Advertisement

ತ್ರಿಕೋನ ಸರಣಿ, ಟಿ20 ವಿಶ್ವಕಪ್‌ ಜ. 12: ಭಾರತೀಯ ವನಿತಾ ತಂಡ ಪ್ರಕಟ

09:47 AM Jan 08, 2020 | sudhir |

ಇಂದೋರ್‌: ಪ್ರವಾಸಿ ಆಸ್ಟ್ರೇಲಿಯ ವಿರುದ್ಧ ನಡೆಯಲಿರುವ ನಿರ್ಣಾಯಕ ತ್ರಿಕೋನ ಸರಣಿಗೆ ಭಾರತೀಯ ವನಿತಾ ತಂಡವನ್ನು ಮುಂಬಯಿಯಲ್ಲಿ ರವಿವಾರ (ಜ. 12) ಆಯ್ಕೆ ಮಾಡಲಾಗುತ್ತದೆ. ಇದೇ ವೇಳೆ ಮುಂಬರುವ ಟ್ವೆಂಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುವ ಸಂಭಾವ್ಯ ತಂಡವನ್ನು ಕೂಡ ಆಯ್ಕೆ ಮಾಡಲಾಗುತ್ತದೆ.

Advertisement

ತ್ರಿಕೋನ ಸರಣಿಯಲ್ಲಿ ಭಾರತವಲ್ಲದೇ ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್‌ ಭಾಗವಹಿಸಲಿದೆ. ಸರಣಿಯು ಕ್ಯಾನ್‌ಬೆರಾದಲ್ಲಿ ಜ. 31ರಿಂದ ಆರಂಭವಾಗಲಿದೆ. ಪ್ರತಿಯೊಂದು ತಂಡವು ಎದುರಾಳಿಯನ್ನು ಎರಡು ಬಾರಿ ಎದುರಿಸಲಿದ್ದು ಅಗ್ರ ಎರಡು ತಂಡಗಳು ಫೈನಲ್‌ನಲ್ಲಿ ಮತ್ತೆ ಮುಖಾಮುಖೀಯಾಗಲಿವೆ.
ಫೆ. 21ರಿಂದ ಟಿ20 ವಿಶ್ವಕಪ್‌ ಆರಂಭ ವಾಗುತ್ತಿರುವ ಕಾರಣ ಭಾರತೀಯ ವನಿತಾ ತಂಡಕ್ಕೆ ಈ ತ್ರಿಕೋನ ಸರಣಿ ಅತ್ಯಂತ ಮಹತ್ವದ್ದಾಗಿದೆ. ಈ ಸರಣಿಯಲ್ಲಿ ತಂಡ ಯಾವ ರೀತಿಯ ನಿರ್ವಹಣೆ ನೀಡುತ್ತದೆ ಎಂಬುದರ ಮೇಲೆ ವಿಶ್ವಕಪ್‌ನಲ್ಲಿ ಭಾರತದ ನಿರ್ವಹಣೆ ಎಷ್ಟರಮಟ್ಟಿಗೆ ಇರಬಹುದೆಂದು ಊಹಿಸಬಹುದು.

ಹರ್ಮನ್‌ಪ್ರೀತ್‌ ಕೌರ್‌ ನೇತೃತ್ವದ ಭಾರತೀಯ ತಂಡವು ಸಿಡ್ನಿಯಲ್ಲಿ ನಡೆಯುವ ಟಿ20 ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ನಾಲ್ಕು ಬಾರಿಯ ಚಾಂಪಿಯನ್‌ ಆಸ್ಟ್ರೇಲಿಯವನ್ನು ಎದುರಿಸಲಿದೆ. ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್‌ ವನಿತಾ ಕ್ರಿಕೆಟ್‌ನ ಅತ್ಯಂತ ಪ್ರಬಲ ಮತ್ತು ಬಲಶಾಲಿ ತಂಡಗಳಾಗಿವೆ.

ತ್ರಿಕೋನ ಸರಣಿ ಭಾರತೀಯರ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಬಲಿಷ್ಠ ತಂಡಗಳೆದುರು ನಮ್ಮ ಆಟಗಾರ್ತಿಯರು ಹೇಗೆ ಆಡುತ್ತಾರೆಂದು ಈ ಸರಣಿ ಹೇಳಲಿದೆ. ತ್ರಿಕೋನ ಸರಣಿಯಲ್ಲಿ ಭಾಗವಹಿಸುವ ಬಹುತೇಕ ಆಟಗಾರ್ತಿಯರು ಟಿ20 ವಿಶ್ವಕಪ್‌ನಲ್ಲೂ ಆಡುವ ಸಾಧ್ಯತೆಯಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಎ’ ಆಟಗಾರ್ತಿಯರ ನಿರ್ವಹಣೆ ಪರಿಗಣನೆ
ಹೇಮಲತಾ ಕಲಾ ನೇತೃತ್ವದ ಆಯ್ಕೆ ಸಮಿತಿ ತಂಡವನ್ನು ಪ್ರಕಟಿಸುವ ಮೊದಲು ಭಾರತೀಯ “ಎ’ ತಂಡ ಕಳೆದ ತಿಂಗಳು ಆಸ್ಟ್ರೇಲಿಯ ಪ್ರವಾಸದ ವೇಳೆ ನೀಡಿದ ನಿರ್ವಹಣೆಯನ್ನು ಪರಿಗಣಿಸುವ ಸಾಧ್ಯತೆಯಿದೆ. ಆಯ್ಕೆ ಸಮಿತಿ ತ್ರಿಕೋನ ಸರಣಿಗೆ ಮತ್ತು ವಿಶ್ವಕಪ್‌ಗೆ ಸಂಭಾವ್ಯರ ತಂಡವನ್ನು ಆಯ್ಕೆ ಮಾಡಲಿದೆ. “ಎ’ ಪ್ರವಾಸದಲ್ಲಿ ಮಿಂಚಿನ ನಿರ್ವಹಣೆ ನೀಡಿದ್ದ 15ರ ಹರೆಯದ ಶಫಾಲಿ ವರ್ಮ ಅವರು ಆಯ್ಕೆಯಾಗುವ ಸಾಧ್ಯತೆಯಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next