ಸಿಂಧನೂರು: ರೌಡಕುಂದಾ ಗ್ರಾಮದಿಂದ ಮಲ್ಕಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಮಧ್ಯೆ ಸೇತುವೆ ಬಳಿ ಬೃಹತ್ ಗುಂಡಿ ಬಿದ್ದ ಪರಿಣಾಮ ವಾಹನ ಸವಾರರು ಆತಂಕ ಎದುರಿಸುವಂತಾಗಿದೆ.
ಇತ್ತೀಚೆಗೆ ಸುರಿದ ಮಳೆಯಿಂದಾಗಿ ರಸ್ತೆಯಲ್ಲಿ ದೊಡ್ಡ ಹೊಂಡ ಬಿದ್ದಿದ್ದು, ವಾಹನ ಸವಾರರು ಎಚ್ಚರಿಕೆಯಿಂದ ಸಾಗಬೇಕಿದೆ. ಮಳೆಹಾನಿ ಇಂದಾಗಿರುವ ವಿಪತ್ತನ್ನು ಸರಿಪಡಿಸಲು ಅಧಿಕಾರಿಗಳು ಗಮನ ಹರಿಸದಿದ್ದರಿಂದ ಈ ಮಾರ್ಗದಲ್ಲಿ ಸಂಚರಿಸುವ ಜನರು ಸಮಸ್ಯೆ ಎದುರಿಸುವಂತಾಗಿದೆ.
ಪಾಲಕರಿಗೆ ಆತಂಕ: ಮಲ್ಕಾಪುರ- ರೌಡಕುಂದಾ ಮಾರ್ಗದಲ್ಲಿ ದೊಡ್ಡ ಗುಂಡಿ ಬಿದ್ದಿರುವ ವಿಷಯ ಗೊತ್ತಾದ ಹಿನ್ನೆಲೆಯಲ್ಲಿ ಪಾಲಕರು ಆತಂಕಗೊಂಡಿದ್ದಾರೆ. ತಿರುವಿನ ಭಾಗದಲ್ಲಿ ಗುಂಡಿ ಬಿದ್ದಿರುವುದರಿಂದ ವಾಹನಗಳು ಆಯಾ ತಪ್ಪಿ ಬೀಳುವ ಅಪಾಯವಿದೆ.
ಮಲ್ಕಾಪುರ, ರೌಡಕುಂದಾ, ಗೋರೆಬಾಳ ಗ್ರಾಮದ ವಿದ್ಯಾರ್ಥಿಗಳನ್ನು ಕರೆದುಕೊಂಡು ಸಂಚರಿಸುವ 6ಕ್ಕೂ ಹೆಚ್ಚು ಸ್ಕೂಲ್ ಬಸ್ ಈ ಮಾರ್ಗದಲ್ಲಿ ಸಂಚರಿಸುತ್ತವೆ. ಸಹಜವಾಗಿಯೇ ಪಾಲಕರು, ವಾಹನ ಚಾಲಕರಿಗೆ ನಿತ್ಯವೂ ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ಮನವಿ ಮಾಡುತ್ತಿದ್ದಾರೆ.
ಸ್ಪಂದನೆಯಿಲ್ಲ: ಇತ್ತೀಚೆಗೆ ಸುರಿದ ಮಳೆಯಿಂದ ಉಂಟಾಗಿರುವ ಅಪಾರ ಪ್ರಮಾಣದ ಹಾನಿಯ ಕುರಿತು ಸರಿಯಾದ ಸಮೀಕ್ಷೆ ನಡೆಯುತ್ತಿಲ್ಲವೆಂಬ ದೂರು ಕೇಳಿಬಂದಿವೆ. ಮುಖ್ಯರಸ್ತೆಯಲ್ಲಿ ದೊಡ್ಡ ಕಂದಕ ಬಿದ್ದು ವಾರ ಗತಿಸಿದರೂ ಸಂಬಂಧಿ ಸಿದ ಯಾವೊಬ್ಬ ಇಲಾಖೆಯ ಅಧಿಕಾರಿಯು ಕೂಡ ಸ್ಥಳಕ್ಕೆ ಭೇಟಿ ನೀಡಿಲ್ಲ. ರಾಮಾಕ್ಯಾಂಪ್ ಗೆ ಇರುವ ರಸ್ತೆ, ಗಜಲಕ್ಷ್ಮೀ ಕ್ಯಾಂಪಿನ ರಸ್ತೆಯೂ ಮಳೆಯಿಂದಾಗಿ ಹಾನಿಯಾಗಿದ್ದು, ಸಂಚರಿಸಲು ಯೋಗ್ಯವಾಗಿಲ್ಲ. ಈ ಮಾರ್ಗದಲ್ಲಿ ರೈತರು ಸಾಗಲು ನಿತ್ಯವೂ ಹರಸಾಹಸ ಪಡುವಂತಾಗಿದೆ.
ಬಂಗಾರಿ ಕ್ಯಾಂಪಿನಲ್ಲಿ ಶಾಲೆ ಆವರಣದಲ್ಲೇ ಮಳೆನೀರು ನಿಲ್ಲುತ್ತಿರುವುದು ಸಾಂಕ್ರಾಮಿಕ ಕಾಯಿಲೆ ಭೀತಿ ಎದುರಾಗಿದೆ. ಅತಿಯಾದ ಮಳೆಯಿಂದ ಉಂಟಾಗಿರುವ ವಿಪತ್ತನ್ನು ನಿವಾರಿಸುವ ನಿಟ್ಟಿನಲ್ಲಿ ಆಡಳಿತ ವರ್ಗ ಮುನ್ನೆಚ್ಚರಿಕೆ ವಹಿಸಿದ್ದರಿಂದ ಜನಸಾಮಾನ್ಯರು ಸಂಕಷ್ಟ ಎದುರಿಸುವಂತಾಗಿದೆ.