ಹುಬ್ಬಳ್ಳಿ: ಸಮಾಜ-ಸಮಾಜಗಳ ನಡುವೆ ಕಂದಕ ಸೃಷ್ಟಿಸುವ ಕೆಲಸಗಳು ನಡೆಯುತ್ತಿದ್ದು, ಈ ಕುರಿತು ಎಲ್ಲರೂ ಜಾಗೃತರಾಗುವುದು ಅವಶ್ಯ ಎಂದು ಬ್ರಾಹ್ಮಣ ಸಮಾಜದ ಮುಖಂಡ ಎಂ.ಬಿ. ನಾತು ಹೇಳಿದರು.
ಗೋಕುಲ ರಸ್ತೆ ಡಾ| ಕೆ.ಎಸ್. ಶರ್ಮಾ ಸಭಾಭವನದಲ್ಲಿ ಶಿವ ಚಿದಂಬರ ಚೈತನ್ಯ ಸೇವಾ ಸಮಿತಿ ಆಶ್ರಯದಲ್ಲಿ ಗುರುವಾರ ನಡೆದ ಶ್ರೀ ಚಿದಂಬರ ಜನ್ಮೋತ್ಸವ ಹಾಗೂ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಇಂದು ಸಮಾಜದಲ್ಲಿ ಕೆಲವರು ಅದು ಬೇರೆ, ಇದು ಬೇರೆ ಎಂದು ಹೇಳುವ ಮೂಲಕ ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ. ಇಂತಹದೆಲ್ಲವನ್ನು ಬ್ರಾಹ್ಮಣ ಸಮಾಜ ಮೆಟ್ಟಿ ನಿಲ್ಲಬೇಕು ಎಂದರು. ಪಾಲಿಕೆ ಸದಸ್ಯ ದೀಪಕ ಚಿಂಚೋರೆ ಮಾತನಾಡಿ, ವೇದ ಮಂತ್ರಘೋಷ ನೀಡಿರುವ ಬ್ರಾಹ್ಮಣರು ಇದುವರೆಗೂ ನಮಗೂ ಮೀಸಲಾತಿ ನೀಡಿ ಎಂದು ಕೇಳಿಲ್ಲ.
ಇನ್ನುಳಿದ ಸಮಾಜದವರು ನಮಗೆ ಮೀಸಲಾತಿ ನೀಡಿ ಎಂದು ಹೋರಾಟ ನಡೆಸಿರುವುದನ್ನು ನಾವೆಲ್ಲರೂ ನೋಡುತ್ತೇವೆ. ಆದರೆ ವಿಪ್ರ ಸಮಾಜ ಮಾತ್ರ ಅಂತಹ ಯಾವುದೇ ಕೆಲಸಕ್ಕೆ ಮುಂದಾಗದೆ ಇರುವುದು ಶ್ಲಾಘನೀಯ.
ಈ ಬಾರಿ ಪಾಲಿಕೆ ಸದಸ್ಯನಾಗಿ ಆಗಮಿಸಿರುವ ನಾನು ಮುಂದಿನ ಬಾರಿ ಶಾಸಕನಾಗಿ ಬರುವಂತೆ ನೀವೆಲ್ಲರೂ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು. ನೀತಿನ ಶರ್ಮಾ ಮಾತನಾಡಿ, ಸಂಸ್ಕೃತ ಭಾಷೆ, ವೇದಗಳನ್ನು ಉಳಿಸಿ-ಬೆಳೆಸುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
ಇಂದು ಸಂಸ್ಕೃತ ಭಾಷೆ ಬಲ್ಲವರಿಗೆ ವೇದದ ಮಾಹಿತಿ ಇರುತ್ತದೆ. ಇಲ್ಲವಾದಲ್ಲಿ ಸಮಸ್ಯೆಯಾಗಲಿದೆ ಎಂದರು. ಇದಕ್ಕೂ ಪೂರ್ವದಲ್ಲಿ ಶ್ರೀ ಚಿದಂಬರ ತೊಟ್ಟಿಲೋತ್ಸವ ನಡೆಯಿತು. ಇದೇ ಸಂದರ್ಭದಲ್ಲಿ ಹಲವರನ್ನು ಸನ್ಮಾನಿಸಲಾಯಿತು.
ಅಗಡಿ ಶ್ರೀ ಕ್ಷೇತ್ರ ಆನಂದವನದ ಶ್ರೀ ಗುರುದತ್ತಮೂರ್ತಿ ಚಕ್ರವರ್ತಿಗಳು ಸಾನ್ನಿಧ್ಯ ವಹಿಸಿದ್ದರು. ಡಾ| ಬಿ.ಆರ್. ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ನಟ ಸುನೀಲ ಪುರಾಣಿಕ, ಉಮೇಶ ಚಕ್ರವರ್ತಿ, ಅರವಿಂದ ಕುಲಕರ್ಣಿ, ಎಂ.ಸಿ. ಕುಲಕರ್ಣಿ, ವಿ. ವೆಂಕಣ್ಣ ಭಟ್, ಎಚ್.ಎಲ್. ಕುಲಕರ್ಣಿ, ಚಿದಂಬರ ಕುಲಕರ್ಣಿ ಇತರರಿದ್ದರು.