ಬೆಂಗಳೂರು: ನಗರದಲ್ಲಿ ಬುಧವಾರ ಸಂಜೆ ಸುರಿದ ಧಾರಾಕಾರ ಮಳೆಗೆ ಐದು ಮರಗಳು ಧರೆಗುರುಳಿದ್ದು, ಪ್ರಮುಖ ರಸ್ತೆಗಳಲ್ಲಿ ಮಳೆನೀರು ನಿಂತು ಸಂಚಾರಕ್ಕೆ ಕೆಲಕಾಲ ಅಡಚಣೆ ಉಂಟಾಗಿತ್ತು. ಬುಧವಾರ ಸಂಜೆ 4 ಗಂಟೆ ಸುಮಾರಿಗೆ ಜೋರಾದ ಗಾಳಿಸಹಿತ ಸುರಿದ ಮಳೆಯಿಂದಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಮನೆಗಳತ್ತ ಹೊರಟ ಉದ್ಯೋಗಿಗಳು ಪರದಾಡು ವಂತಾಯಿತು.
ಇನ್ನು ಅಶೋಕನಗರ, ಬ್ರಿಗೇಡ್ ರಸ್ತೆ, ಎಂ.ಜಿ.ರಸ್ತೆ, ವಿಧಾನಸೌಧ, ಮೆಜೆಸ್ಟಿಕ್, ಲಾಲ್‌ಬಾಗ್ ಸೇರಿದಂತೆ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಮಳೆಯಿಂದಾಗಿ ಓಕಳಿಪುರ ಅಂಡರ್ ಪಾಸ್, ಸ್ಯಾಂಕಿ ರಸ್ತೆ, ಕೆ.ಆರ್.ವೃತ್ತ,
ಮೆಜೆಸ್ಟಿಕ್, ಶಾಂತಿನಗರ ಸೇರಿದಂತೆ ವಿವಿಧ ಭಾಗಗಳಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು
ಪರದಾಡುವಂತಾಗಿತ್ತು. ರಾಜರಾಜೇಶ್ವರಿ ನಗರದ 9ನೇ ಮುಖ್ಯರಸ್ತೆಯಲ್ಲಿ ಮನೆಗಳಿಗೆ ನೀರು ನುಗ್ಗಿ ಜನರು ತೊಂದರೆ
ಅನುಭವಿಸುವಂತಾಗಿತ್ತು.
ಬೆಟ್ಟ ಹಲಸೂರು, ದೊಡ್ಡನೆಕ್ಕುಂದಿ, ನಾಗರಬಾವಿ, ಕೊಡಿಗೇಹಳ್ಳಿ, ಕೊಟ್ಟಿಗೆಪಾಳ್ಯ, ಅಗ್ರಹಾರ ದಾಸರಹಳ್ಳಿ, ಲಾಲ್‌ಬಾಗ್, ಎಂ.ಜಿ.ರಸ್ತೆ, ನಾಗಪುರ, ಬಾಣಸವಾಡಿ, ಕೋರಮಂಗಲ, ಬೊಮ್ಮನಹಳ್ಳಿ, ಕೆ.ಆರ್.ಪುರ ಸೇರಿದಂತೆ ವಿವಿಧೆಡೆ ಉತ್ತಮ ಮಳೆಯಾಗಿದ್ದು, ಜಯಮಹಲ್ ಬಳಿ 2 ಮರಗಳು ನೆಲಕ್ಕುರುಳಿವೆ. ಉಳಿದಂತೆ ಬಾಣಸವಾಡಿ, ವಿಜಯನಗರ, ಎಚ್ ಬಿಆರ್ ಬಡಾವಣೆ ಸೇರಿದಂತೆ ಕೆಲವು ಕಡೆಗಳಲ್ಲಿ ಮರ ಹಾಗೂ ಕೊಂಬೆಗಳು ಬಿದ್ದಿವೆ. ಇದರಿಂದಾಗಿ ಯಾವುದೇ ಅನಾಹುತ ಸಂಭವಿಸದಿದ್ದರೂ, ತೀವ್ರ ಸಂಚಾರ ದಟ್ಟಣೆ ಉಂಟಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.