Advertisement

ವಾಯವ್ಯ ಸಾರಿಗೆ ಚಾಲಕನಿಗೆ ಗೌರವ; ‌ಐವತ್ತು ಮಂದಿ ಪ್ರಾಣ ರಕ್ಷಿಸಿದಾತನಿಗೆ ಅಭಿನಂದನೆ

06:19 PM Mar 31, 2023 | Team Udayavani |

ಹುಬ್ಬಳ್ಳಿ: ಸಮಯ ಪ್ರಜ್ಞೆಯಿಂದ ಭಾರಿ ಅವಘಡವನ್ನು ತಪ್ಪಿಸಿ 50 ಪ್ರಯಾಣಿಕರ ಪ್ರಾಣ ಉಳಿಸಿದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್‌ ಚಾಲಕ ಗದ್ದೆಪ್ಪ ಮುದಕವಿ ಅವರನ್ನು ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಎಸ್‌.ಭರತ ಅವರು ಅಭಿನಂದಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

ಇಲ್ಲಿನ ಗೋಕುಲ ರಸ್ತೆಯಲ್ಲಿರುವ ವಾಕರಸಾ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಹಿರಿಯ ಅ ಧಿಕಾರಿಗಳ ಸಮಕ್ಷಮದಲ್ಲಿ ನಿಪ್ಪಾಣಿ ಘಟಕದ ಚಾಲಕ ಗದ್ದೆಪ್ಪ ಮುದಕವಿ ಹಾಗೂ ಅಂದು ಕರ್ತವ್ಯದಲ್ಲಿದ್ದ ನಿರ್ವಾಹಕ ರಾಜಪ್ಪ ಆರ್‌. ಕಮತೆ ಅವರನ್ನು ಸನ್ಮಾನಿಸಲಾಯಿತು.

ವ್ಯವಸ್ಥಾಪಕ ನಿರ್ದೇಶಕ ಎಸ್‌.ಭರತ ಮಾತನಾಡಿ, ಚಾಲಕ ಗದ್ದೆಪ್ಪ ಮುದಕವಿ ಅವರು ತಮ್ಮ ಕರ್ತವ್ಯ ನಿರ್ವಹಣೆ ಮೂಲಕ ಸಾರ್ವಜನಿಕ ವಲಯದಲ್ಲಿ ಸಂಸ್ಥೆಯ ಸದಾಭಿಪ್ರಾಯ ಹೆಚ್ಚಿಸಿದ್ದಾರೆ. ತಮ್ಮ ಪ್ರಾಣ ಲೆಕ್ಕಿಸದೆ ಧೈರ್ಯದಿಂದ ಬಸ್‌ನಲ್ಲಿದ್ದ ಪ್ರಯಾಣಿಕರ ಪ್ರಾಣ ಉಳಿಸಿದ್ದಾರೆಂದು
ಮೆಚ್ಚುಗೆ ವ್ಯಕ್ತಪಡಿಸಿದರು.

ಘಟನೆ ವಿವರ: ಚಿಕ್ಕೋಡಿ ವಿಭಾಗದ ನಿಪ್ಪಾಣಿ ಘಟಕದ ಬಸ್‌ ಕೊಲ್ಲಾಪುರದಿಂದ ಬೆಳಗಾವಿಗೆ ಬರುವಾಗ ಈ ಘಟನೆ ನಡೆದಿತ್ತು. ಬಸ್‌ ಕಣಗಲ ಹತ್ತಿರದ ಘಾಟ್‌ ತಿರುವಿನಲ್ಲಿ ಇಳಿಯುತ್ತಿರುವಾಗ ಮುಂದೆ ನಿಂತಿದ್ದ ಲಾರಿ ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಯು ಟರ್ನ್ ತೆಗೆದುಕೊಂಡಿದ್ದಾನೆ.

ಬಸ್‌ ನಿಯಂತ್ರಿಸದೆ ಮುಂದೆ ಹೋಗಿದ್ದರೆ ಎದುರಿನ ಲಾರಿಗೆ ಡಿಕ್ಕಿಯಾಗುತ್ತಿತ್ತು. ಇದನ್ನು ತಪ್ಪಿಸಲು ಬಲ ಭಾಗಕ್ಕೆ ತೆಗೆದುಕೊಂಡಿದ್ದರೆ ಆಳವಾದ ಪ್ರಪಾತಕ್ಕೆ ಬೀಳುತ್ತಿತ್ತು. ಇದರಿಂದ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು. ಚಾಲಕ ಗದ್ದೆಪ್ಪ ಮುದಕವಿ ಧೃತಿಗೆಡದೆ ಕ್ಷಣಾರ್ಧದಲ್ಲಿ ಗೇರ್‌ಬದಲಾಯಿಸಿ ವೇಗ ತಗ್ಗಿಸಿ ರಸ್ತೆಯ ಎಡಬದಿಯಲ್ಲಿದ್ದ ಮಣ್ಣಿನಗುಡ್ಡೆಗೆ ತಾಗಿಸಿ ನಿಲ್ಲಿಸಿದ್ದಾರೆ. ಈ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿಸಿದ್ದರು.

Advertisement

ಸಮಯಪ್ರಜ್ಞೆ ಹಾಗೂ ಜೀವದ ಹಂಗುದೊರೆದು ಪ್ರಯಾಣಿಕರ ಪ್ರಾಣ ಕಾಪಾಡಿದ ಚಾಲಕ ಹಾಗೂ ಕರ್ತವ್ಯದಲ್ಲಿದ್ದ ನಿರ್ವಾಹಕರನ್ನು ಬಸ್‌ನಲ್ಲಿದ್ದ ಪ್ರಯಾಣಿಕರು, ಸಾರ್ವಜನಿಕರು ಬೆಳಗಾವಿ ಬಸ್‌ ನಿಲ್ದಾಣದಲ್ಲಿ ಸನ್ಮಾನಿಸಿ ಕೃತಜ್ಞತೆ ಅರ್ಪಿಸಿದ್ದಾರೆ. ಚಾಲಕನ ಶ್ಲಾಘನೀಯ ಕಾರ್ಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ. ಹಿರಿಯ ಅಧಿಕಾರಿಗಳಾದ ರಾಜೇಶ ಹುದ್ದಾರ, ವಿಜಯಶ್ರೀ ನರಗುಂದ, ಎಚ್‌. ರಾಮನಗೌಡರ, ಶಶಿಧರ ಕುಂಬಾರ, ದಶರಥ ಕೆಳಗೇರಿ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next