Advertisement

ಮನ್‌ ಕಿ ಬಾತ್‌ ನನ್ನದಲ್ಲ, ಅದು ಜನರ ಅಂತರಂಗ​​​​​​​

07:05 AM Sep 25, 2017 | Team Udayavani |

ನವದೆಹಲಿ: ಮನ್‌ ಕಿ ಬಾತ್‌’ ಎಂಬುದು ರೇಡಿಯೊ ಕಾರ್ಯಕ್ರಮವಷ್ಟೇ ಅಲ್ಲ. ನನ್ನ ಮನದಾಳದ ಅಭಿಪ್ರಾಯ ಹೇಳಿಕೊಳ್ಳುವ ವೇದಿಕೆಯೂ ಅಲ್ಲ. ರಾಜಕೀಯದಿಂದ ಹೊರತಾಗಿ ನಡೆಯುವ, ಜನಾ  ಭಿಪ್ರಾಯಗಳನ್ನು ಹೇಳಿಕೊಳ್ಳುವ ಒಂದು ಪ್ರಭಾವಶಾಲಿ ಮಾಧ್ಯಮ. ಭಾರತ ತನ್ನ ಸಕಾರಾತ್ಮಕವಾದ ಶಕ್ತಿಯನ್ನು ಪ್ರದರ್ಶಿಸಲು ಇರುವ ಒಂದೊಳ್ಳೆಯ ಮಾರ್ಗ’ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.

Advertisement

ಮನ್‌ ಕಿ ಬಾತ್‌ ಕುರಿತು ಪ್ರತಿಪಕ್ಷಗಳು ಮಾಡುತ್ತಿರುವ ಆರೋಪಗಳಿಗೆ ತಕ್ಕ ಪ್ರತ್ಯುತ್ತರ ಕೊಟ್ಟ ಪ್ರಧಾನಿ ಮೋದಿ, “ಇದು ನನ್ನ ಮನದ ಮಾತು ಅಲ್ಲ. ದೇಶದ ಜನರು ಆ್ಯಪ್‌, ಇಮೇಲ್‌, ಫೋನ್‌ ಮೂಲಕ ನೀಡಿರುವ ವಿಚಾರಗಳನ್ನೇ ನಾನು ರೇಡಿಯೋ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ್ದೇನೆ. ಇದರಿಂದಾಗಿ, ಜನರೊಂದಿಗೆ ಬೆರೆಯುವ ವಿಶಿಷ್ಟ ಅವಕಾಶ ನನಗೆ ಸಿಕ್ಕಿದೆ’ ಎಂದಿದ್ದಾರೆ.

2014, ಅಕ್ಟೋಬರ್‌ 2ರಂದು ಆರಂಭಿಸಿದ “ಮನ್‌ ಕಿ ಬಾತ್‌’ ಕಾರ್ಯಕ್ರಮಕ್ಕೆ ಮೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಭಾನುವಾರ 36ನೇ ಆವೃತ್ತಿಯಲ್ಲಿ ಅವರು ಈ ಬಗ್ಗೆಯೇ ಮಾತನಾಡಿದರು. ನವ ಭಾರತದ ಕನಸು ಹೊತ್ತು ನಾವು ಪರಿಚಯಿಸಿದ ಅನೇಕ ಮಹತ್ವಾಕಾಂಕ್ಷೆಯ ಕಾರ್ಯಕ್ರಮಗಳಲ್ಲಿ “ಮನ್‌ ಕಿ ಬಾತ್‌’ ಕೂಡ ಒಂದಾಗಿದೆ.

ಈವರೆಗಿನ ಎಲ್ಲಾ ಮನ್‌ ಕಿ ಬಾತ್‌ ಕೂಡ ರಾಜಕೀಯದಿಂದ ಹೊರತಾಗಿಯೇ ಇರುವಂತೆ ನೋಡಿ ಕೊಂಡಿದ್ದೇನೆ. ಈ 3 ವರ್ಷಗಳಲ್ಲಿ ಕೋಟ್ಯಂತರ ಜನರು ನಾನಾ ರೀತಿಯಿಂದ ತಮ್ಮ ಅಭಿಪ್ರಾಯ ಹಂಚಿ ಕೊಂಡಿದ್ದಾರೆ. ಸಲಹೆಗಳನ್ನು ನೀಡಿದ್ದಾರೆ. ಕಾರ್ಯಕ್ರಮ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ಎನ್ನುವುದಕ್ಕೆ ಜನಸ್ಪಂದನೆಯೇ ಉತ್ತರ ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲ, ಕಾರ್ಯಕ್ರಮದ ಕುರಿತಾಗಿ ವಿಜ್ಞಾನಿಗಳು, ವಿಶ್ವವಿದ್ಯಾಲಯಗಳು, ಸಂಶೋಧನೆ ಹಾಗೂ ಮಾಧ್ಯಮ ತಜ್ಞರು ವಿಶ್ಲೇಷಣೆ, ವಿಮರ್ಶೆಗಳನ್ನು ಹಮ್ಮಿಕೊಳ್ಳುತ್ತಾರೆ. ಕಾರ್ಯಕ್ರಮದಲ್ಲಿ ವ್ಯಕ್ತಗೊಂಡ ಧನಾತ್ಮಕ ಹಾಗೂ ಋಣಾತ್ಮಕ ಅಂಶಗಳ ಬಗ್ಗೆ ಚರ್ಚಿಸುತ್ತಾರೆ. ಇದು ಸಾಕಷ್ಟು ಸಹಕಾರಿ ಆಗಲಿದೆ ಎಂದು ಹೇಳಿದ್ದಾರೆ.

Advertisement

30 ನಿಮಿಷಗಳ ಕಾಲ ಪ್ರಸಾರವಾದ “ಮನ್‌ ಕಿ ಬಾತ್‌’ ನಲ್ಲಿ ಬೇರೆ ಬೇರೆ ಯೋಜನೆಗಳ ಬಗ್ಗೆಯೂ ಮೋದಿ ಮಾತನಾಡಿದರು. ಇದೇ ವೇಳೆ ಸ್ವತ್ಛ ಭಾರತ ಅಭಿಯಾನದ ಕುರಿತು ಮೆಲುಕು ಹಾಕಿದರು. ದೇಶದಲ್ಲಿ ನಡೆಯಲಿರುವ 17 ವಯೋಮಿತಿಯವರ ಫಿಫಾ ವಿಶ್ವಕಪ್‌ ಫ‌ುಟ್ಬಾಲ್‌ ಬಗ್ಗೆಯೂ ಪ್ರಸ್ತಾಪಿಸಿದರು.

ಜನಾಭಿಪ್ರಾಯಗಳೇ ಶ್ರೀರಕ್ಷೆ
ಜನರು ಅಂತರಾಳದಲ್ಲಿನ ಅಭಿಪ್ರಾಯಗಳನ್ನು ಇಮೇಲ್‌, ದೂರವಾಣಿ, ಮೈಗೋವ್‌ ಹಾಗೂ ನರೇಂದ್ರ ಮೋದಿ ಅಪ್ಲಿಕೇಷನ್‌ (ಆ್ಯಪ್‌) ಮೂಲಕ ಕಳುಹಿಸುತ್ತಾರೆ. ಆಡಳಿತ ಸುಧಾರಣೆ, ಯೋಜನೆ ಸೇರಿ ವೈಯಕ್ತಿವಾದ ಅನೇಕ ಸಲಹೆಗಳೂ ಬರುತ್ತವೆ. ಇವೆಲ್ಲವೂ ಸಾಕಷ್ಟು ಸಹಕಾರಿ ಆಗಲಿವೆ. ಜನರ ಅಪೇಕ್ಷೆ ಗಳನ್ನು ತಿಳಿದುಕೊಳ್ಳಲು ಸಾಧ್ಯವಾಗಿದೆ ಎಂದಿದ್ದಾರೆ.

“ಖಾದಿ’ ಬಟ್ಟೆಯಷ್ಟೇ ಅಲ್ಲ, ಅದು ಅಭಿಯಾನ
“”ಖಾದಿ ಕೇವಲ ಬಟ್ಟೆಯಲ್ಲ. ಅದೊಂದು ಅಭಿಯಾನ. ಜನರಲ್ಲಿ ಇಂದು ಖಾದಿಯ ಬಗ್ಗೆ ಗೌರವ, ಆಸಕ್ತಿ ಇದೆ. ಹೀಗಾಗಿಯೇ ಖಾದಿ ಇಂದಿಗೂ ನಿಷ್ಕ್ರಿಯಗೊಂಡಿಲ್ಲ. ಖಾದಿಗಿರುವ ಜನಪ್ರಿಯತೆ ಹಾಗೆಯೇ ಇದೆ. ಮನೆಯಲ್ಲಿ ರುವ ಉಳಿದ ಬಟ್ಟೆಗಳ ಜತೆ ಖಾದಿಯೂ ಒಂದಿರಲಿ.” ಮಹಾತ್ಮ ಗಾಂಧಿ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಖಾದಿ ಉಡುಪುಗಳ ಬಗ್ಗೆ ವಿವರಿಸಿದ ಮೋದಿ ಅವರು, “”ದೇಶದಲ್ಲಿ ಖಾದಿ ಬಳಕೆದಾರರು ಹೆಚ್ಚುತ್ತಿದ್ದಾರೆ. ಇದರಿಂದ ಖಾದಿ ಉದ್ಯಮಕ್ಕೆ ಉತ್ತಮ ಪ್ರೋತ್ಸಾಹ ಸಿಗುತ್ತಿದೆ. ಆ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳೂ ಹೆಚ್ಚುತ್ತಿವೆ. ಹೀಗೆ ಖಾದಿ ಅಭಿಯಾನ ಮುಂದುವರಿಯಲಿ” ಎಂದರು. ಇದೇ ವೇಳೆ, ಅ.2ರಿಂದ ಖಾದಿ ವಸ್ತ್ರಗಳು ರಿಯಾಯಿತಿ ದರದಲ್ಲಿ ಲಭ್ಯವಾಗಲಿವೆ. ಇದರ ಲಾಭ ಪಡೆದುಕೊಳ್ಳಿ ಎಂದು ಕಿವಿಮಾತು ಹೇಳಿದರು.

ಮನ್‌ ಕಿ ಬಾತ್‌ ಎಂಬುದು ಏಕಮುಖದ ಸಂಭಾಷಣೆಯಾಗಿದೆ. ಮೋದಿ ಅವರು ಇದರಲ್ಲಿ ನಿರುದ್ಯೋಗ, ತೈಲ ದರ ಏರಿಕೆ, ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ, ಗಡಿ ಸಮಸ್ಯೆ, ಮಕ್ಕಳ ಮೇಲಿನ ಲೈಂಗಿಕ ಶೋಷಣೆಯಂಥ ವಿಚಾರಗಳ ಬಗ್ಗೆ ಮಾತನಾಡಿದ್ದೇ ಇಲ್ಲ.
– ಅಜಯ್‌ ಕುಮಾರ್‌, ಕಾಂಗ್ರೆಸ್‌ ವಕ್ತಾರ

Advertisement

Udayavani is now on Telegram. Click here to join our channel and stay updated with the latest news.

Next