ಹಾಸನ: ನಗರದ ಬೈಪಾಸ್‌ರಸ್ತೆಯಲ್ಲಿರುವ ರಾಜೀವ್ ತಾಂತ್ರಿಕ ಕಾಲೇಜು ಆವರಣದಲ್ಲಿ ಸದ್ದಿಲ್ಲದೆ ಪರಿಸರದ ಸಂರಕ್ಷಣೆ ಸಾಗಿದೆ. ಕಾಲೇಜಿನ ಕ್ಯಾಂಪಾಸ್‌ನಲ್ಲಿ ವಿವಿಧ ವಿನ್ಯಾಸದ ಕಟ್ಟಡಗಳ ಜೊತೆ ಜೊತೆಗೆ 5ಸಾವಿರ ವೃಕ್ಷಗಳ ವನ ನಿರ್ಮಾಣವಾಗಿದೆ.
20 ಎಕರೆ ವಿವಿಶಾಲವಾದ ಕಾಲೇಜಿನ ಆವರಣದಲ್ಲಿ ಸುಮಾರು 5ಸಾವಿರ ಗಿಡ ಮರಗಳನ್ನು ಬೆಳೆಸಲಾಗಿದೆ. ತೇಗ, ಬೇವು, ಹೆಬ್ಬೇವು, ಗಂಧ, ಶ್ರೀಗಂಧ, ಮಾವು, ಹಲಸು, ಸಿಲ್ವರ್, ಮಹಾಘನಿ, ಕಾಡುಬಾದಾಮಿ, ನೇರಲೆ, ನೀರು ಸೇಬು, ಬಿದಿರು, ಅಡಿಕೆ, ಮತ್ತಿತರ ಇಪ್ಪತ್ತಕ್ಕೂ ಹೆಚ್ಚು ಜಾತಿಯ ಗಿಡಗಳನ್ನು ನೆಟ್ಟು, ಸಂರಕ್ಷಿಸಿ ಬೆಳೆಸಲಾಗಿದೆ.
ಮರಗಳ ಕಾಂಡಕ್ಕೆ ಮೆಣಸಿನ ಬಳ್ಳಿಗಳನ್ನೂ ಹಬ್ಬಿಸಿ, ವೃಕ್ಷವನದ ಸೊಬಗನ್ನು ಹೆಚ್ಚಿಸಲಾಗಿದೆ.ಕ್ಯಾಂಪಾಸ್‌ನ ಸುತ್ತಲೂ ಹಾಗೂ ಕಟ್ಟಡಗಳ ಮಧ್ಯ ಭಾಗದಲ್ಲಿ ಬೆಳೆಸಲಾಗಿರುವ ಗಿಡ ಮರಗಳು ನೋಡುಗರ ಕಣ್ಮನ ಸೆಳೆಯುವಂತಿವೆ.
ಔಷಧೀಯ ಸಸ್ಯವನ ನಿರ್ಮಾಣ: ರಾಜೀವ್‌ಅಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯೂ ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ಔಷಧೀಯ ಸಸ್ಯವನವನ್ನು ಅಭಿವೃದ್ಧಿಪಡಿಸಿದೆ. ಎರಡು ಎಕರೆ ಪ್ರದೇಶದಲ್ಲಿ ಅಭಿವೃದ್ಧಿಗೊಂಡಿರುವ ಅಯುರ್ವೇದ ಗಿಡ ಮೂಲಿಕೆಗಳ ಔಷಧೀಯ ಸಸ್ಯವನ, ಮುನ್ನೂರಕ್ಕೂ ಹೆಚ್ಚು ಗಿಡಗಳನ್ನು ಹೊಂದಿದ್ದು, ನೂರೈವತ್ತು ಬಗೆಯ ವಿವಿಧ ಜಾತಿಯ ಔಷಧೀಯ ಗಿಡಗಳನ್ನು ಬೆಳೆಸಲಾಗಿದೆ.
ಶಿಕ್ಷಣ ಸಂಸ್ಥೆಯ ಆವರಣದಲ್ಲಿರುವ ಎಲ್ಲಾ ಬೋರ್‌ವೆಲ್‌ಗಳ ಸುತ್ತಲೂ ಹನ್ನೆರಡರಿಂದ ಹದಿನೈದು ಅಡಿ ಸುತ್ತಳತೆಯ ಇಂಗು ಗುಂಡಿಗಳನ್ನು ನಿರ್ಮಿಸಲಾಗಿದೆ. ಇಪ್ಪತ್ತು ಎಕರೆ ವಿಶಾಲವಾದ ಕಾಲೇಜಿನಆವರಣದಲ್ಲಿ ಬೀಳುವ ಪ್ರತಿಯೊಂದು ಮಳೆ ಹನಿಯೂ ಅಲ್ಲಿಯೇ ಇಂಗುವಂತೆ ಮಾಡಲಾಗಿದೆ. ಹೆಚ್ಚಾಗಿ ಹರಿಯುವ ನೀರು ಕೊಳವೆಗಳ ಮುಖಾಂತರ ಇಂಗು ಗುಂಡಿಗಳನ್ನುತಲುಪಿ ಬೋರ್‌ವೆಲ್‌ಗಳನ್ನು ರೀಚಾರ್ಜ್ ಮಾಡಲಾಗುತ್ತಿದೆ. ಅಂರ್ತಜಲ ಮಟ್ಟ ಏರಿಕೆಯಾಗಿದೆ.
ಸಸಿ ವಿತರಣೆ: ಕಳೆದ ಹಲವಾರು ವರ್ಷಗಳಿಂದ ಪ್ರತೀ ವರ್ಷ ಸಂಸ್ಥೆಯ ಆವರಣದಲ್ಲಿ ಹೆಚ್ಚು ಹೆಚ್ಚು ಗಿಡಗಳನ್ನು ನೆಡುವುದರ ಜೊತೆಗೆ, ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸುವ ದೃಷ್ಟಿಯಿಂದ ಸುಮಾರು 3ಸಾವಿರ ಹೆಚ್ಚು ವಿವಿಧ ಪ್ರಬೇಧಗಳ ಸಸ್ಯಗಳನ್ನು ವಿದ್ಯಾರ್ಥಿಗಳಿಗೆ ತರಿಸಲಾಗುತ್ತಿದೆ.ಅವುಗಳನ್ನು ನೆಟ್ಟು, ಬೆಳೆಸುವ ಬಗ್ಗೆ ಮಾಹಿತಿ ಹಾಗೂ ಪರಿಸರಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.