ಚಿತ್ರದುರ್ಗ: ಬಡವರು ಯಾರೇ ಬಗರ್ ಹುಕುಂ ಜಮೀನು ಸಾಗುವಳಿ ಮಾಡಿದ್ದರೂ ಅವರಿಗೆ ಕಾನೂನು ಮಿತಿಯನ್ನು ಪರಿಶೀಲಿಸಿ ಭೂಮಿ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಭರವಸೆ ನೀಡಿದರು.
ನಗರದ ಪ್ರವಾಸಿಮಂದಿರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಗರ್‌ಹುಕುಂ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಗರಸಭೆಯ 5 ಕಿಮೀ ವ್ಯಾಪ್ತಿಯೊಳಗೆ ಭೂಮಿ ನೀಡುವಂತಿಲ್ಲ ಎಂಬ ನಿಯಮವಿದೆ. ಭೂಮಿ ಮಂಜೂರು ಮಾಡುವ ಕುರಿತು ಈ ವರ್ಷದ ನಿಯಮಾವಳಿಗಳು ಇನ್ನೂ ಬಂದಿಲ್ಲ. ಹಾಗಾಗಿ ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು. ನಗರದ ಸುತ್ತಮುತ್ತಲಿನ ಹಳ್ಳಿಗಳಾದ ಕುಂಚಿಗನಾಳ್, ಇಂಗಳದಾಳ್,ಮದಕರಿಪುರ, ಪಿಳ್ಳೆಕೆರೇನಹಳ್ಳಿ, ಜೋಳಗಟ್ಟ ಸೇರಿದಂತೆ ಅನೇಕ ಕಡೆಗಳಲ್ಲಿ ಜನತೆ ಭೂಮಿ ಸಾಗುವಳಿ ಮಾಡಿದ್ದಾರೆ. ಅವರಿಗೆ ನಿಯಮ ಯಾವ ರೀತಿ ಅನ್ವಯಿಸುತ್ತದೆ ಎಂಬುದನ್ನು ಪರಿಶೀಲಿಸಿ ನಂತರ ಭೂಮಿ ಮಂಜೂರು ಮಾಡುವ ಕುರಿತು ಚಿಂತನೆ ನಡೆಸಲಾಗುವುದು ಎಂದರು.
ಕಳೆದ 8-10 ವರ್ಷಗಳಿಂದ ಕೇವಲ 50-60 ಅರ್ಜಿಗಳು ಮಾತ್ರ ಬಾಕಿ ಇದ್ದವು. ಕಳೆದ 2-3 ವರ್ಷಗಳಿಂದ ಈಚೆಗೆ ಸಾಕಷ್ಟು ಜನರು ಅರ್ಜಿ ಸಲ್ಲಿಸಿದ್ದಾರೆ. ಚಿತ್ರದುರ್ಗ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ 1075 ಅರ್ಜಿಗಳು ಹಾಗೂ ಹಿರೇಗುಂಟನೂರು ಹೋಬಳಿ ವ್ಯಾಪ್ತಿಯಿಂದ 1421 ಅರ್ಜಿಗಳು ಸಲ್ಲಿಕೆಯಾಗಿವೆ. ಈಗ ಸರ್ಕಾರ ಅರ್ಜಿ ಸಲ್ಲಿಕೆ ಅವಧಿಯನ್ನು ವಿಸ್ತರಿಸಿದೆ. ಹಾಗಾಗಿ ಅರ್ಜಿ ಸಲ್ಲಿಸದಿದ್ದವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿರುವವರು ಏನಾದರೂ ತಪ್ಪಿದ್ದರೆ ಸರಿಪಡಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಅಕ್ರಮ-ಸಕ್ರಮ ಯೋಜನೆಯಡಿ ಬಗರ್‌ಹುಕುಂ ಸಾಗುವಳಿದಾರರಿಗೆ ಭೂಮಿ ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗಿದೆ. ಅದರಂತೆ ಇದೇ ಮೊದಲ ಬಾರಿಗೆ ಬಗರ್ ಹುಕುಂ ಸಮಿತಿ ರಚಿಸಿ ಸಂಬಧಿಸಿದ ಅಧಿಕಾರಿಗಳ ಜೊತೆ ಸಭೆ ನಡೆಸಲಾಗಿದೆ. ಅರಣ್ಯಭೂಮಿ, ಗ್ರಾಮಠಾಣ, ಹುಲ್ಲುಬನ್ನಿಕರಾಬು, ಗೋಮಾಳ ಸೇರಿದಂತೆ ವಿವಿಧ ಬಗೆಯ ಭೂಮಿಯ ಬಗ್ಗೆ ಅಗತ್ಯ ಮಾಹಿತಿ ಪಡೆಯಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಬಗರ್‌ಹುಕುಂ ಸಮಿತಿ ಸದಸ್ಯರಾದ ಎ. ರೇಖಾ, ಸಿ.ಎಚ್. ರಮೇಶ್, ಕುರುಮರಡಿಕೆರೆ ಪ್ರಸನ್ನ, ನಗರಸಭೆ ಸದಸ್ಯರಾದ ಅನುರಾಧ ರವಿಕುಮಾರ್, ತಾರಕೇಶ್ವರಿ, ತಹಸೀಲ್ದಾರ್ ವೆಂಕಟೇಶಯ್ಯ, ಕಂದಾಯಾ ಕಾರಿ ಶರಣಯ್ಯ, ತಾಲ್ಲೂಕು ಸರ್ವೆ ಇಲಾಖೆಯ ಹನುಮಂತರಾಯ ಮತ್ತಿತರರು ಇದ್ದರು.