Advertisement

ಪರಾರಿಯಾಗಿದ್ದ ವಿಚಾರಣಾಧೀನ ಕೈದಿ ಸೆರೆ

11:02 AM Mar 15, 2017 | Harsha Rao |

ಸುಳ್ಯ/ಮಂಗಳೂರು: ಕಾರಾಗೃಹದಿಂದ ಪರಾರಿಯಾಗಿದ್ದ ವಿಚಾರಣಾಧೀನ ಕೈದಿ ಜಿನ್ನಪ್ಪ ಪರವನನ್ನು (43) ಸುಳ್ಯ ಪೊಲೀಸರು ಸುಳ್ಯದ ಕಂದ್ರಪ್ಪಾಡಿಯಲ್ಲಿ ಮಂಗಳವಾರ ಬಂಧಿಸಿದ್ದಾರೆ. 

Advertisement

ಅತ್ಯಾಚಾರ ಅರೋಪದಲ್ಲಿ ಬಂಧಿತನಾಗಿ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಇದ್ದ ಬೆಳ್ತಂಗಡಿ ತಾಲೂಕು ಗರ್ಡಾಡಿ ಗ್ರಾಮದ ಬೊಳ್ತಾಲು ಜಿನ್ನಪ್ಪ ಪರವ ಮಾ. 10ರಂದು ತಪ್ಪಿಸಿಕೊಂಡಿದ್ದ. ಈ ಕುರಿತಂತೆ ಮಂಗಳೂರಿನ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ವಿಚಾರಣಾಧೀನ ಕೈದಿಯಾಗಿರುವ ಜಿನ್ನಪ್ಪ ಜೈಲಿನಲ್ಲಿ ಬಾಣಸಿಗನಾಗಿದ್ದು, ಬೆಳಗ್ಗಿನ ಉಪಾಹಾರ ತಯಾರಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದು ಬೆಳಗ್ಗೆ 3.30ಕ್ಕೆ ಎದ್ದು ಗ್ಯಾಸ್‌ ಸಿಲಿಂಡರನ್ನು ಆನ್‌ ಆಫ್‌ ಮಾಡಿ ಗ್ಯಾಸ್‌ ಸಂಪರ್ಕ ಕಲ್ಪಿಸುವುದು ಮತ್ತು ಸ್ಟವ್‌ ಉರಿಸುವ ಕರ್ತವ್ಯ ನಿಭಾಯಿಸುತ್ತಿದ್ದನು.

ಮಾ. 10ರಂದು  ಬೆಳಗ್ಗೆ ಎಂದಿನಂತೆ ಗ್ಯಾಸ್‌ಸ್ಟವ್‌ ಉರಿಸುವ ಕೆಲಸಕ್ಕೆ ಬಂದು ಅಲ್ಲಿಂದ ಪರಾರಿಯಾಗಿದ್ದ.
ಬಸ್‌ ಮೂಲಕ ಮಡಂತ್ಯಾರ್‌ಗೆ ತೆರಳಿದ್ದ ಜೈಲ್‌ನಿಂದ ತಪ್ಪಿಸಿಕೊಂಡ ಬಳಿಕ ಕೊಡಿಯಾಲ್‌ ಬೈಲ್‌ ಮೂಲಕ  ಕದ್ರಿಗೆ ಬಂದು ಅಲ್ಲಿಂದ  ಕಂಕನಾಡಿ ಬಸ್‌ ನಿಲ್ದಾಣಕ್ಕೆ  ಸುಮಾರು 5 ಗಂಟೆಯ ವೇಳೆಗೆ ಬಂದಿದ್ದ. ಅಲ್ಲಿ ದಾವಣಗೆರೆಗೆ ಹೋಗುವ ಕೆಎಸ್‌ಆರ್‌ಟಿಸಿ ಬಸ್‌ ಹತ್ತಿ ಬೆಳಗ್ಗೆ 6.30ಕ್ಕೆ ಮಡಂತ್ಯಾರ್‌ ತಲುಪಿದ್ದ. ಮಡಂತ್ಯಾರಿನಲ್ಲಿ ಬಸ್‌ನಿಂದ ಇಳಿದು ಆಟೋರಿಕ್ಷಾ ಮೂಲಕ 7 ಗಂಟೆಗೆ  ಗರ್ಡಾಡಿ ಬೊಳ್ತಾಲು ಗುಡ್ಡೆಯಲ್ಲಿರುವ ತನ್ನ  ಮನೆಗೆ ತೆರಳಿದ್ದ. ಆದರೆ  ಮನೆಯ ಬಾಗಿಲ ಒಡೆದು ಹಾಕಿದ್ದು  ಮನೆಯ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿದ್ದವು. ಅಲ್ಲಿದ್ದ ಕಪ್ಪು ಬಣ್ಣದ ಪ್ಯಾಂಟನ್ನು ತೆಗದುಕೊಂಡಿದ್ದು  ಅಲ್ಲಿಯೇ ಇದ್ದರೆ ಪೊಲೀಸರು ಹುಡುಕಿಕೊಂಡು ಬರಬಹುದು ಎಂದು ಭಾವಿಸಿ ಅಲ್ಲಿಂದ ನಡೆದುಕೊಂಡು ಗಿಂಡಾಡಿಯ ಸ್ನೇಹಿತನ ಮನೆಗೆ ಹೋಗಿದ್ದ. ಸಂಜೆ 5 ಗಂಟೆಯವರೆಗೆ ಅಲ್ಲಿದ್ದು ಬಳಿಕ ಪೊಯ್ಯಗುಡ್ಡೆಯ ಪರಿಚಯದವರ ಮನೆಗೆ  ತೆರಳಿದ. ಅಲ್ಲಿಂದ ಪಡಂಗಡಿ ಬಂದು ಗುಡ್ಡೆಯಲ್ಲಿ ರಾತ್ರಿ ಉಳಿದುಕೊಂಡು ಮರುದಿನ ಮಡಂತ್ಯಾರಿಗೆ ಬಂದು ಬಸ್‌ ಮೂಲಕ ಉಪ್ಪಿನಂಗಡಿಗೆ  ತೆರಳಿದ್ದ. ಉಪ್ಪಿನಂಗಡಿಯಿಂದ   ಕುಕ್ಕುಜಡ್ಕಕ್ಕೆ  ತೆರಳಿ ದೂರದ ಸಂಬಂಧಿಕರ ಮನೆಯಲ್ಲಿ ಊಟ ಮಾಡಿ ಅಲ್ಲಿ ಕುಂದ್ರಪಾಡಿಗೆ ತೆರಳಿದ್ದ ಎಂದು ವಿಚಾರಣೆ ವೇಳೆ ತಿಳಿಸಿದ್ದಾನೆ. 

ಸಂಬಂಧಿಕರ ಮನೆಯವರಿಗೆ ಈತ ಜೈಲಿನಿಂದ ತಪ್ಪಿಸಿಕೊಂಡು ಬಂದಿರುವ ಬಗ್ಗೆ ತಿಳಿದಿರಲಿಲ್ಲ ಸುಳ್ಯ ಪೊಲೀಸರಿಗೆ ಈತ ಕಂದ್ರಪ್ಪಾಡಿ ಪರಿಸರದಲ್ಲಿ ಇರುವುದರ ಕುರಿತು ಮಾಹಿತಿ  ಲಭಿಸಿತ್ತು.  ಕಂದ್ರಪ್ಪಾಡಿ  ಪರಿಸರದಲ್ಲಿ   ದೈವದ ನೇಮ  ಇದ್ದು ಅಲ್ಲಿ  ತಿರುಗಾಡಿಕೊಂಡಿದ್ದ. ಪೊಲೀಸರು  ಕಂದ್ರಪ್ಪಾಡಿಯಿಂದ ಆತನನ್ನು ವಶಕ್ಕೆ ಪಡೆದು  ಬರ್ಕೆ ಪೊಲೀಸರಿಗೊಪ್ಪಿಸಿದರು. 

Advertisement

ಮಾನಸಿಕ ಖನ್ನತೆಗೆ ಒಳಗಾಗಿದ್ದ ಅತ್ಯಾಚಾರ ಪ್ರಕರಣದ ಬಳಿಕ ಆತನನ್ನು ಸಂಬಂಧಿಕರು ದೂರ ಮಾಡಿದ್ದರು. ಜಾಮೀನು  ಸಿಕ್ಕಿರಲಿಲ್ಲ. ಇದರಿಂದ ಆತ ಖನ್ನತೆಗೊಳಗಾಗಿದ್ದ. ಇದರ ಜತೆಗೆ ಆತನಿಗೆ ಚರ್ಮರೋಗ, ಕಿಡ್ನಿ ಸಮಸ್ಯೆಯೂ ಕಾಡುತ್ತಿತ್ತು. ಇದರ ಜತೆಗೆ ಹೆಂಡತಿ ಹಾಗೂ ಮಕ್ಕಳನ್ನು ನೋಡಲು ಆಸೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿತ್ತು. ಇದರಿಂದ ಆತ ಜೈಲಿನಿಂದ ತಪ್ಪಿಸಿಕೊಂಡು ಹೋಗಲು ನಿರ್ಧರಿಸಿದ್ದ  ಎಂದು ವಿಚಾರಣೆ ವೇಳೆ ತಿಳಿಸಿದ್ದಾನೆ. 

ಜಿನ್ನಪ್ಪ ಪರವ 2015ರ ಆ. 19ರಂದು ಯುವತಿಯೋರ್ವಳನ್ನು ಕೆಲಸ ಕೊಡಿಸುವ ನೆಪದಲ್ಲಿ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪದಡಿ ಉಪ್ಪಿನಂಗಡಿ ಪೊಲೀಸರಿಂದ ಬಂಧಿತನಾಗಿದ್ದನು. ಆತನಿಗೆ ಇದುವರೆಗೂ ಜಾಮೀನು ಸಿಕ್ಕಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next