Advertisement
ಫ್ಯಾಷನ್ ಲೋಕದಲ್ಲಿ ಸದ್ಯಕ್ಕೆ ಟ್ರೆಂಡಿಂಗ್‌ನಲ್ಲಿರುವ ಉಡುಗೆ, ಟ್ರೈಬಲ್ ಜಾಕೆಟ್. ಬಣ್ಣ ಬಣ್ಣದ ಈ ಜಾಕೆಟ್ ಮೇಲೆ, ಬಗೆಬಗೆಯ ಚಿತ್ರಕಲೆ, ಆಕೃತಿ, ಚಿಹ್ನೆ, ಚಿತ್ತಾರಗಳು ಇರುತ್ತವೆ. ಅರ್ಧ, ಮುಕ್ಕಾಲು ಅಥವಾ ಇಡೀ ತೋಳಿನ ಈ ಜಾಕೆಟ್‌ಗೆ ಕಾಲರ್ ಇರಲೂ ಬಹುದು, ಇಲ್ಲದೆಯೂ ಇರಬಹುದು.
ಜಾಕೆಟ್‌ನ ಫಿಟ್ಟಿಂಗ್ ಮತ್ತು ವಿನ್ಯಾಸಕ್ಕಿಂತ, ಇದರ ಮೇಲಿನ ಬಣ್ಣ ಮತ್ತು ಚಿತ್ರಗಳೇ ಆಕರ್ಷಣೆ. ಟ್ರೈಬಲ್ ಜಾಕೆಟ್ ಎಂಬುದು ಪುರುಷರಿಗಷ್ಟೇ ಸೀಮಿತವಾಗಿ ಉಳಿದಿಲ್ಲ. ಮಕ್ಕಳು, ಮಹಿಳೆಯರೂ ಇದನ್ನು ತೊಡಬಹುದು. ಜಂಪ್ ಸೂಟ್ಸ್, ಶರ್ಟ್‌ನಂಥ ವೆಸ್ಟರ್ನ್ ಬಟ್ಟೆಗಳ ಜೊತೆ ಅಲ್ಲದೆ ಚೂಡಿದಾರ, ಸಲ್ವಾರ್ ಕಮೀಜ್ ಹಾಗೂ ಸೀರೆಯ ಜೊತೆ ರವಿಕೆಯಂತೆಯೂ ತೊಡಬಹುದು! ಕೇವಲ ಒಂದೇ ಬಣ್ಣ ಅಥವಾ ಚೆಕ್ಸ್ ಡಿಸೈನ್ ಅಲ್ಲದೆ, ಫ್ಲೋರಲ್ ಪ್ರಿಂಟ್ (ಹೂವಿನ ಆಕೃತಿ)ನ ವಿನ್ಯಾಸ ಮತ್ತು ಚಿತ್ರಗಳು ಇದ್ದರೆ ಮಾತ್ರ ಇವುಗಳನ್ನು ಟ್ರೈಬಲ್ ಜಾಕೆಟ್ ಎಂದು ಕರೆಯಲಾಗುತ್ತದೆ. ರವಿಕೆಯೂ ಆಗಬಹುದು
ವೇಸ್ಟ್ ಕೋಟ್ ಮತ್ತು ಟ್ರೈಬಲ್ ಜಾಕೆಟ್‌ಗೆ ಇರುವ ಪ್ರಮುಖ ವ್ಯತ್ಯಾಸ ಎಂದರೆ, ತೋಳು. ಟ್ರೈಬಲ್ ಜಾಕೆಟ್‌ನಲ್ಲಿ ತೋಳುಗಳು ಇರುತ್ತವೆ. ಆದರೆ, ವೇಸ್ಟ್ ಕೋಟ್‌ನಲ್ಲಿ ತೋಳು ಇರುವುದಿಲ್ಲ. ಹಾಗಾಗಿ ಟ್ರೈಬಲ್ ಜಾಕೆಟ್‌ಅನ್ನು ರವಿಕೆಯಂತೆ ಬಳಸಬಹುದು. ಇವುಗಳನ್ನು ಜಾಕೆಟ್‌ನಂತೆಯೇ ಉಡುಪಿನ ಮೇಲೆ ತೊಡಲಾಗುತ್ತದೆ. ಪ್ಲೇನ್ ಉಡುಗೆ ಮೇಲೆ ಬಣ್ಣ ಬಣ್ಣದ ಟ್ರೈಬಲ್ ಜಾಕೆಟ್ ಅಂದವಾಗಿ ಕಾಣುತ್ತದೆ. ಇವುಗಳಲ್ಲಿ, ಬಟನ್ ಇರುವ ಟ್ರೈಬಲ್ ಜಾಕೆಟ್‌ಗಳು, ಲಾಡಿ ಅಥವಾ ದಾರ ಇರುವ ಟ್ರೈಬಲ್ ಜಾಕೆಟ್‌ಗಳು, ಜಿಪ್ ಇರುವ ಟ್ರೈಬಲ್ ಜಾಕೆಟ್‌ಗಳು, ವೆಲೊ ಇರುವ ಟ್ರೈಬಲ್ ಜಾಕೆಟ್‌ಗಳು, ಹೀಗೆ ವಿಭಿನ್ನ ಪ್ರಕಾರಗಳಿವೆ.
Related Articles
ಚರ್ಮ, ಡೆನಿಮ್ (ಜೀನ್ಸ್), ವೆಲ್ವೆಟ್ (ಮಕ್ಮಲ್), ಫರ್ (ತುಪ್ಪಳ ಚರ್ಮ ಅಥವಾ ಮೃದು ರೋಮದಿಂದ ಮಾಡಿದ ಬಟ್ಟೆ), ಉಣ್ಣೆ, ಹೀಗೆ ಹಲವು ವಸ್ತುಗಳಿಂದ ಮಾಡಿದ ಜಾಕೆಟ್‌ಗಳು ಮಾರುಕಟ್ಟೆಯಲ್ಲಿವೆ. ಚಿತ್ರ ಅಥವಾ ವಿನ್ಯಾಸಗಳನ್ನು ಗಮನಿಸುವುದಾದರೆ, ಇಂಡಿಯನ್ ಪ್ರಿಂಟ್, ಲೇಸ್, ಫ್ಲೋರಲ್ ಪ್ರಿಂಟ್, ಮುಂತಾದ ಆಯ್ಕೆಗಳಿವೆ.
Advertisement
ಲೆದರ್ ಅಥವಾ ಚರ್ಮದ ಟ್ರೈಬಲ್ ಜಾಕೆಟ್‌ಅನ್ನು ಸಾಂಪ್ರದಾಯಿಕ ಉಡುಗೆ ಜೊತೆ ಉಡಲು ಆಗುವುದಿಲ್ಲ. ಹಾಗಾಗಿ, ಅವನ್ನು ಕ್ಯಾಶುಯಲ್ ಪ್ಯಾಂಟ್, ಶರ್ಟ್ ಜೊತೆ ತೊಡುತ್ತಾರೆ. ಇಂಥ ಟ್ರೈಬಲ್ ಜಾಕೆಟ್‌ಗಳನ್ನು ಬೈಕರ್ಸ್‌ಗಳು ಹೆಚ್ಚಾಗಿ ಇಷ್ಟಪಡುತ್ತಾರೆ. ಪ್ರಾಣಿಪ್ರಿಯರು, ಲೆದರ್ ಬಳಕೆಯನ್ನು ವಿರೋಧಿಸುವವರಿಗೆ ಸಿಂಥೆಟಿಕ್ ಲೆದರ್‌ನ ಟ್ರೈಬಲ್ ಜಾಕೆಟ್‌ಗಳೂ ಲಭ್ಯವಿವೆ. ಡೆನಿಮ್, ಅಂದರೆ ಜೀನ್ಸ್ ಟ್ರೈಬಲ್ ಜಾಕೆಟ್‌ಗಳನ್ನು ಖಾದಿ ಉಡುಗೆಯ ಜೊತೆ, ಪ್ಯಾಂಟ್ ಶರ್ಟ್ ಜೊತೆ, ಶಾರ್ಟ್ಸ್, ಸ್ಕರ್ಟ್ಸ್ ಜೊತೆ ಉಡಬಹುದು. ಡೆನಿಮ್‌ಗೆ ಒಂದು ಮೆರಗು ಇರುವ ಕಾರಣ ಪ್ಲೇನ್ ಬಟ್ಟೆಗಳ ಜೊತೆ ಇದನ್ನು ತೊಟ್ಟರೆ ಟ್ರೈಬಲ್ ಜಾಕೆಟ್ ಎದ್ದು ಕಾಣುತ್ತದೆ.
ಲೇಯರ್ಡ್ ಜಾಕೆಟ್ಒಂದೇ ಕೋಟ್‌ನಲ್ಲಿ ಎರಡು ಅಥವಾ ಹೆಚ್ಚು ಪದರಗಳಿದ್ದರೆ ಅದಕ್ಕೆ ಲೇಯರ್ಡ್ ಜಾಕೆಟ್ ಎನ್ನುತ್ತಾರೆ. ಲೇಯರ್ಡ್ ಟ್ರೈಬಲ್ ಜಾಕೆಟ್ ಧರಿಸಿದಾಗ, ಒಂದರ ಮೇಲೊಂದು ಕೋಟ್ ತೊಟ್ಟಂತೆ ಕಾಣುತ್ತದೆ. ಈ ಸ್ಟೈಲ್ ಅನ್ನು ಬಹುತೇಕ ಸಿನಿಮಾ ನಟಿಯರು ಟ್ರೈ ಮಾಡಿದ್ದಾರೆ. ಆ ಮೂಲಕ, ಇತರೆ ಯುವತಿಯರೂ ಲೇಯರ್ಡ್ ಜಾಕೆಟ್‌ಗೆ ಮಾರು ಹೋಗುವಂತೆ ಮಾಡಿದ್ದಾರೆ. ಜೀನ್ಸ್ ಪ್ಯಾಂಟ್ ಮೇಲೆ ಧರಿಸಲು ಸರಳ ಟ್ರೈಬಲ್ ಜಾಕೆಟ್, ಚೂಡಿದಾರದ ಮೇಲೆ ತೊಡಲು ಟ್ಯಾಝೆಲ್ ಟ್ರೈಬಲ್ ಜಾಕೆಟ್, ಸಲ್ವಾರ್ ಕಮೀಜ್ ಹಾಗೂ ಅನಾರ್ಕಲಿ ಡ್ರೆಸ್ ಮೇಲೆ ಬ್ಲಾಕ್ ಪ್ರಿಂಟೆಡ್ ಟ್ರೈಬಲ್ ಜಾಕೆಟ್‌ಗಳನ್ನು ಧರಿಸಿದರೆ ಚೆನ್ನ. ಇಷ್ಟದ ಪ್ರಿಂಟ್, ಮಟೀರಿಯಲ್ ಅಥವಾ ಬಣ್ಣದ ಬಟ್ಟೆಯಿಂದ ಇಂಥ ಜಾಕೆಟ್‌ಗಳನ್ನು ಹೊಲಿಸಿಕೊಳ್ಳಬಹುದು. ಟ್ರೈಬಲ್ ಜಾಕೆಟ್ ನಿಂದ ಯಾವುದೇ ಸರಳ ಉಡುಪನ್ನೂ ಡಿಫರೆಂಟ್ ಆಗಿ ಕಾಣುವಂತೆ ಪರಿವರ್ತಿಸಬಹುದು. ನೀವು ಕೂಡ ವಿಭಿನ್ನವಾದ ಟ್ರೈಬಲ್ ಜಾಕೆಟ್ ಅನ್ನು ಟ್ರೈ ಮಾಡಲು ಹಿಂಜರಿಯದಿರಿ. ಹಬ್ಬ, ಹರಿದಿನಕ್ಕೂ ಸೈ
ಎಂಬ್ರಾಯ್ಡ್ ರಿ ಅಥವಾ ಅನ್ಯ ವಿನ್ಯಾಸಗಳಿರುವ ಟ್ರೈಬಲ್ ಜಾಕೆಟ್‌ಗಳನ್ನು ಹಬ್ಬ-ಹರಿದಿನ, ಮದುವೆ, ಮುಂತಾದ ಸಂಭ್ರಮಾಚರಣೆಗಳಿಗೆ ಉಡಬಹುದು. ಇಲ್ಲೂ ಸಹ, ಪ್ಲೇನ್ ಬಣ್ಣದ ಹತ್ತಿಯ ಉಡುಪಿನ ಮೇಲೆ ಟ್ರೈಬಲ್ ಜಾಕೆಟ್ ತೊಟ್ಟರೆ, ಉಡುಪು ಗ್ರ್ಯಾಂಡ್ ಆಗಿ ಕಾಣುತ್ತದೆ. ರೇಷ್ಮೆಯನ್ನು ಹೋಲುವ ಟ್ರೈಬಲ್ ಜಾಕೆಟ್‌ಗಳೂ ಮಾರುಕಟ್ಟೆಯಲ್ಲಿ ಲಭ್ಯ. ಇಂಥ ಟ್ರೈಬಲ್ ಜಾಕೆಟ್‌ಗಳಲ್ಲಿ, ಚಿನ್ನದ ಬಣ್ಣದ ದಾರಗಳಿಂದ ಎಂಬ್ರಾಯ್ಡ್ ರಿ ಮಾಡಿರುತ್ತಾರೆ. -ಅದಿತಿಮಾನಸ ಟಿ.ಎಸ್.