Advertisement

ಲಕ್ಷ ಸಸಿ ನೆಡುವುದಿರಲಿ ಇದ್ದ ಮರಗಳಿಗಿಲ್ಲ ರಕ್ಷಣೆ

03:29 PM May 05, 2017 | Team Udayavani |

ಹುಬ್ಬಳ್ಳಿ: ರಸ್ತೆ ಅಗಲೀಕರಣ, ಅಭಿವೃದ್ಧಿ ಹೆಸರಲ್ಲಿ ವಿವಿಧ ಇಲಾಖೆ-ಸಂಸ್ಥೆಗಳು ಅನೇಕ ಮರಗಳನ್ನು ಕತ್ತರಿಸುತ್ತಿವೆ. ಆದರೆ ಮರಗಳನ್ನು ಕಡಿಯದೆ ತಾನಾಗಿಯೇ ಉರುಳಿ ಬೀಳುವಂತೆ ಮಾಡಲು ಬಿಆರ್‌ ಟಿಎಸ್‌ ಹಾಗೂ ಮಹಾನಗರ ಪಾಲಿಕೆ ಮುಂದಾಗಿವೆಯೇ? ಪಾಲಿಕೆ ಮುಖ್ಯ ಕಚೇರಿ ಆವರಣದಲ್ಲಿ ಗದಗ ರಸ್ತೆಗೆ ಹೊಂದಿಕೊಂಡಿರುವ ಮರಗಳ ದಯನೀಯ ಸ್ಥಿತಿ ನೋಡಿದರೆ ಇಂತಹ ಅನುಮಾನ ಮೂಡುವಂತಾಗಿದೆ. 

Advertisement

ಗುರುವಾರ ಸಂಜೆ ವೇಳೆಗೆ ಹಲವಾರು ವರ್ಷಗಳಿಂದ ಆರೋಗ್ಯಪೂರ್ಣ ರೀತಿಯಲ್ಲಿದ್ದ ಮರವೊಂದು ಗಾಳಿಗೆ ನೆಲಕ್ಕುರುಳಿ ಬಿದ್ದಿದೆ. ಅದೃಷ್ಟವೆಂದರೆ ಸದಾ ಸಂಚಾರ ಇರುವ ರಸ್ತೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ. ಇನ್ನು ಆರು ಮರಗಳು ಸಹ ಗಾಳಿಗೆ ಉರಳಲು ಸಿದ್ಧಗೊಂಡ ಸ್ಥಿತಿಯಂತೆ ಗೋಚರಿಸುತ್ತಿವೆ.

ರಸ್ತೆ ಅಗಲೀಕರಣ ಹಾಗೂ ಬಿಆರ್‌ ಟಿಎಸ್‌ ಮಾರ್ಗಕ್ಕಾಗಿ ಪಾಲಿಕೆ ಹೊರಗೋಡೆ ತೆಗೆದು ಅಲ್ಲಿ ಚರಂಡಿ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ. ಚರಂಡಿ ನಿರ್ಮಾಣಕ್ಕೆ ತಗ್ಗು ತೋಡುವ ಸಂದರ್ಭದಲ್ಲಿ ಪಾಲಿಕೆ ಆವರಣದಲ್ಲಿ ಹಲವಾರು ವರ್ಷಗಳಿಂದ ಇದ್ದ ದೈತ್ಯಾಕಾರದ ಮರಗಳ ಮೇರುಗಳನ್ನು ಕತ್ತರಿಸಲಾಗಿದ್ದು, ಇದರಿಂದ  ಮರಗಳು ಅಸ್ಥಿರಗೊಂಡಿವೆ.

ಜತೆಗೆ ಇದ್ದಬೇರುಗಳನ್ನಾದರೂ ಭದ್ರಪಡಿಸುವ ನಿಟ್ಟಿನಲ್ಲಿ ಅಗತ್ಯ ತಡೆ-ಮುಂಜಾಗ್ರತಾ ಕ್ರಮ ಇಲ್ಲವಾಗಿದ್ದು, ಬಿರುಗಾಳಿಗೆ ಅಸ್ಥಿರಗೊಂಡ ಮರಗಳು ನೆಲಕ್ಕುರುಳತೊಡಗಿವೆ. ಪಾಲಿಕೆ ಮುಂಭಾಗದಲ್ಲಿ ರಸ್ತೆಗೆ ಹೊಂದಿಕೊಂಡು ಅನೇಕ ಮರಗಳಿದ್ದು, ಅದರಲ್ಲಿ ಕೆಲವನ್ನು ಕಡಿದು ಹಾಕಲಾಗಿತ್ತು. ಉಳಿದ ಸುಮಾರು 7 ಬೃಹದಾಕಾರದ ಮರಗಳಲ್ಲಿ ಒಂದು ಮರ ನೆಲಕ್ಕುರುಳಿಯಾಗಿದೆ. ಇನ್ನುಳಿದ 6 ಗಿಡಗಳು ಇಂದಲ್ಲಾ ನಾಳೆ ನೆಲಕ್ಕುರುಳಲು ಕಾಯುತ್ತಿವೆ. 

ಮುಂಜಾಗ್ರತೆ ಅವಶ್ಯ: ನಗರದಲ್ಲಿರುವ ಗಿಡ-ಮರಗಳು ಡಾಂಬರ್‌ ಹಾಗೂ ಕಾಂಕ್ರೀಟ್‌ಕರಣದಿಂದ ನೀರು ಇಂಗಿಸಿಕೊಳ್ಳುವ ಸಾಮರ್ಥ್ಯ ಇಲ್ಲದಂತಾಗಿ ಶಕ್ತಿ ಕಳೆದುಕೊಳ್ಳುತ್ತಿವೆ. ಮಹಾನಗರದ ಅನೇಕ ಬಡಾವಣೆಗಳಲ್ಲಿ ರಸ್ತೆ ಬದಿ ಜಾಗದಲ್ಲಿ ಕಾಂಕ್ರೀಟ್‌ ಹಾಕಲಾಗಿದ್ದು, ಈ ಸಂದರ್ಭದಲ್ಲಿ ಮರಗಳ ಸುತ್ತಲೂ ನೀರು ಇಂಗುವುದಕ್ಕೆ ಜಾಗ ಬಿಡುವ ಬದಲಾಗಿ ಸುತ್ತಲೂ ಸಿಮೆಂಟ್‌ ಹಾಕಿರುವುದರಿಂದ ಮರದ ಬುಡಕ್ಕೆ ನೀರು ದೊರೆಯುತ್ತಿಲ್ಲವಾಗಿದೆ.

Advertisement

ಇನ್ನೊಂದು ಕಡೆ ಒಂದು ಮರ  ಕಡಿದರೆ ಹತ್ತು ಗಿಡ ನೆಡುತ್ತೇವೆ ಎಂದು ಪಾಲಿಕೆ ಸೇರಿದಂತೆ ಅನೇಕ ಇಲಾಖೆಗಳು ಹೇಳುತ್ತಿವೆಯಾದರೂ, ಕನಿಷ್ಠ ಒಂದು ಮರಕ್ಕೆ ಒಂದು ಸಸಿ ಬೆಳೆಸುವ ಕಾರ್ಯವೂಸಮರ್ಪಕವಾಗಿ ಆಗುತ್ತಿಲ್ಲ ಎಂಬುದಕ್ಕೆ ಮಹಾನಗರದ ಸ್ಥಿತಿ ಸಾಕ್ಷಿಯಾಗಿದೆ. ಇದೀಗ ಇದ್ದ ಮರಗಳಿಗೂ ಕನಿಷ್ಠ ಸಂರಕ್ಷಣೆ, ಮುಂಜಾಗ್ರತಾ ಕ್ರಮವೂ ಇಲ್ಲದೇ ಅವು ಸಹ ನಾಶವಾಗತೊಡಗಿವೆ. 

ಒಂದು ಕಡೆ ಮಹಾನಗರ ಪಾಲಿಕೆ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ 1ಲಕ್ಷ ಸಸಿಗಳನ್ನು ನಡೆಸುವ ಬಗ್ಗೆ ಹೇಳುತ್ತಿದೆ. ಇನ್ನೊಂದೆಡೆ ತನ್ನದೇ ಆವರಣದಲ್ಲಿ ಉತ್ತಮ ಸ್ಥಿತಿಯಲ್ಲಿದ್ದ ಮರಗಳಿಗೆ ಕಣ್ಣೆದುರೇ ಹಾನಿಯಾಗಿದ್ದರೂ ಅವುಗಳ ಸಂರಕ್ಷಣೆಗೆ  ಕನಿಷ್ಠ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಬಿದ್ದ ಹಾಗೂ ಬೀಳಲು ಸಿದ್ಧವಾದ ಮರಗಳನ್ನು ನೋಡುತ್ತ ಕುಳಿತುಕೊಂಡಿದೆ ಎಂಬುದು ಹಲವರ ಅನಿಸಿಕೆ. 

* ಬಸವರಾಜ ಹೂಗಾರ 

Advertisement

Udayavani is now on Telegram. Click here to join our channel and stay updated with the latest news.

Next