Advertisement
ಸಾಧನೆ ಮಾಡುವ ಮನಸ್ಸಿದ್ದವರಿಗೆ ಯಾವುದೂ ಅಸಾಧ್ಯವಲ್ಲ ಎಂಬ ಮಾತನ್ನು ಕೇಳುತ್ತಲೇ ಇರುತ್ತೇವೆ. ಆದರೆ ಅಂಥ ಗಟ್ಟಿ ಮನಸ್ಸು ಮಾಡುವವರ ಸಂಖ್ಯೆ ವಿರಳ. ಚಿಕ್ಕ ವಯಸ್ಸಿನಲ್ಲೇ ದೊಡ್ಡ ದೊಡ್ಡ ಕನಸುಗಳನ್ನು ಕಂಡು, ಅವುಗಳನ್ನು ಬೆನ್ನಟ್ಟಿ ಸಾಗುತ್ತಿರುವ ಹುಡುಗಿ ಈ ಮಾನಸ. ಈಕೆ ಅಂಥದ್ದೇನು ಮಾಡಿದ್ದಾಳೆ ಅನ್ನುತ್ತೀರಾ? ಕೊರೆಯುವ ಚಳಿಯಲ್ಲಿ ಎವರೆÓr… ಬೇಸ್ ಕ್ಯಾಂಪ್ ಚಾರಣ ಮುಗಿಸಿದ್ದಾಳೆ ಈಕೆ!
Related Articles
ಮೌಂಟ್ ಎವರೆಸ್ಟ್‌ನ ಬೇಸ್ ಕ್ಯಾಂಪ್‌ವರೆಗಿನ 18,500 ಅಡಿ ಎತ್ತರದ ಚಾರಣದ ಹಾದಿ ಅತಿ ದುರ್ಗಮ. ಕೊರೆಯುವ ಚಳಿಯಲ್ಲಿ ಆ ದಾರಿಯನ್ನು ಕ್ರಮಿಸುವುದಕ್ಕೆ ಎಂಟೆದೆ ಬೇಕು. ಚಾರಣಕ್ಕೆ ಬೇಕಾಗುವ ಮಾನಸಿಕ, ದೈಹಿಕ ಸಿದ್ಧತೆಗಳು ಹಲವಾರು. ಮುಖ್ಯವಾಗಿ ಮನಸ್ಸನ್ನು ಸ್ಥಿರಗೊಳಿಸಬೇಕು, ಅಣಿಗೊಳಿಸಿಕೊಳ್ಳಬೇಕು. ಮಾನಸ ಸಸ್ಯಾಹಾರಿಯಾಗಿದ್ದರಿಂದ ಸಿಗುವ ಕೆಲವೇ ಕೆಲವು ಸತ್ವಯುತ ಆಹಾರವನ್ನು ಅವಲಂಬಿಸಿ ದೇಹವನ್ನು ಸದೃಢಗೊಳಿಸಿಕೊಳ್ಳಬೇಕಿತ್ತು. ಎಲ್ಲಾ ಎಡರುತೊಡರುಗಳನ್ನು ಎದುರಿಸಿದ ಮಾನಸ, ಡಿಸೆಂಬರ್‌ನ ಕೊರೆಯುವ ಮೈನಸ್ 25 ಡಿಗ್ರಿ ಚಳಿಯಲ್ಲಿ ಚಾರಣವನ್ನು ಯಶಸ್ವಿಯಾಗಿ ಮುಗಿಸಿಯೇಬಿಟ್ಟರು.
Advertisement
ಚಾರಣದ ತಯಾರಿ ಹೇಗಿತ್ತು?2017ರ ಅಕ್ಟೋಬರ್‌ನಲ್ಲಿ ಚಾರಣದ ತಯಾರಿಗೆ ನೆಹರು ಇನ್ಸ್‌ಟಿಟ್ಯೂಟ್ ಆಫ್ ಮೌಂಟನೀರಿಂಗ್‌ನಲ್ಲಿ ಟ್ರೈನಿಂಗ್ ಮುಗಿಸಿ, ಬೆಳ್ಳಿ ಪದಕ ಪಡೆದರು ಮಾನಸಾ. ನಂತರ ಅಡ್ವೆಂಚರ್ ನೇಚರ್ ಕ್ಲಬ್ ಸಂಸ್ಥೆಯಲ್ಲಿ ತರಬೇತಿ ಪಡೆದು ಚಾರಣದ ಮುಂದಿನ ಹಂತದ ತಯಾರಿ ನಡೆಸಿದರು. ಡಿ.17ರಂದು ಬೆಂಗಳೂರಿನಿಂದ ಹೊರಟು ದೆಹಲಿ ತಲುಪಿ ಅಡ್ವೆಂಚರ್ ನೇಚರ್ ಕ್ಲಬ್‌ನಿಂದ ಆಯ್ಕೆಯಾಗಿದ್ದ ದೀಪಾಂಶು ಅವರನ್ನು ಭೇಟಿಯಾಗಿ, 18ರಂದು ಕಠ್ಮಂಡು ತಲುಪಿದರು. 19ರಂದು ಕಠ್ಮಂಡುವಿನಿಂದ ಸಣ್ಣ ವಿಮಾನದಲ್ಲಿ ಲೂಕ್ಲಾ ತಲುಪಿ, ಅಲ್ಲಿಂದ ಚಾರಣ ಆರಂಭಿಸಿದ ಮಾನಸ, 12 ಕಿ.ಮೀ ಕ್ರಮಿಸಿ ಫಕ್ಕಂಡಿಗ್ ತಲುಪಿದರು. ಎರಡನೇ ದಿನ 24 ಕಿ.ಮೀ. ಕ್ರಮಿಸಿ ನ್ಯಾಂಚೆ ಬಜಾರ್ ಮುಟ್ಟಿದರು. 21ರಂದು ನ್ಯಾಂಚೆ ಬಜಾರ್‌ನಲ್ಲಿ ನಡೆದ ದೈಹಿಕ ಸಾಮರ್ಥ್ಯದ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದರು. ಜೊತೆಗೆ ದೆಹಲಿಯ ದೀಪಾಂಶು, ಆಸ್ಟ್ರೇಲಿಯಾದ ಯಾನಾ, ಯುಎಸ್‌ನ ದ್ವಾರಾ ಡಿಸೋಜಾ ಸಹ ಇದ್ದರು. ಹವಾಮಾನ ವೈಪರೀತ್ಯದಿಂದಾಗಿ ಯಾನಾ ಹಾಗೂ ದ್ವಾರಾ ಡಿಸೋಜಾ ಮುಂದಿನ ಚಾರಣಕ್ಕೆ ಆಯ್ಕೆಯಾಗದೆ ನ್ಯಾಂಚೆ ಬಜಾರ್‌ನಲ್ಲೇ ಉಳಿದರು. ಡಿ.22ರಂದು ನ್ಯಾಂಚೆ ಬಜಾರ್‌ನಿಂದ ದೀಪಾಂಶು ಹಾಗೂ ಮಾನಸ 17 ಕಿ.ಮೀ. ಚಾರಣ ನಡೆಸಿ ತೆಂಗ್ ಖೂಚೆ ತಲುಪಿದರು. ಮುಂದೆ ದೀಪಾಂಶು ಸಹ ಹವಾಮಾನ ಕಾರಣದಿಂದ ಚಾರಣವನ್ನು ಮೊಟಕುಗೊಳಿಸಿದರು. ನಂತರದ 3 ದಿನ, ಮೂರು ಮಂದಿ ಮಾರ್ಗದರ್ಶಕರೊಂದಿಗೆ ಚಾರಣ ನಡೆಸಿ ಬೇಸ್ ಕ್ಯಾಂಪ್ ಸಮಿಟ್ ತಲುಪಿ ತ್ರಿವರ್ಣ ಧ್ವಜವನ್ನು ಅಲ್ಲಿ ಸ್ಥಾಪಿಸಿಯೇಬಿಟ್ಟರು! “ಚಾರಣದ ಹಾದಿಯಲ್ಲಿ ಶೆರ್ಪಾ ಗೈಡ್‌ಗಳ ಮಾರ್ಗದರ್ಶನ ಬಹಳ ನೆರವಿಗೆ ಬಂತು. ಉಳಿದಂತೆ ಈ ಚಾರಣಕ್ಕಾಗಿ ಸಾಕಷ್ಟು ಪರಿಶ್ರಮಪಟ್ಟಿದ್ದೇನೆ. ಪ್ರತಿನಿತ್ಯ 2 ಗಂಟೆ ನಡಿಗೆ, ಯೋಗ, ವ್ಯಾಯಾಮ ಮಾಡಿ ದೇಹ ಮತ್ತು ಮನಸ್ಸಿನ ಆರೋಗ್ಯ ಕಾಪಾಡಿಕೊಳ್ಳುತ್ತೇನೆ’.
– ಮಾನಸ – ಶಾರದಾ ಮೂರ್ತಿ