ಬಿಳಿ ಬಣ್ಣದ ಉಡುಗೆ ಮೇಂಟೇನ್ ಮಾಡುವುದು ಕಷ್ಟ, ನಿಜ. ಆದರೆ ಆ ಬಟ್ಟೆ ಕಾಣುವಷ್ಟು ಚೆಂದ, ಬೇರೆ ಬಟ್ಟೆ ಕಾಣುವುದಿಲ್ಲ.ಅದಕ್ಕಾಗಿಯೇ ಸಂದರ್ಶನಕ್ಕೆ, ಮೀಟಿಂಗ್‌ಗೆ, ಅವಾರ್ಡ್ ಫಂಕ್ಷನ್‌ಗೆ ಮತ್ತು ಇತರ ಫಾರ್ಮಲ್ ಸಭೆ ಸಮಾರಂಭಗಳಿಗೆ ಜನ ಬಿಳಿ ಬಣ್ಣದ ಉಡುಗೆಯನ್ನು ತೊಡಲು ಇಷ್ಟ ಪಡುತ್ತಾರೆ. ಸೆಖೆಗೆ ಹತ್ತಿಯ ಬಟ್ಟೆ ನೀಡುವಷ್ಟು ಆರಾಮವನ್ನು ಬೇರೆ ಬಟ್ಟೆ ನೀಡುವುದಿಲ್ಲ. ಅದರಲ್ಲೂ ಹತ್ತಿಯ ಬಟ್ಟೆ ಬಿಳಿ ಬಣ್ಣದ್ದಾಗಿದ್ದರೆ ಇನ್ನೂ ಆರಾಮ.
ಉಡುಪು ಸಂಪೂರ್ಣವಾಗಿ ಬಿಳಿ ಬಣ್ಣದ್ದಾಗಿದ್ದರೆ ದೇಹಕ್ಕೂ- ಕಣ್ಣಿಗೂ ತಂಪು. ಬಿಳಿ ಬಣ್ಣ ಎಂದಾಕ್ಷಣ ಬೋರಿಂಗ್ ಆಗಿರಬೇಕಿಲ್ಲ. ವೆಸ್ಟರ್ನ್ (ಪಾಶ್ಚಾತ್ಯ) ಹಾಗೂ ಇಂಡಿಯನ್(ಸಾಂಪ್ರದಾಯಿಕ), ಎರಡೂ ಶೈಲಿಗಳಲ್ಲಿ ಬಿಳಿಬಣ್ಣದ ಉಡುಗೆಗಳು ಲಭ್ಯ ಇವೆ.
ಬಿಗಿಯಾಗಿರದ ಅಂದರೆ ಒಂದು ಸೈಜ್ ದೊಡ್ಡದಾಗಿರುವ ಬಿಳಿ ಬಣ್ಣದ ಹತ್ತಿಯ ಬಟ್ಟೆಯ ಉಡುಗೆಗಳು ಅತ್ಯುತ್ತಮ. ಈ ಬಿಳಿ ಬಣ್ಣದ ಸಿಂಪಲ್ ಕಾಂಬೋ ಎಂದರೆ ಬಿಳಿ ಕುರ್ತಿ ಅಥವಾ ಕುರ್ತಾ. ಅದರ ಜೊತೆಗೆ ಬಿಳಿ ಬಣ್ಣದಪ್ಯಾಂಟ್. ಪ್ಯಾಂಟ್ ನಲ್ಲಿ ಬಗೆ ಬಗೆಯಪ್ರಕಾರಗಳಿವೆ. ಸಲ್ವಾರ್ ಪ್ಯಾಂಟ್, ಪಟಿಯಾಲ,ಪಂಜಾಬಿ ಸೂಟ್, ಪಲಾಝೋ, ಹ್ಯಾರೆಮ್‌ಪ್ಯಾಂಟ್, ಜೀನೀ ಪ್ಯಾಂಟ್, ಬೆಲ್ ಬಾಟಮ್, ಪ್ಯಾರಲಲ್ ಪ್ಯಾಂಟ್, ಧೋತಿ ಪ್ಯಾಂಟ್, ಚೂಡಿದಾರ್, ಡೆನಿಮ್, ಕ್ಯಾಪ್ರೀಸ್, ಸ್ಕಿನೀ ಜೀನ್ಸ್, ಫ್ಲೇರ್ಡ್, ಎಲಿಫೆಂಟ್, ಇತ್ಯಾದಿ. ಬಿಳಿ ಬಣ್ಣದ ಚಿಕ್ಕ ಕುರ್ತಿ ಜೊತೆ ಬಿಳಿ ಬಣ್ಣದ್ದೇ ಉದ್ದ ಲಂಗವನ್ನೂ ತೊಡಬಹುದು. ಕುರ್ತಿ ಜೊತೆ ಬಿಳಿ ಬಣ್ಣದ ವೇಸ್ಟ್ ಕೋಟ್, ಜಾಕೆಟ್ ತೊಡಬಹುದು. ಇವಿಷ್ಟಲ್ಲದೇ ಶಾಲು, ಸ್ಕಾರ್ಫ್ ಅಥವಾ ದುಪಟ್ಟಾವನ್ನೂ ತೊಡಬಹುದು. ಇವು ಬಿಸಿಲಿನಿಂದ ರಕ್ಷಣೆ ನೀಡುವಲ್ಲಿ ಸಹಾಯಕಾರಿ ಆಗಿರುತ್ತವೆ. ಇವಿಷ್ಟು ಇಂಡಿಯನ್‌ಸ್ಟೈಲಿನ ಉಡುಗೆಗಳಾದರೆ ವೆಸ್ಟರ್ನ್ ಸ್ಟೈಲ್ ನಲ್ಲಿ ಬಿಳಿ ಅಂಗಿ ಜೊತೆ ಬಿಳಿ ಡೆನಿಮ್ ಅಥವಾ ಬಿಳಿ ಫಾರ್ಮಲ್ ಪ್ಯಾಂಟ್ ತೊಡಬಹುದು.
ಕ್ಯಾಶುವಲ್ ಲುಕ್ ಬೇಕಿದ್ದರೆ ಬಿಳಿ ಬಣ್ಣದ ಟೀ ಶರ್ಟ್ ನೊಂದಿಗೆ ಬಿಳಿ ಬಣ್ಣದ ಶಾರ್ಟ್‌ಸ್, ಸ್ಕರ್ಟ್, ಹಾಟ್ ಪಾಂಟ್ಸ್ ಅಥವಾ ಪಲಾಝೋ ಕೂಡ ತೊಡಬಹುದು. ಸಂಪೂರ್ಣ ಬಿಳಿ ಬಣ್ಣದ
ಡ್ರೆಸ್ ಗಳೂ ಸಿಗುತ್ತವೆ. ಅವುಗಳಲ್ಲಿ ಸೈಡ್ ಪಾಕೆಟ್ (ಜೇಬು) ಮತ್ತು ಬೆಲ್ಟ್ (ಸೊಂಟಪಟ್ಟಿ) ಆಯ್ಕೆಯೂ ಇರುತ್ತವೆ. ವೆಸ್ಟರ್ನ್ ಸ್ಟೈಲಿನಲ್ಲಿ ಇನ್ನೂ ಒಂದು ಪ್ರಕಾರ ಎಂದರೆ ಒನ್ ಪೀಸ್. ಶರ್ಟ್ ಡ್ರೆಸ್, ಜಂಪ್ ಸೂಟ್, ಕಾಕ್ಟೇಲ್ ಔಟ್ ಫಿಟ್, ರಾಪ್ ಡ್ರೆಸ್, ಸನ್ ಡ್ರೆಸ್, ಫ್ರಾಕ್, ಮಿಡಿ ಡ್ರೆಸ್ ಮತ್ತು ಗೌನ್ ಗಳಲ್ಲೂ ಬಿಳಿ ಬಣ್ಣದ ಆಯ್ಕೆಗಳಿವೆ. ಸಂಪೂರ್ಣ ಬಿಳಿ ಬಣ್ಣದ ಜಂಪ್ ಸೂಟ್ ಕೂಡ ಬಹಳ ಜನಪ್ರಿಯ. ಸ್ಲಿವ್ ಲೆಸ್ (ತೋಳುಗಳು ಇಲ್ಲದ) ಉಡುಪುಗಳೂ ಆರಾಮದಾಯಕ ಆಗಿರುತ್ತವೆ. ಉಡುಪಿನ ಬಟ್ಟೆ ಹತ್ತಿಯಿಂದ ಮಾಡಲಾಗಿರುವ ಕಾರಣ, ಬಟ್ಟೆ ಬೆವರನ್ನು ಹೀರಿಕೊಳ್ಳುತ್ತದೆ. ಹಾಗಾಗಿ, ತೋಳುಗಳು ಇದ್ದರೂ, ಇಲ್ಲದಿದ್ದರೂ ಸಮಸ್ಯೆ ಇಲ್ಲ. ನಿಮ್ಮ ಅಭಿರುಚಿಗೆ ತಕ್ಕಂತೆ ತೋಳುಗಳು ಬೇಕೋ ಬೇಡವೋ ಎಂದು ನಿರ್ಧರಿಸಬಹುದು.
ಇನ್ನು ಬಿಳಿ ಬಣ್ಣದ ಅಂಗಿ, ಕೋಟು, ಲಂಗ ಅಥವಾ ಪ್ಯಾಂಟ್ ಮೇಲೆ ಬಿಳಿ ಬಣ್ಣದ ದಾರಗಳಿಂದ ಕಸೂತಿ ಕೆಲಸ ಮಾಡಿರುವ ಆಯ್ಕೆಗಳೂ ಇವೆ. ಅಥವಾ ಮಾಡಿಸಿದರೆ ಉಡುಪಿನಅಂದ ಇನ್ನೂ ಹೆಚ್ಚಾಗುತ್ತದೆ. ಬಿಳಿ ಬಣ್ಣದ ಉಡುಪಿನ ಮೇಲೆ ಲೇಸ್ ವರ್ಕ್‌ಮಾಡಿಸಬಹುದು. ಕ್ರೋಷೆ ಕೆಲಸಮಾಡಿಸಬಹುದು. ಲೇಸ್ ಮತ್ತು ಕ್ರೋಷೆ ಉಳ್ಳ ಬಿಳಿ ಬಣ್ಣದ ರೆಡಿಮೇಡ್ ಉಡುಪುಗಳೂ ಮಾರುಕಟ್ಟೆಯಲ್ಲಿ ಲಭ್ಯ ಇವೆ. ಅಂಗಡಿ – ಅಂಗಡಿ ಅಲೆಯುವಷ್ಟು ತಾಳ್ಮೆ ಅಥವಾ ಪುರುಸೊತ್ತು ಇಲ್ಲದವರು ಆನ್ಲೈನ್ ಮೂಲಕ ಇಂಥ ಉಡುಪುಗಳನ್ನು ತರಿಸಬಹುದು. ಹಾಲಿಡೇ, ಪಾರ್ಟಿ, ಅಥವಾ ಪಿಕ್ನಿಕ್ ಗಳಲ್ಲಿ ಬಿಳಿ ಬಣ್ಣದ ಟೋಪಿಯನ್ನೂ ತೊಡಬಹುದು. ಇವುಗಳ ಜೊತೆ ಬಿಳಿ ಬಣ್ಣದ ಪಾದರಕ್ಷೆಯನ್ನೂ ತೊಟ್ಟರೆ, ನೀವು ಧವಳ ದೇವತೆಯೇ!
-ಅದಿತಿಮಾನಸ. ಟಿ. ಎಸ್