ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಬಾವಲಿ ಗೇಟ್ ಬಳಿ ಮದ್ಯದಂಗಡಿಯನ್ನು ತೆರೆಯಲು ಬಂಡವಾಳಶಾಹಿಗಳು ಯತ್ನಿಸುತ್ತಿದ್ದು, ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಇದಕ್ಕೆ ಅವಕಾಶ ನೀಡಬಾರದೆಂದು ಆಗ್ರಹಿಸಿ ಇಲ್ಲಿನ ಗಿರಿಜನರು ಉದ್ಯಾನದ ಉಪ ಅರಣ್ಯ ಸಂರಕ್ಷಣಾಧಿಕಾರಿ(ಎಸಿಎಫ್)ಗೆ ಮನವಿ ಸಲ್ಲಿಸಿದರು.
ಹುಣಸೂರು ಪಟ್ಟಣದ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಂಗರಾಜ ಮಲ್ಲಾಡಿ ನೇತೃತ್ವದಲ್ಲಿ ಆಗಮಿಸಿದ ಹಾಡಿಯ ನಿವಾಸಿಗಳು ಎಸಿಎಫ್ ಎಸ್.ಆರ್. ಪ್ರಸನ್ನಕುಮಾರ್‌ಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ನಿಂಗರಾಜ ಮಲ್ಲಾಡಿ, ಎಚ್.ಡಿ.ಕೋಟೆ ತಾಲೂಕಿನ ಅಂತರಸಂತೆ ಹೋಬಳಿ ವ್ಯಾಪ್ತಿಯ ಡಿ.ಬಿ.ಕುಪ್ಪೆ ಗ್ರಾಮ ಪಂಚಾಯ್ತಿಗೆ ಬಾವಲಿ ಗೇಟ್ ಗ್ರಾಮ ಒಳಪಟ್ಟಿದ್ದು, ಕರ್ನಾಟಕ ಮತ್ತು ಕೇರಳ ರಾಜ್ಯಗಳ ಗಡಿಭಾಗವಾಗಿದೆ. ಈ ಜಾಗದಲ್ಲಿ ಅರಣ್ಯ ಪ್ರದೇಶ, ಕಬಿನಿ ನದಿ, ಅಂತರರಾಜ್ಯ ಗಡಿರಸ್ತೆ ಇದೆ. 60ಕ್ಕೂ ಹೆಚ್ಚು ಗಿರಿಜನ ಕುಟುಂಬಗಳು ಹಾಡಿ(ಬಾವಲಿ ಗೇಟ್ ಹಾಡಿ)ಯಲ್ಲಿ ವಾಸಿಸುತ್ತಿವೆ.
ಹಾಡಿಯಿಂದ 20 ಮೀಟರ್ ಅಂತರದಲ್ಲಿ ಈ ಹಿಂದೆ ಕಬಿನಿ ಸ್ಟ್ರಿಂಗ್ ರೆಸಾರ್ಟ್‌ನಲ್ಲಿ ಸಿಎಲ್2 ಮತ್ತು ಸಿಎಲ್ 7 ಪರವಾನಗಿ ಹೊಂದಿದ ಬಾರ್ ಆ್ಯಂಡ್ ರೆಸ್ಟೋರೆಂಟ್ ಇತ್ತು. ಇದರಿಂದ ಗಿರಿಜನರ ಬದುಕು ಅಯೋಮಯವಾಗಿತ್ತು. ಈ ಪ್ರದೇಶದಲ್ಲಿ ಅರಣ್ಯ ಹಕ್ಕು ಕಾಯ್ದೆ ಉಲ್ಲಂಘನೆಯಾಗಿತ್ತು ಹಾಗೂ ನಕ್ಸಲರ ಹಾವಳಿಯೂ ಹೆಚ್ಚಿತ್ತು.
ಗಿರಿಜನರಿಂದ ಬಂದ ಈ ಎಲ್ಲಾ ಆಕ್ಷೇಪಗಳನ್ನು ಪರಿಗಣಿಸಿ 2014ರಲ್ಲಿ ಅಂದಿನ ಜಿಲ್ಲಾಧಿಕಾರಿ ಶಿಖಾ ಅವರು ಬಾರ್ ಆ್ಯಂಡ್ ರೆಸ್ಟೋರೆಂಟ್ ರದ್ದುಪಡಿಸಿದ್ದರು. ಆದರೆ, ಇದೀಗ ಮತ್ತೆ ಬಾರ್ ತೆರೆಯಲು ಪ್ರಯತ್ನಿಸಲಾಗುತ್ತಿದೆ. ಪ್ರಸ್ತುತ ಅಬಕಾರಿ ಜಿಲ್ಲಾಧಿಕಾರಿಗಳ ಸಂಬಂಧಿಗಳು ಬಾರ್ ತೆರೆಯಲು ಮುಂದಾಗಿದ್ದಾರೆನ್ನುವ ಮಾಹಿತಿ ಇದೆ ಎಂದು ದೂರಿದರು.
ಮೇಲಧಿಕಾರಿ ಜತೆ ಚರ್ಚೆ: ಮನವಿ ಸ್ವೀಕರಿಸಿ ಮಾತನಾಡಿದ ಎಸಿಎಫ್ ಎಸ್.ಆರ್.ಪ್ರಸನ್ನಕುಮಾರ್, ಗಿರಿಜನರ ಸಹಜ ಬದುಕಿಗೆ ಮಾರಕವಾಗುವಂತಹ ಯಾವೊಂದು ಕಾರ್ಯವನ್ನೂ ಸಹಿಸುವುದಿಲ್ಲ. ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬಾವಲಿ ಗೇಟ್ ನಿವಾಸಿಗಳಾದ ಪೊನ್ನಮ್ಮ, ಮೀನಾಕ್ಷಮ್ಮ, ಶಾಂತಾ, ಮಾರಮ್ಮ, ಕರಿಯ, ಕಣ್ಣನ್, ವಿನೋದ್, ದಲಿತ ಮುಖಂಡರಾದ ಗಜೇಂದ್ರ, ದೇವೇಂದ್ರ ಇತರರು ಹಾಜರಿದ್ದರು.