Advertisement
ಮಳೆಗಾಲ-ಮಲೆನಾಡು ಪರ್ಫೆಕ್ಟ್ ಕಾಂಬಿನೇಷನ್! ಮಳೆಗಾಲದಲ್ಲಿ ಮಲೆನಾಡು, ಇರುವುದಕ್ಕಿಂತ ದುಪ್ಪಟ್ಟು ಸುಂದರವಾಗಿ ಕಾಣಿಸುತ್ತದೆ. ನಿರಂತರವಾಗಿ ಸುರಿಯುವ ಜಡಿ ಮಳೆ, ಹಗಲು-ರಾತ್ರಿಗೆ ಹೆಚ್ಚು ವ್ಯತ್ಯಾಸ ಎನಿಸದ ಮಬ್ಬು ಕತ್ತಲೆ, ಹೊರಗೆ ಕಾಲಿಡಲು ಥಂಡಿ, ಇಂಬಳ, ಚಕ್ರದ ಹುಳ, ಬಸವನಹುಳಗಳಂತಹ ಅತಿಥಿಗಳ ಆಗಮನ, ಎತ್ತ ನೋಡಿದರೂ ಹಸಿರು, ಸಂಜೆ ಆಗುತ್ತಿದ್ದಂತೆ ಜಿಂವ್ ಗುಡುವ ಜೀರುಂಡೆಗಳು, ಮರಗಳಿಂದ ತೊಟ್ಟಿಕ್ಕುವ ಮಳೆಯ ಹನಿಗಳ ಸದ್ದು, ಮಳೆಗಾಲದಲ್ಲಿ ಸೃಷ್ಟಿಯಾಗುವ ಸುಂದರ ಜಲಪಾತ ಗಳು- ಮಲೆನಾಡೆಂದರೆ ಅದು ಅಪ್ಪಟ ಸ್ವರ್ಗ! ಬೆಂಕಿಯ ಒಲೆಯ ಮುಂದೆ ಕೂತರೆ ಸಾಕು, ಎದ್ದೇಳಲು ಮನಸ್ಸು ಬಾರದು, ಲೋಟದ ಮೇಲೆ ಲೋಟ ಬಿಸಿ ಬಿಸಿ ಕಾಫಿ ಗಂಟಲಿಗೆ ಆಹಾರವಾದರೆ ಜೊತೆಗೆ ಹಲಸಿನ ಕಾಯಿಯ ಹಪ್ಪಳ, ಚಿಪ್ಸ್, ಬೆಂಕಿಯಲ್ಲಿ ಸುಟ್ಟ ಹಲಸಿನ ಬೀಜ, ಕಾಲಕ್ಕೆ ತಕ್ಕ ಹಾಗೆ ದೊರೆಯುವ ಕಳಲೆ, ಹಲಸು, ಪತ್ರೊಡೆಗಳಂತಹ ಖಾದ್ಯಗಳು ಆಹಾ ಎನಿಸುವಂತೆ ಮಾಡುವುದು ಸುಳ್ಳಲ್ಲ! ಇಂಥ ಮಳೆಗಾಲವನ್ನು ಬರಿದೆ ಆಸ್ವಾದಿಸುವ ಬದಲು ಪ್ರಕೃತಿಯ ಮಡಿಲಿನಲ್ಲಿ ಸವಿದರೆ..? ನೀವು ಸಾಹಸಿಗರಾಗಿದ್ದರೆ, ಚಾರಣ ಪ್ರಿಯರಾಗಿದ್ದರೆ, ಟ್ರೆಕ್ಕಿಂಗ್ ಫ್ರೀಕ್ ಎನ್ನುವ ಹಾಗೆ ಅಪರಿಮಿತ ಆಸಕ್ತಿ ನಿಮಗಿದ್ದರೆ ಮಳೆಗಾಲದ ಚಾರಣದ ಸವಿ ನಿಮಗರಿವಿರುತ್ತದೆ. ಇಲ್ಲದೇ ಹೋದರೆ ನೀವು ಈಗಾಗಲೇ ಬೇರೆ ರೀತಿಯ ಸಾಮಾಜಿಕ ಜಾಲತಾಣಗಳಲ್ಲಿ ಕಂಡ ಜಾಗಗಳಿಗೆ ಹೋಗಬೇಕೆಂದು ಯೋಚಿಸಿ ಹೊರಟಿರಬಹುದು. ಆದರೆ ಅದಕ್ಕೂ ಮೊದಲು ನೀವು ಅನೇಕ ವಿಷಯಗಳನ್ನು ಗಮನಿಸಬೇಕು.
Related Articles
Advertisement
ವಾರಾಂತ್ಯ ಎಂದರೆ ವೀಕೆಂಡ್ ಗೇಟ್ ವೇ ಎಂದು ತಿಳಿದು ರೆಸಾರ್ಟ್‌ಗಳಿಗೆ ಹೋಗಿ ಮೋಜು ಮಸ್ತಿ ಮಾಡುವ ವರ್ಗವೊಂದಿದೆ. ಈಗ ಅದರ ವ್ಯಾಪ್ತಿ ಮುಂದೆ ಹೋಗಿ ಟ್ರಿಪ್ ಹೆಸರಲ್ಲಿ ಚಾರಣ ಹೋಗುವ, ಅಲ್ಲೇ ಪಾರ್ಟಿ ಮಾಡಿ ಬರೋಣ ಎನ್ನುವ ಮನಸ್ಥಿತಿ ಅನಾಹುತಕ್ಕೆ ಎಡೆ ಮಾಡುತ್ತದೆ. ಮೊದಲನೆಯದಾಗಿ ಪರಿಸರ ಹಾಳಾಗುವಂತೆ ಅಲ್ಲೇ ಕುಡಿದ, ತಿಂದ ತ್ಯಾಜ್ಯಗಳನ್ನು ಬಿಸಾಕುವುದು. ಮತ್ತೂಂದು, ದೇಹದ ಸ್ಥಿತಿಯ ಬಗ್ಗೆ ಅರಿವಿಲ್ಲದೇ ಚಾರಣ ಮಾಡಲು ಹೋಗಿ ಅವಘಡಗಳಾಗುವ ಸಾಧ್ಯತೆಗಳು. ಹಾಗಾಗಿ ಚಾರಣ ಮಾಡುವುದಾದರೆ ಅದಕ್ಕೆ ತಕ್ಕದಾದ ಮನಸ್ಥಿತಿ ಮತ್ತು ತಯಾರಿ ಮಾಡಿಕೊಳ್ಳಬೇಕು.
ಚಾರಣ ಅಪಾರವಾದ ದೈಹಿಕ ಕ್ಷಮತೆಯನ್ನು ಬೇಡುತ್ತದೆ. ಸುಮ್ಮನೆ ಗುಡ್ಡ ಹತ್ತಿ ಇಳಿಯುವುದಲ್ಲ. ಹೆಚ್ಚು ದೂರ ಕ್ರಮಿಸಬೇಕಾಗುವ ಚಾರಣದಲ್ಲಿ ಅಭ್ಯಾಸವಿಲ್ಲದೆ ಹೋದರೆ ಫಜೀತಿ ಪಡಬೇಕಾಗುತ್ತದೆ. ಈಗಾಗಲೇ ವಾಕಿಂಗ್ ಅಥವಾ ಜಾಗಿಂಗ್ ಮಾಡುವ ಅಭ್ಯಾಸ ಇರಬೇಕಾಗುತ್ತದೆ. ಇಲ್ಲದೆ ಹೋದರೆ ಚಾರಣಕ್ಕೂ ಕೆಲವು ತಿಂಗಳುಗಳ ಮೊದಲು ಜಿಮ್, ಯೋಗ ಅಥವಾ ಬಿರುಸು ನಡಿಗೆ ಮುಂತಾದವುಗಳನ್ನು ಅಭ್ಯಾಸ ಮಾಡಿ.
ಚಾರಣವೆಂದರೆ ಮೋಜಲ್ಲ. ಅದೊಂದು ಶಿಸ್ತು ಬೇಡುವ ಪ್ರಕ್ರಿಯೆ. ಬೆಳಗ್ಗೆ ಬೇಗ ಎದ್ದು ಹೊರಡುವ ತಯಾರಿಯಿಂದ ಹಿಡಿದು ಎಲ್ಲವೂ ಶಿಸ್ತುಬದ್ಧವಾಗಿರಬೇಕು. ಚಾರಣದ ಮೊದಲ ದಿನ ತುಂಬಾ ದಣಿಯದಂತೆ ನೋಡಿಕೊಳ್ಳಿ. ಬೆಳಗ್ಗೆ ಬೇಗ ಎದ್ದು ಅಭ್ಯಾಸವಿಲ್ಲದಿದ್ದರೆ ಅದು ನಿಮಗೆ ತಲೆನೋವು ಮುಂತಾದ ಸಮಸ್ಯೆಗಳನ್ನು ತರುತ್ತದೆ. ಎದ್ದ ಕೂಡಲೇ ಬಿಸಿನೀರು ಕುಡಿಯುವ ಕ್ರಮ ಅನುಸರಿಸಿ.
ಚೆಂದದ ಟ್ರೆಕಿಂಗ್ ಮಾಡಿದ ಮೇಲೆ ಒಳ್ಳೆಯ ಫೋಟೋಸ್, ವಿಡಿಯೋ ಹಾಕದೆ ಇದ್ದರೆ ಹೇಗೆ? ಹಾಗೆಂದುಕೊಂಡು ಅಪಾಯಕಾರಿ ಸ್ಥಳಗಳಿಗೆ ತೆರಳಿ ಫೋಟೋ ಅಥವಾ ವಿಡಿಯೋ ತೆಗೆಯುವ ಸಾಹಸಕ್ಕೆ ಕೈ ಹಾಕಬೇಡಿ. ಸಾಧ್ಯವಾದಷ್ಟೂ ಜಾಗ್ರತೆ ವಹಿಸಿ.
ದೂರದ ಜಾಗದಲ್ಲಿ ನೆಟ್‌ವರ್ಕ್ ಸಿಗದೇ ಇರಬಹುದು. ಮೊದಲೇ ನಿಮ್ಮವರಿಗೆ ನೀವು ತೆರಳುವ ಜಾಗದ ಬಗ್ಗೆ ಮಾಹಿತಿ ನೀಡಿ, ಚಾರ್ಜರ್ ಅಲ್ಲದೆ ಪವರ್ ಬ್ಯಾಂಕ್ ಮುಂತಾದ ಪರಿಕರಗಳನ್ನು ತೆಗೆದುಕೊಂಡು ಹೋಗಿ.
ನೀವು ತೆರಳಿದ ಜಾಗದಲ್ಲಿನ ಗೈಡ್, ಸೆಕ್ಯೂರಿಟಿ ಮುಂತಾದವರ ನಂಬರ್ ತೆಗೆದುಕೊಳ್ಳಿ. ಮುಖ್ಯವಾಗಿ ಗುಂಪಿನಲ್ಲಿ ಹೋಗಿದ್ದರೆ, ಗುಂಪನ್ನು ಬಿಟ್ಟು ಬೇರೆ ಕಡೆ ಹೋಗುವುದು ಅಥವಾ ಫೋಟೋ, ವಿಡಿಯೋ ಮಾಡುತ್ತಾ ಹಿಂದೆ ಉಳಿಯುವುದನ್ನು ತಪ್ಪಿಸಿ. ಕೊನೆಯದಾಗಿ, ನೀವು ಹೋಗುವುದು ಪ್ರಕೃತಿಯನ್ನು ಆಸ್ವಾದಿಸಲು. ನಾಗರೀಕರಾಗಿ ವರ್ತಿಸಿ ಮತ್ತು ಪ್ರಕೃತಿಯನ್ನು ರಕ್ಷಿಸಿ.
-ಶ್ವೇತಾ ಭಿಡೆ