ಪ್ರತಿ ಬಾರಿಗೆ ಸೈಕಲ್ ತೆಗೆದುಕೊಂಡು ಹೋಗುವ ಮುನ್ನ ನಿಲುಗಡೆ ತಾಣದಲ್ಲಿನ ಯಂತ್ರದಲ್ಲಿ ತಮ್ಮ ಕಾರ್ಡ್ ಸ್ವೆ„ಪ್ ಮಾಡಿ ಸೈಕಲ್ ತೆಗೆದುಕೊಂಡು ಹೋಗಬೇಕಾಗುತ್ತದೆ.
ಕದಿಯಲು ಅವಕಾಶವಿಲ್ಲ: ಬಾಡಿಗೆ ನೀಡಲಾಗುವ ಸೈಕಲ್‌ಗಳ ಭದ್ರತಾ ದೃಷ್ಟಿಯಿಂದ ಪಾಲಿಕೆಯ ಅಧಿಕಾರಿಗಳು ಪ್ರತಿಯೊಂದು ಸೈಕಲ್‌ಗೂ ಜಿಪಿಎಸ್ ಅಳವಡಿಸಲು ತೀರ್ಮಾನಿಸಿದ್ದಾರೆ. ಹೀಗಾಗಿ ಯಾರಾದರೂ ಸೈಕಲ್‌ನ್ನು ಕಳವು ಮಾಡಲು ಯತ್ನಿಸಿದರೂ ಸುಲಭವಾಗಿ ಸಿಕ್ಕಿಹಾಕಿಕೊಳ್ಳಲಿದ್ದಾರೆ. ಒಟ್ಟಾರೆ ಸೈಕಲ್‌ಗಳ ಖರೀದಿ ಹಾಗೂ ಯೋಜನೆ ಜಾರಿಗೆ 60 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಸೈಕಲ್ ಪಥ ನಿರ್ಮಿಸಿ ಕೊಡಿ: ಬಿಬಿಎಂಪಿ ಕೇಂದ್ರ ವ್ಯಾಪಾರಿ ವಲಯ ಯೋಜನೆ ಜಾರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಈಗಾಗಲೇ ಡಲ್ಟ್ ಅಧಿಕಾರಿಗಳು ಸೂಕ್ತ ಜಾಗಗಳನ್ನು ಗುರುತಿಸಿದ್ದಾರೆ. ಯೋಜನೆ ಜಾರಿಗೆ ಅಗತ್ಯ ವ್ಯವಸ್ಥೆಯ ಜವಾಬ್ದಾರಿ ಪಾಲಿಕೆಯದ್ದಾಗಿರುವುದರಿಂದ ಡಲ್ಟ್ ಅಧಿಕಾರಿಗಳು ಜಾಗಗಳ ಪಟ್ಟಿಯನ್ನು ಪಾಲಿಕೆಗೆ ನೀಡಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಯೋಜನೆ ಸಮಪರ್ಕವಾಗಿ ಜಾರಿಯಾಗಬೇಕಾದರೆ 125 ಕಿ.ಮೀ. ಉದ್ದದ ಸೈಕಲ್ ಪಥದ ಅವಶ್ಯಕತೆಯಿದೆ. ಹೀಗಾಗಿ, ಸೈಕಲ್ ಪಥ ನಿರ್ಮಿಸಿಕೊಡುವಂತೆ ಪಾಲಿಕೆಯನ್ನು ಕೋರಿದ್ದಾರೆ.