Advertisement

ಮಾನವ ಅಂಗಾಂಶದ ಮೇಲೆ ಕ್ಲಿನಿಕಲ್‌ ಪ್ರಯೋಗ

07:50 AM Dec 11, 2022 | Team Udayavani |

ಹೊಸದಿಲ್ಲಿ: ವೈದ್ಯಕೀಯ ಜಗತ್ತಿನಲ್ಲಿ ಅತ್ಯಂತ ಪ್ರಾಮುಖ್ಯ ಪಡೆದಿರುವ ಔಷಧಗಳ ಕ್ಲಿನಿಕಲ್‌ ಟ್ರಯಲ್‌ನ ಪರಿಭಾಷೆಯನ್ನೇ ಬದಲಾವಣೆ ಮಾಡಲು ಕೇಂದ್ರ ಆರೋಗ್ಯ ಇಲಾಖೆ ಮುಂದಾಗಿದ್ದು, “ಮಾನವನ ಅಂಗಾಂಶಗಳು’ ಮತ್ತು “ಪ್ರಯೋಗಾಲಯದಲ್ಲಿ ಸೃಷ್ಟಿಸಲಾದ ಜೀವಕೋಶ’ಗಳ ಮೇಲೆ ಪ್ರಯೋಗ ನಡೆಸಲಾಗುತ್ತದೆ.

Advertisement

ಈ ಸಂಬಂಧ ಹೊಸ ಔಷಧ ಮತ್ತು ಕ್ಲಿನಿಕಲ್‌ ಟ್ರಯಲ್‌ ರೂಲ್ಸ್‌ 2019ಕ್ಕೆ ತಿದ್ದುಪಡಿ ತರಲು ಕೇಂದ್ರ ಸರಕಾರಚಿಂತನೆ ನಡೆಸುತ್ತಿದೆ. ಯಾವುದೇ ಹೊಸ ಔಷಧ ಬರುವ ಮುನ್ನ ಅದನ್ನು ಮೊದಲಿಗೆ ಪ್ರಾಣಿಗಳ ಮೇಲೆ ಪರೀಕ್ಷೆ ನಡೆಸಿ, ಬಳಿಕ ಆಯ್ದ ಕೆಲವು ಮನುಷ್ಯರ ಮೇಲೂ ಕ್ಲಿನಿಕಲ್‌ ಟ್ರಯಲ್‌ ನಡೆಸಲಾಗುತ್ತಿತ್ತು. ಇದರಿಂದ ಈ ಕ್ಲಿನಿಕಲ್‌ ಟ್ರಯಲ್‌ಗೆ ಒಳಗಾದವರ ಆರೋಗ್ಯದಲ್ಲಿ ಏರುಪೇರಾಗುವ ಆತಂಕವೂ ಇತ್ತು. ಹೀಗಾಗಿ, ಇತ್ತೀಚೆಗಷ್ಟೇ ಆರೋಗ್ಯ ಇಲಾಖೆಯೂ ಕರಡು ಅಧಿಸೂಚನೆಯನ್ನು ಹೊರಡಿಸಿದ್ದು, ಪ್ರಾಣಿಗಳ ಮೇಲಿನ ಪ್ರಯೋಗದ ಜತೆ ಜತೆಗೇ ಪರ್ಯಾಯ ತಂತ್ರಜ್ಞಾನ ಬಳಸಿಕೊಳ್ಳಲು ನಿರ್ಧರಿಸಿದೆ.

ಅಂದರೆ, ಚಿಪ್‌ ಆಧಾರಿತ ಮಾನವನ ಅಂಗಾಂಗಗಳು, ಮೈಕ್ರೋ ಫಿಸಿಯಲಾಜಿಕಲ್‌ ವ್ಯವಸ್ಥೆ ಮತ್ತು ಇತರ ಪ್ರಣಾಳದಲ್ಲಿ ಬೆಳೆಸಲಾದ ಅಂಗಾಂಶಗಳು ಅಥವಾ ಕೋಶ ಆಧರಿತ ವಿಶ್ಲೇಷಣೆಗಳನ್ನು ಬಳಸಿಕೊಂಡು ಕ್ಲಿನಿಕಲ್‌ ಟ್ರಯಲ್‌ ನಡೆಸಲಾಗುತ್ತದೆ. ಈ ಮೂಲಕ ಔಷಧ ಪಡೆದವರ ಸುರಕ್ಷತೆ ಮತ್ತು ಅದರ ಸಾಮರ್ಥ್ಯದ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ಈ ಪ್ರಕ್ರಿಯೆಗಳು ಮುಗಿದ ಮೇಲಷ್ಟೇ ಮಾನವನ ಮೇಲೆ ಕ್ಲಿನಿಕಲ್‌ ಟ್ರಯಲ್‌ ನಡೆಸಲಾಗುತ್ತದೆ.

ಯಶಸ್ಸಿನ ದರ ಹೆಚ್ಚು: ಮಾನವನ ಅಂಗಾಂಶಗಳು ಮತ್ತು ಜೀವಕೋಶಗಳ ಆಧರಿತ ಪರೀಕ್ಷೆ ನಡೆಸುವುದರಿಂದ ಔಷಧಗಳ ಪರಿಣಾಮವನ್ನು ಅರಿಯುವುದು ಸುಲಭವಾಗುತ್ತದೆ.

ಅಲ್ಲದೆ ಒಮ್ಮೆ ಈ ರೀತಿಯ ಪರ್ಯಾಯ ವಿಧಾನಗಳನ್ನು ಬಳಸಿಕೊಂಡು ಮಾಡಿದ ಔಷಧಗಳ ಯಶಸ್ಸಿನ ದರವೂ ಶೇ.70ರಿಂದ 80ರಷ್ಟಿರುತ್ತದೆ. ಆದರೆ ಪ್ರಾಣಿಗಳ ಮೇಲೆ ನಡೆಸಲಾದ ಕ್ಲಿನಿಕಲ್‌ ಟ್ರಯಲ್‌ನಿಂದ ರೂಪಿಸಲಾದ ಔಷಧಗಳು ಶೇ. 80ರಿಂದ ಶೇ.90ರಷ್ಟು ವೈಫ‌ಲ್ಯ ಹೊಂದುತ್ತವೆ ಎಂದು ಅಧಿಕೃತ ಮೂಲಗಳು ಹೇಳಿವೆ.

Advertisement

ಅಮೆರಿಕದ ಮಾದರಿ: ಕಳೆದ ಸೆಪ್ಟಂಬರ್‌ನಲ್ಲಷ್ಟೇ ಅಮೆರಿಕದ ಕಾಂಗ್ರೆಸ್‌, ಐತಿಹಾಸಿಕ ಎಫ್ಡಿಎ ಸುಧಾರಿತ ಮಸೂದೆಗೆ ಒಪ್ಪಿಗೆ ನೀಡಿತ್ತು. ಇದರಲ್ಲಿ ಫಾರ್ಮಾಸುÂಟಿಕಲ್‌ ಡ್ರಗ್‌ ಉತ್ಪಾದನೆ ಮಾಡುವವರಿಗೆ ಪರ್ಯಾಯ ವಿಧಾನಗಳನ್ನು ಅನುಸರಿಸಲು ಒಪ್ಪಿಗೆ ನೀಡಲಾಗಿದೆ.

ಎರಡನೇ ದೇಶ
ಕೇಂದ್ರ ಸರಕಾರ ಜಾರಿಗೆ ತರಲು ಹೊರಟಿರುವ ತಿದ್ದುಪಡಿ ಕಾಯ್ದೆಗೆ ಒಪ್ಪಿಗೆ ಸಿಕ್ಕರೆ, ಅಮೆರಿಕದ ಬಳಿಕ ಇಂಥ ನಿರ್ಧಾರ ತೆಗೆದುಕೊಂಡ ಜಗತ್ತಿನ ಎರಡನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ. ಅಲ್ಲದೆ, ಔಷಧಗಳ ಬಳಕೆ ಮುನ್ನ ಪರೀಕ್ಷೆಗಾಗಿ ನಡೆಸುವ ಖರ್ಚು ವೆಚ್ಚಕ್ಕೆ ಕಡಿವಾಣ, ಕ್ಲಿನಿಕಲ್‌ ಟ್ರಯಲ್‌ ಹೆಸರಿನಲ್ಲಿ ಪ್ರಾಣಿಗಳ ಮೇಲೆ ನಡೆಯುತ್ತಿದ್ದಂಥ ಕ್ರೌರ್ಯಕ್ಕೂ ಕಡಿವಾಣ ಬೀಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next