ಮೈಸೂರು: ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಶಾಸಕ ಎಚ್.ಪಿ.ಮಂಜುನಾಥ್, ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರಿಗೆ ಧನ್ಯವಾದ ತಿಳಿಸಿ, ಗೌರವ ಸಲ್ಲಿಸಿದರು.
ಬುಧವಾರ ಮೈಸೂರಿನ ವಿಜಯನಗರದಲ್ಲಿರುವ ಜಿ.ಟಿ.ದೇವೇಗೌಡ ಅವರ ಮನೆಗೆ ನೂತನ ಶಾಸಕ ಎಚ್.ಪಿ.ಮಂಜುನಾಥ್, ಪತ್ನಿ ಸುಪ್ರಿಯಾ ಅವರೊಂದಿಗೆ ಭೇಟಿ ನೀಡಿ, ಜಿಟಿಡಿ ದಂಪತಿಗೆ ಹಾರ ಹಾಕಿ, ಸಿಹಿ, ಫಲತಾಂಬೂಲ ನೀಡಿ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸಿದ್ದಕ್ಕೆ ಧನ್ಯವಾದ ತಿಳಿಸಿದರು.
ಈ ಹಿಂದೆ ಎರಡು ಬಾರಿ ಹುಣಸೂರು ಕ್ಷೇತ್ರವನ್ನು ಜಿಟಿಡಿ ಪ್ರತಿನಿಧಿಸಿದ್ದರೆ, ಅವರ ಪತ್ನಿ ಲಲಿತಾ ಜಿ.ಟಿ.ದೇವೇಗೌಡ ಅವರು ಜಿಲ್ಲಾ ಪಂಚಾಯ್ತಿ ಸದಸ್ಯರಾಗಿ ಆಯ್ಕೆಯಾಗಿದ್ದರು. ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿರುವ ಜಿಟಿಡಿ ಪುತ್ರ ಜಿ.ಡಿ.ಹರೀಶ್ ಗೌಡ ಅವರನ್ನು ಹುಣಸೂರು ಕ್ಷೇತ್ರದಿಂದ ಕಣಕ್ಕಿಳಿಸಲು ತಯಾರಿ ನಡೆಸಿದ್ದರು.
ಆದರೆ, ಕಾಂಗ್ರೆಸ್ ತ್ಯಜಿಸಿ ಬಂದ ಎಚ್.ವಿಶ್ವನಾಥ್ ಅವರಿಗೆ ಹುಣಸೂರು ಕ್ಷೇತ್ರದಿಂದ ಜೆಡಿಎಸ್ ಟಿಕೆಟ್ ನೀಡಿದ ಕಾರಣ ಅನಿವಾರ್ಯವಾಗಿ ಅವರಿಗೆ ಬೆಂಬಲ ನೀಡಿದ್ದರು. ಜಿಟಿಡಿ ಕುಟುಂಬ ಇಂದಿಗೂ ಹುಣಸೂರು ಕ್ಷೇತ್ರದಲ್ಲಿ ತಮ್ಮದೇ ಆದ ಹಿಡಿತ ಹೊಂದಿದ್ದು, ವಿಶ್ವನಾಥ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಹುಣಸೂರು ಉಪ ಚುನಾವಣೆಯಲ್ಲಿ ಎಚ್.ಪಿ.ಮಂಜುನಾಥ್ ಗೆಲ್ಲುತ್ತಾರೆ ಎಂದು ಭವಿಷ್ಯ ನುಡಿದಿದ್ದರು.
ದೋಸ್ತಿ ಸರ್ಕಾರದಲ್ಲಿ ತಾವು ಬಯಸಿದ ಖಾತೆ ನೀಡಲಿಲ್ಲ ಎಂದು ಎಚ್.ಡಿ.ಕುಮಾರಸ್ವಾಮಿ ಬಗ್ಗೆ ಅಸಮಾಧಾನಗೊಂಡಿರುವ ಜಿಟಿಡಿ ತಾಂತ್ರಿಕವಾಗಷ್ಟೇ ಜೆಡಿಎಸ್‌ನಲ್ಲಿದ್ದಾರೆ. ಹೀಗಾಗಿ ಹುಣಸೂರು ಉಪ ಚುನಾವಣೆಯಲ್ಲಿ ಯಾರನ್ನೂ ಬೆಂಬಲಿಸದೆ ತಟಸ್ಥರಾಗಿ ಉಳಿಯುವುದಾಗಿ ಪ್ರಕಟಿಸಿದರು.
ಆದರೆ, ಕಡೆಯ ಎರಡು ದಿನಗಳಲ್ಲಿ ಜಿಟಿಡಿ ಪುತ್ರ ಹರೀಶ್ ಗೌಡ ಅವರು ತಮ್ಮ ಬೆಂಬಲಿಗರಿಗೆ ಸೂಚನೆ ನೀಡಿ ಜೆಡಿಎಸ್‌ನ ಸಾಂಪ್ರದಾಯಿಕ ಮತಗಳು ಕಾಂಗ್ರೆಸ್‌ಗೆ ವರ್ಗಾವಣೆಯಾಗುವಂತೆ ನೋಡಿಕೊಂಡಿದ್ದರು. ಇದರಿಂದಾಗಿ ಎಚ್.ಪಿ.ಮಂಜುನಾಥ್ 39 ಸಾವಿರ ಮತಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಲು ಸಾಧ್ಯವಾಯಿತು.