Advertisement

ತ್ರಿಕೋನ ಪ್ರೇಮ ಪ್ರಕರಣ: ಸಾವಿನಲ್ಲಿ ಅಂತ್ಯ

12:47 PM Jan 30, 2022 | Team Udayavani |

 ಉಳ್ಳಾಲ: ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಪ್ರೇಯಸಿಯನ್ನು ಉಳಿಸಲು ಮುಂದಾದ ಪ್ರಿಯಕರ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದು, ಸ್ಥಳೀಯ ಜೀವರಕ್ಷಕ ಈಜುಗಾರರರಿಂದ ರಕ್ಷಿಸಲ್ಪಟ್ಟ ಯುವತಿ ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದು, ಯುವಕನ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

Advertisement

ತ್ರಿಕೋನ ಪ್ರೇಮ ಪ್ರಕರಣವೊಂದು ಸಾವಿನಲ್ಲಿ ಕೊನೆಯಾಗಿದೆ. ರಾಣಿಪುರ ಉಳಿಯ ನಿವಾಸಿ ಹಿಲರಿ ಡಿ’ಸೋಜಾ ಅವರ ಪುತ್ರ ಲಾಯ್ಡ ಡಿ’ಸೋಜಾ (29) ಮೃತ ಯುವಕ. ಕೋಟೆಕಾರು ಪಾನೀರು ನಿವಾಸಿ ಅಶ್ವಿ‌ತಾ ಫೆರಾವೋ (24) ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ನುರಿತ ಈಜುಗಾರನಾಗಿದ್ದ ಲಾಯ್ಡ ರಕ್ಷಣೆ ಮಾಡುವ ಭರದಲ್ಲಿ ಸಮುದ್ರಕ್ಕೆ ಹಾರಿದಾಗ ಬಂಡೆ ಬಡಿದು ಸಾವನ್ನಪ್ಪಿರುವ ಸಾಧ್ಯತೆಯಿದ್ದು, ಕೆಲವೊಮ್ಮೆ ಹೆದರಿಕೆಯಿಂದ ಹೃದಯ ಸ್ತಂಭನವಾಗುವ ಸಾಧ್ಯತೆಯು ಇದೆ ಎಂದು ಸ್ಥಳೀಯ ಜೀವರಕ್ಷಕ ಈಜುಗಾರರು ತಿಳಿಸಿದ್ದಾರೆ.

ತ್ರಿಕೋನ ಪ್ರೇಮ ಸಾವಿಗೆ ಕಾರಣವಾಯಿತು

ವಿದೇಶದಲ್ಲಿ ಉದ್ಯೋಗದಲ್ಲಿದ್ದ ಲಾಯ್ಡ ಡಿ’ಸೋಜಾ ಕಳೆದ ಎಂಟು ತಿಂಗಳ ಹಿಂದೆ ಮನೆಗೆ ಬಂದಿದ್ದು ವಾಪಸ್‌ ಹೋಗಿರಲಿಲ್ಲ. ಊರಿನಲ್ಲಿಯೇ ಡೆಕೊರೇಟರ್‌ ಆಗಿ ಕೆಲಸ ಮಾಡುತ್ತಿದ್ದರು. ಕಳೆದ ಎಂಟು ವರ್ಷಗಳಿಂದ ಅಶ್ವಿ‌ತಾರನ್ನು ಪ್ರೀತಿಸುತ್ತಿದ್ದ ಲಾಯ್ಡಗೆ ಕೆಲವು ತಿಂಗಳ ಹಿಂದೆ ಚೆಂಬುಗುಡ್ಡೆ ಮೂಲದ ಯುವತಿಯೊಂದಿಗೆ ಪ್ರೀತಿ ಅರಳಿತ್ತು. ಇಬ್ಬರ ಪ್ರೇಮ ಪ್ರಕರಣ ಲಾಯ್ಡ ಸಾವಿನೊಂದಿಗೆ ಕೊನೆಗೊಂಡಿತು.

ಮಧ್ಯಾಹ್ನವೇ ಸಮುದ್ರ ಕಿನಾರೆಗೆ ಆಗಮಿಸಿದ್ದರು

Advertisement

ಲಾಯ್ಡ ಡಿ’ಸೋಜಾ ಮತ್ತು ಅಶ್ವಿ‌ತಾ ಫೆರಾವೋ ಮಧ್ಯಾಹ್ನವೇ ಸೋಮೇಶ್ವರ ಸಮುದ್ರ ತೀರಕ್ಕೆ ಬಂದಿದ್ದರು. ಇಬ್ಬರ ನಡುವೆ ಸುಮಾರು ಮೂರು ನಾಲ್ಕು ಗಂಟೆ ಮಾತುಕತೆ ನಡೆದಿದ್ದು, ಇವರು ಸಮುದ್ರ ಕಿನಾರೆಯಲ್ಲಿ ಸಂಚರಿಸುವುದನ್ನು ಸ್ಥಳೀಯ ಜೀವರಕ್ಷಕ ಈಜುಗಾರರು ನೋಡಿದ್ದಾರೆ. ಸಂಜೆ ವೇಳೆಗೆ ಅಶ್ವಿ‌ತಾ ದೂರವಾಣಿ ಕರೆ ಮಾಡಿ ಚೆಂಬುಗುಡ್ಡೆಯಲ್ಲಿರುವ ಲಾಯ್ಡನ ಹೊಸ ಪ್ರೇಯಸಿಯನ್ನು ಕರೆದಿದ್ದಾಳೆ. ಈ ಸಂದರ್ಭದ ಲಾಯ್ಡನ ಸ್ನೇಹಿತರು ಸಮುದ್ರ ಕಿನಾರೆಗೆ ಆಗಮಿಸಿದ್ದು, ಎಲ್ಲರೂ ರಾತ್ರಿವರೆಗೂ ಮಾತುಕತೆಯಲ್ಲಿ ನಿರತರಾಗಿದ್ದರು ಎಂದು ಲಾಯ್ಡನ ಸ್ನೇಹಿತರೊಬ್ಬರು ಪತ್ರಿಕೆಗೆ ತಿಳಿಸಿದರು.

ಇಬ್ಬರನ್ನೂ ಪ್ರೀತಿಸುತ್ತೇನೆ 

ಲಾಯ್ಡನ ದೀರ್ಘ‌ ಕಾಲದ ಸ್ನೇಹಿತೆ ಅಶ್ವಿ‌ತಾ, ಇಬ್ಬರಲ್ಲಿ ನೀನು ಯಾರನ್ನು ಪ್ರೀತಿಸುತ್ತಿ ಎಂದು ಕೇಳಿದ ಪ್ರಶ್ನೆಗೆ ಲಾಯ್ಡ ಇಬ್ಬರನ್ನು ಪ್ರೀತಿಸುತ್ತೇನೆ ಎಂದು ಉತ್ತರ ಕೊಟ್ಟಾಗ ಅಶ್ವಿ‌ತಾ ಅಘಾತಕ್ಕೊಳಗಾಗಿ ಸಮುದ್ರಕ್ಕೆ ಹಾರಿದ್ದಾಳೆ. ಅಶ್ವಿ‌ತಾಳನ್ನು ರಕ್ಷಿಸುವ ಭರದಲ್ಲಿ ಲಾಯ್ಡ ಸಮುದ್ರಕ್ಕೆ ಹಾರಿದ್ದು, ಈ ಸಂದರ್ಭದಲ್ಲಿ ಉಳಿದ ಸ್ನೇಹಿತರ ಬೊಬ್ಬೆ ಕೇಳಿ ಸ್ಥಳಕ್ಕೆ ಆಗಮಿಸಿದ ಜೀವರಕ್ಷಕ ಈಜುಗಾರರಾದ ಮೋಹನ್‌ಚಂದ್ರ, ಸುಜಿತ್‌, ಅಶೋಕ್‌ ಸೋಮೇಶ್ವರ, ಕಲ್ಪೇಶ್‌, ಗಿರೀಶ್‌ ಅಶ್ವಿ‌ತಾಳನ್ನು ರಕ್ಷಿಸಲು ಯಶಸ್ವಿಯಾಗಿದ್ದು, ರಕ್ಷಣೆಗೆ ಹಾರಿದ್ದ ಲಾಯ್ಡನನ್ನು ಸಮುದ್ರದಿಂದ ಹೊರತೆಗೆದು ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕೊಂಡೊಯ್ದರೂ ಬದುಕಿಸಲು ಸಾಧ್ಯವಾಗಿಲ್ಲ. ಮೃತ ಲಾಯ್ಡ ತಂದೆ, ತಾಯಿ, ಸಹೋದರ, ಸಹೋದರಿಯನ್ನು ಅಗಲಿದ್ದಾರೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next