ಬೀದರ: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಕೇಂದ್ರದ ಸಂಸ್ಕೃತಿ ಸಚಿವಾಲಯ ದೇಶದ 175 ಐತಿಹಾಸಿಕ ಕೋಟೆಗಳಿಗೆ ವಿದ್ಯುತ್ ದೀಪಾಲಂಕಾರ ಮಾಡುವ ಮೂಲಕ ಮತ್ತಷ್ಟು ಮೆರಗು ಹೆಚ್ಚಿಸಿದೆ. ಅದರಂತೆ ಬೀದರನ ಬಹುಮನಿ ಅರಸರ ಕೋಟೆ ಸ್ಮಾರಕವನ್ನೂ ದೀಪಗಳಿಂದ ಬೆಳಗಿಸಲಾಗಿದ್ದು, ರಾತ್ರಿ ವೇಳೆ ಝಗಮಗಿಸುತ್ತಿದೆ.
ವಿದ್ಯುತ್ ದೀಪಾಲಂಕಾರಕ್ಕಾಗಿ ರಾಜ್ಯದ ವಿವಿಧ ಕೋಟೆ ಸ್ಮಾರಕ ಆಯ್ಕೆ ಮಾಡಿಕೊಳ್ಳಲಾಗಿದ್ದು, ಅದರಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಹಂಪಿ ವಿಭಾಗದ ಬೀದರ, ಕಲಬುರಗಿ ಮತ್ತು ಬಳ್ಳಾರಿ ಕೋಟೆಗಳು ಸಹ ಸೇರಿವೆ. ಟೆಂಡರ್ ಮೂಲಕ ಖಾಸಗಿಯವರಿಗೆ ಯೋಜನೆ ನೀಡಲಾಗಿದ್ದು, ಬೀದರ ಕೋಟೆಯ ಗುಂಬಜ್ ದವಾಜಾ (ಮುಖ್ಯದ್ವಾರ) ಮತ್ತು ತರ್ಕಿಶ್ ಮಹಲ್ ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳೊಂದಿಗೆ ಕಂಗೊಳಿಸುತ್ತಿವೆ. ಈಗ ಈ ಪ್ರಾಚೀನ ಸ್ಮಾರಕ ರಾತ್ರಿ ವೇಳೆ ಅತ್ಯಂತ ಆಕರ್ಷಣೀಯವಾಗಿ ಎಲ್ಲರ ಕಣ್ಮನ ಸೆಳೆಯುತ್ತಿದೆ.
ಚಾರಿತ್ರಿಕ ಕೋಟೆ-ಕೊತ್ತಲಗಳು, ಪಾರಂಪರಿಕ ಮತ್ತು ಧಾರ್ಮಿಕ ಕೇಂದ್ರಗಳನ್ನು ಹೊದ್ದು ಮಲಗಿರುವ ಬೀದರ ಪ್ರವಾಸಿ ತಾಣವಾಗಿದೆ. ಬೀದರ ನಗರ ಸೇರಿ ನಾಲ್ಕು ದಿಕ್ಕುಗಳಲ್ಲಿಯೂ ಒಂದಿಲ್ಲೊಂದು ಸ್ಮಾರಕಗಳು, ಅಳಿದುಳಿದ ಪಳೆಯುಳಿಕೆಗಳು ಇಂದಿಗೂ ಪುರಾತನ ಇತಿಹಾಸಕ್ಕೆ ಸಾಕ್ಷಿಯಾಗಿವೆ ನಿಂತಿವೆ.
ಇವುಗಳಲ್ಲಿ ದಕ್ಷಿಣ ಭಾರತದಲ್ಲೇ ಎರಡನೇ ಅತಿ ದೊಡ್ಡ ಕೋಟೆ ಖ್ಯಾತಿಯ ಹಾಗೂ ಕನ್ನಡ-ಹಿಂದಿ ಸೇರಿ ಹಲವು ಭಾಷೆ ಚಲನಚಿತ್ರಗಳ ಚಿತ್ರೀಕರಣ ನಡೆದಿರುವ ಬಹುಮನಿ ಕೋಟೆ ಪ್ರಮುಖವಾದದ್ದು. ಇಲ್ಲಿನ ವೈಭವ, ಜತೆಗೆ ಐತಿಹಾಸಿಕ ಹಿನ್ನೆಲೆ ಅರಿತುಕೊಳ್ಳಲು ದೇಶ-ವಿದೇಶಗಳಿಂದ ತಜ್ಞರು, ಪ್ರವಾಸಿಗರ ದಂಡು ಆಗಮಿಸುವುದು ವಿಶೇಷ. ಈಗ ತ್ರಿವರ್ಣ ಬೆಳಕಿನ ಸೊಬಗು ಹೆಚ್ಚಿಸಿರುವುದರಿಂದ ಅದನ್ನು ಕಣ್ತುಂಬಿಕೊಳ್ಳಲು ಜನ ಸಮೂಹ ಹರಿದು ಬರುತ್ತಿದೆ.
ಸಾಮಾನ್ಯವಾಗಿ ಎಎಸ್‌ಐ ಅಧೀನದ ಸ್ಮಾರಕಗಳ ವೀಕ್ಷಣೆಗೆ ಸಂಜೆ 6 ಗಂಟೆವರೆಗೆ ಮಾತ್ರ ಅವಕಾಶ ಇರುತ್ತದೆ. ಆದರೆ, ಅಮೃತ ಮಹೋತ್ಸವ ಪ್ರಯುಕ್ತ ವಿದ್ಯುತ್ ಸ್ಪರ್ಶದ ಭವ್ಯತೆ ವೀಕ್ಷಿಸಲು ಆ.15ರವರೆಗೆ ರಾತ್ರಿ 9.30ರವರೆಗೆ ಅವಕಾಶ ಮಾಡಿಕೊಡಲಾಗಿದೆ.
ಆಜಾದಿ ಕಾ ಅಮೃತ ಮಹೋತ್ಸವ ಪ್ರಯುಕ್ತ ಕೇಂದ್ರದ ಸಂಸ್ಕೃತಿ ಸಚಿವಾಲಯದಿಂದ ದೇಶದ 175 ಐತಿಹಾಸಿಕ ಕೋಟೆಗಳಿಗೆ ತ್ರಿವರ್ಣ ವಿದ್ಯುತ್ ದೀಪಾಲಂಕಾರ ಮಾಡಿ ಕಂಗೊಳಿಸಲಾಗಿದ್ದು, ಅದರಲ್ಲಿ ಬೀದರನ ಬಹುಮನಿ ಅರಸರ ಕೋಟೆಯೂ ಸೇರಿದೆ. ಆ.15ರವರೆಗೆ ರಾತ್ರಿ 9.30ರ ತನಕ ಈ ವೈಭವ ವೀಕ್ಷಿಸಲು ಅವಕಾಶ ಇದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸೊಬಗು ಕಣ್ತುಂಬಿಕೊಳ್ಳಬೇಕು.
ಅನಿರುದ್ಧ ದೇಸಾಯಿ, ಸಹಾಯಕ ಸಂರಕ್ಷಣಾಧಿಕಾರಿ,
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಬೀದರ
ಶಶಿಕಾಂತ ಬಂಬುಳಗೆ