Advertisement
ಬಹುತೇಕ ಚಾರಣ ಪ್ರಿಯರು ಪ್ರಕೃತಿ ಸೌಂದರ್ಯ ಸವಿಯಲೆಂದು ಕಾಡು ಮೇಡು ಸುತ್ತಾಡುತ್ತಾರೆ. ಫ್ಯಾಮಿಲಿ, ಫ್ರೆಂಡ್ಸ್ ಹೀಗೆ ತಂಡವಾಗಿ ಚಾರಣಕ್ಕೆ ಹೊರಡುತ್ತಾರೆ. ಧೈರ್ಯ, ಸಾಹಸ, ಆತ್ಮವಿಶ್ವಾಸ, ನಾಯಕತ್ವ ಬೆಳೆಸುವಲ್ಲಿ, ಭವಿಷ್ಯದಲ್ಲಿ ಅದನ್ನು ಅನುಷ್ಠಾನಿಸುವಲ್ಲಿ ಚಾರಣ ಸಹಕಾರಿ ಆಗಿದೆ ಅನ್ನುವುದು ಚಾರಣಿಗರ ಮಾತು.
ಚಾರಣಕ್ಕೆ ಹೊರಡವುದು ಎಂದರೆ ಏಕಾಏಕಿ ಬೆಟ್ಟ ಗುಡ್ಡ ಹತ್ತುವು ದಲ್ಲ. ನದಿಗೆ ಇಳಿಯುವುದಲ್ಲ. ಅದಕ್ಕೊಂದಿಷ್ಟು ಪೂರ್ವ ಸಿದ್ಧತೆ ಬೇಕು. ತೆರಳುವ ರೂಟ್, ಉಳಿದುಕೊಳ್ಳುವ ಪ್ರದೇಶದ ಬಗ್ಗೆ ಮೊದಲೇ ಮಾಹಿತಿ ಸಂಗ್ರಹಿಸಿರಬೇಕು. ಕ್ರಮಿಸಬೇಕಾದ ದೂರವನ್ನು ಅವಲಂಬಿಸಿ ಉಳಿದ ಸಿದ್ಧತೆಯನ್ನು ಮಾಡಿಡಬೇಕು. ಅಪಾಯ ಇರುವ ಪ್ರದೇಶದ ಮಾಹಿತಿ ತಿಳಿದು ಎಚ್ಚರಿಕೆ ವಹಿಸಬೇಕು. ಹಾಗಾಗಿ ಹೆಚ್ಚಾಗಿ ಚಾರಣಕ್ಕೆ ತೆರಳುವ ಪ್ರದೇಶದ ಸಮಗ್ರ ಮಾಹಿತಿ ಪಡೆದೇ ತೆರಳುವುದು ಅತ್ಯಂತ ಅಗತ್ಯವಾದ ಸಂಗತಿ. ಚಾರಣದ ವೇಳೆಯಲ್ಲಿ ಚಾರಣಿಗರು ಅಗತ್ಯವಾಗಿ ಬೇಕಾದ ಆಹಾರ ಪದಾರ್ಥ ಗಳನ್ನು ಕೊಂಡೊಯ್ಯಬೇಕು. ವಿಶ್ರಾಂತಿ ಪಡೆಯಲು ಬೇಕಾದ ಸರಂಜಾಮುಗಳು ಜತೆಗಿರಬೇಕು. ಚಾರಣದ ದಿನಗಳ ಸಂಖ್ಯೆ ಹೆಚ್ಚಾದಂತೆ ಹೊರಬೇಕಾದ ಸಾಮಗ್ರಿ ಸಂಖ್ಯೆ ಅಧಿಕ ಎಂದೇ ಅರ್ಥ. ಹಾಗಾಗಿ ಎಲ್ಲ ಯೋಜನೆ ಸಿದ್ಧಪಡಿಸಿದ ಮೇಲೆಯೇ ಹೊರಡಬೇಕು.
Related Articles
Advertisement
ಚಾರಣ ಮಾಡುವುದರಿಂದ ಆರೋಗ್ಯ ಭಾಗ್ಯವು ದೊರೆಯುತ್ತದೆ. ಶುದ್ಧಗಾಳಿ ಸೇವೆ, ನಡಿಗೆ, ಬೆಟ್ಟ ಹತ್ತಿ-ಇಳಿಯುವಿಕೆ ಹೀಗೆ ಹತ್ತಾರು ಬಗೆಯ ಲಾಭಗಳು ದೇಹಕ್ಕೆ ಉಂಟಾಗಿ ಅದರಿಂದ ಸ್ವಸ್ಥ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಚಾರಣದಿಂದ ಸುತ್ತಲಿನ ಜಗತ್ತಿನ ಬಗ್ಗೆ ತಿಳಿವಳಿಕೆ ದೊರೆಯುತ್ತದೆ. ಹೊಸ ಹೊಸ ಸ್ಥಳದ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.
ಈ ಆರೋಗ್ಯಕರ ಚಟುವಟಿಕೆ, ಹೆಚ್ಚಿನ ಶ್ರಮದ ಕ್ರೀಡೆಯಾದ ಪರ್ವತಾರೋಹಣಕ್ಕೂ ಸಹಕಾರಿ. ಖ್ಯಾತ ಪರ್ವತಾರೋಹಿಗಳು ಚಾರಣದಿಂದಲೇ ಈ ಹವ್ಯಾಸವನ್ನು ಆರಂಭಿಸಿರುವುದು ಅದಕ್ಕೂಂದು ಉದಾಹರಣೆ.
ಕೊಡಗು, ಕುದುರೆಮುಖ, ಕೊಡಚಾದ್ರಿ, ಕುಮಾರಪರ್ವತ ಸಹಿತ ಕರ್ನಾಟಕದ ಹಲವು ಪ್ರದೇಶಗಳು ಚಾರಣಿಗರ ನೆಚ್ಚಿನ ತಾಣಗಳು. ಬೆಟ್ಟ- ಗುಡ್ಡದ ಜತೆಗೆ ಜಲಪಾತಗಳತ್ತ ಚಾರಣ ಮಾಡಲು ಅವಕಾಶ ಇದೆ. ಕೊಡಗಿನ ಹಲವು ಜಲಪಾತಗಳು, ಮುಳ್ಳಯ್ಯನ ಗಿರಿ, ಕಲ್ಲತ್ತಗಿರಿ, ಗಾಳಿಕೆರೆ, ಬ್ರಹ್ಮಗಿರಿ, ಅಬ್ಬೆ ಜಲಪಾತ, ಗೋವರ್ಧನಗಿರಿ ಹೀಗೆ ನೂರಾರು ಸ್ಥಳಗಳಿವೆ.
ಅನುಮತಿ ಪಡೆಯಿರಿಚಾರಣವು ರಾಷ್ಟ್ರೀಯ ಉದ್ಯಾನವನ, ಅಭಯಾರಣ್ಯ ಅಥವಾ ರಕ್ಷಿತ ಅರಣ್ಯಗಳ ಮೂಲಕ ಹಾದು ಹೋಗುವಂತಿದ್ದರೆ ಅದಕ್ಕೆ ಸಂಬಂಧಿಸಿ ಅರಣ್ಯ ಇಲಾಖೆಯಿಂದ ಸೂಕ್ತ ಅನುಮತಿ ಪಡೆಯಬೇಕು. ಖಾಸಗಿ ಪ್ರದೇಶವಾಗಿದ್ದರೂ ಗಮನಕ್ಕೆ ತಂದು ಪ್ರಯಾಣ ಮುಂದುವರಿಸಬೇಕು. ಅಪಾಯಗಳ ಮಾಹಿತಿ ಅರಿತು, ಸ್ಥಳೀಯರ ಸಂಪರ್ಕ ಪಡೆದೇ ಚಾರಣಕ್ಕೆ ಹೊರಡುವುದು ಸೂಕ್ತ. - ಕಿರಣ್ ಪ್ರಸಾದ್ ಕುಂಡಡ್ಕ