ಅಜೆಕಾರು: ಕಾರ್ಕಳ ತಾಲೂಕಿನ ವಿವಿಧೆಡೆ ರಸ್ತೆ ವಿಸ್ತರಣೆ ಸಂದರ್ಭ ರಸ್ತೆಯ ಅಂಚಿನ ಮರಗಳನ್ನು ಹಾಗೆಯೇ ಬಿಟ್ಟು ಮರದ ಸುತ್ತಲಿನ ಮಣ್ಣನ್ನು ಅಗೆದಿರುವುದರಿಂದ ಮಳೆಗಾಲದಲ್ಲಿ ತೀವ್ರ ಅಪಾಯ ಉಂಟುಮಾಡಲಿದೆ.
ತಾಲೂಕಿನಾದ್ಯಂತ ಕಳೆದ 5-6 ತಿಂಗಳಿನಿಂದ ಖಾಸಗಿ ದೂರವಾಣಿ ಕಂಪೆನಿ ಯವರು ರಸ್ತೆಯ ಅಂಚಿನಲ್ಲಿಯೇ ಬೃಹತ್ ಗಾತ್ರದ ಗುಂಡಿ ನಿರ್ಮಾಣನಡೆಸುತ್ತಿದ್ದು ಈ ಗುಂಡಿ ಸಮೀಪದ ಮರಗಳ ಬೇರು ಕಡಿತಗೊಂಡು ಮಳೆಗಾಲದಲ್ಲಿ ಮರಗಳು ಉರುಳಿ ಬೀಳುವ ಅಪಾಯವಿದೆ.
ಈಗಾಗಲೇ ಮುನಿಯಾಲಿನಲ್ಲಿ ಎ.23ರಂದು ಬೀಸಿದ ಗಾಳಿಗೆ ಹಲವು ಬೃಹತ್ ಮರಗಳು ಉರುಳಿಬಿದ್ದು ಸುಮಾರು 3ರಿಂದ 4 ಗಂಟೆಗಳ ಕಾಲ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಹಲವು ವಿದ್ಯುತ್ ಕಂಬಗಳು ಧರೆಗುರುಳಿ ಅಪಾರ ನಷ್ಟ ಸಂಭವಿಸಿತ್ತು.
ಕಾರ್ಕಳ ತಾಲೂಕಿನ ಬಹುತೇಕ ರಸ್ತೆಗಳ ಅಂಚಿನಲ್ಲಿ ಗುಂಡಿಗಳ ಅಗೆತ ನಡೆಸಲಾಗಿದ್ದು ಈಗಾಗಲೇ ಹಲವು ವಾಹನ ಅಪಘಾತ ಸಂಭವಿಸಲಿವೆ. ಲೋಕೋಪಯೋಗಿ ಇಲಾಖೆ ರಸ್ತೆಯ ಅಂಚಿನಲ್ಲಿ ಗುಂಡಿಗಳ ನಿರ್ಮಾಣಕ್ಕೆ ಅನುಮತಿ ನೀಡುವ ಸಂದರ್ಭ ಪ್ರಯಾಣಿಕರ ಹಿತದೃಷ್ಟಿಯನ್ನು ಗಮನಿಸಬೇಕು ಎಂಬುದು ಸ್ಥಳೀಯರ ಒತ್ತಾಯ. ಜತೆಗೆ ರಸ್ತೆ ವಿಸ್ತರಣೆ ಸಂದರ್ಭ ಮೊದಲು ಮರಗಳ ತೆರವು, ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಅನಂತರ ರಸ್ತೆಯನ್ನು ಅಭಿವೃದ್ಧಿಪಡಿಸಬೇಕು ಎಂಬುದು ಸ್ಥಳೀಯರ ಅಭಿಪ್ರಾಯ.
Advertisement
ಕಾರ್ಕಳ – ಉಡುಪಿ ಮುಖ್ಯ ರಸ್ತೆಯ ಜೋಡುರಸ್ತೆಯಿಂದ ಬೈಲೂರುವರೆಗೆ ರಸ್ತೆ ವಿಸ್ತರಣೆಗೊಳಿಸಿ ಡಾಮರುಗೊಳಿಸಲಾಗುತ್ತಿದ್ದು ಮರಗಳು ಮಾತ್ರ ತೆರವುಗೊಳ್ಳದೆ ಹಾಗೆಯೇ ಇದೆ. ಆದರೆ ಅದರ ಬುಡದ ಮಣ್ಣನ್ನು ತೆಗೆದು ಚರಂಡಿ ನಿರ್ಮಿಸ ಲಾಗುತ್ತಿರುವುದರಿಂದ ಬೃಹತ್ ಗಾತ್ರದ ಮರಗಳು ರಸ್ತೆಗೆ ಉರುಳಿ ಬಿದ್ದು ಸಂಪರ್ಕ ಕಡಿತವಾಗುವ ಭೀತಿ ಎದುರಾಗಿದೆ.
Related Articles
Advertisement
ಕೂಡಲೇ ರಸ್ತೆಯ ಪಕ್ಕದ ಇಕ್ಕೆಲಗಳ ಮರ ಹಾಗೂ ವಿದ್ಯುತ್ ಕಂಬ ತೆರವುಗೊಳಿಸುವ ಜತೆಗೆ ರಸ್ತೆಯ ಅಂಚಿನಲ್ಲಿ ಬೃಹತ್ ಗುಂಡಿ ನಿರ್ಮಾಣ ಮಾಡುವುದನ್ನು ತಡೆದು ಅಪಾಯ ನಡೆಯದಂತೆ ಮುನ್ನೆಚ್ಚರಿಕೆ ವಹಿಸುವಂತೆ ಲೋಕೋಪಯೋಗಿ, ಅರಣ್ಯ, ಮೆಸ್ಕಾಂ ಇಲಾಖೆ ನಡೆಸಬೇಕಾಗಿದೆ ಎಂಬುದು ನಾಗರಿಕರ ಆಗ್ರಹ.
ಅರಣ್ಯ ಇಲಾಖೆಯ ಸಹಕಾರ ಅಗತ್ಯ
ಪ್ರಮುಖ ರಸ್ತೆಗಳು ಅಭಿವೃದ್ಧಿಗೊಳ್ಳುವ ಸಂದರ್ಭ ಅರಣ್ಯ ಇಲಾಖೆಯವರು ಸಹಕಾರ ನೀಡುವುದು ಅತ್ಯಗತ್ಯ. ರಸ್ತೆಯಂಚಿನಲ್ಲಿರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸಿ ಮಳೆಗಾಲದಲ್ಲಿ ಸಂಭವಿಸಬಹುದಾದ ಅಪಾಯವನ್ನು ತಡೆಯುವಲ್ಲಿ ಲೋಕೋಪಯೋಗಿ ಇಲಾಖೆ ಹಾಗೂ ಅರಣ್ಯ ಇಲಾಖೆ ಕೂಡಲೇ ಕಾರ್ಯೊನ್ಮುಖವಾಗಬೇಕಾಗಿದೆ.
-ಸುಮಿತ್ ಶೆಟ್ಟಿ,, ಜಿಲ್ಲಾ ಪಂಚಾಯತ್ ಸದಸ್ಯರು
ಮರ ತೆರವಿಗೆ ಮನವಿ
ನಾಗರಿಕರಿಗೆ ಹಾಗೂ ವಾಹನ ಸಂಚಾರಕ್ಕೆ ಅಪಾಯಕಾರಿಯಾಗಿರುವ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಗೆ ಮನವಿ ಮಾಡಲಾಗುವುದು. ಮಳೆಗಾಲದ ಮೊದಲು ಅಪಾಯಕಾರಿ ಮರಗಳನ್ನು ಗುರುತಿಸಿ ಅರಣ್ಯ ಇಲಾಖೆಗೆ ಸೂಚಿಸಲಾಗುವುದು.
-ಸುಂದರ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಾರ್ಕಳ