Advertisement

ಹೆದ್ದಾರಿ ಪಕ್ಕದ ಮರಗಳಿಗೆ ಮರುಜೀವ!

11:19 AM May 26, 2019 | Team Udayavani |

ನರಗುಂದ: ಪಟ್ಟಣದ ನಂ. 218ರ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಗೆ ನಿರಂತರ ನೆರಳಿನಾಶ್ರಯ ನೀಡಿದ್ದ ದಶಕಗಳ ಇತಿಹಾಸದ ಬಹುದೊಡ್ಡ ಮರಗಳು ಹೆದ್ದಾರಿ ಅಗಲೀಕರಣಕ್ಕೆ ಬಲಿಯಾದ ನೋವು ಪರಿಸರ ಪ್ರೇಮಿಗಳಲ್ಲಿ ಕಾಡುತ್ತಿತ್ತು. ಇದೀಗ ಅದಕ್ಕೆ ಪರಿಹಾರವಾಗಿ ಅರಣ್ಯ ಇಲಾಖೆ ಮರಗಳಿಗೆ ಮರುಜೀವ ನೀಡಲು ಮುಂದಾಗಿದೆ. ಹೆದ್ದಾರಿ ಎರಡೂ ಬದಿಗೆ 7800 ಮರಗಳನ್ನು ಬೆಳೆಸಲು ಸಸಿ ನೆಡುವ ಕಾರ್ಯ ಭರದಿಂದ ಸಾಗಿದೆ.

Advertisement

ಅರಣ್ಯ ಇಲಾಖೆ ತಾಲೂಕಿನ ಕಲಕೇರಿ ಗ್ರಾಮದಿಂದ ಕೊಣ್ಣೂರ ಗ್ರಾಮದವರೆಗೆ 25 ಕಿಮೀ ವ್ಯಾಪ್ತಿಯುದ್ದಕ್ಕೂ ರಾಷ್ಟ್ರೀಯ ಹೆದ್ದಾರಿ ಎರಡೂ ಬದಿಗೆ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿದೆ. ಈಗಾಗಲೇ ಪಟ್ಟಣ ಹೊರಲವಯ ಅಲ್ಲಿಭಾಯಿ ನಗರದಿಂದ ಕೊಣ್ಣೂರ ಕಡೆಗೆ ಸಸಿ ನೆಡಲಾಗುತ್ತಿದೆ.

7800 ಸಸಿಗಳು:

ಕಳೆದ ಎರಡು ವರ್ಷಗಳ ಹಿಂದೆ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಬದಿಗಿದ್ದ ತಾಲೂಕಿನ ವ್ಯಾಪ್ತಿಯ 263 ಬಹುದೊಡ್ಡ ಮರಗಳನ್ನು ಕಡಿದು ಹಾಕಲಾಗಿತ್ತು. ಆ ಕೊರತೆ ನೀಗಿಸಿಕೊಳ್ಳಲು ಮುಂದಾದ ಅರಣ್ಯ ಇಲಾಖೆ ಅತ್ಯಧಿಕ 7800 ಮರಗಳನ್ನು ಬೆಳೆಸಲು ಮುಂದಾಗಿದೆ. ಹೆದ್ದಾರಿಯ ಎರಡೂ ಬದಿಗೆ 5 ಮೀಟರ್‌ಗೊಂದು ಸಸಿ ನೆಡಲಾಗುತ್ತಿದೆ. 10 ಸಸಿಗಳಿಗೆ ಒಂದು ಹೂವಿನ ಸಸಿ ನೆಡಲಾಗುತ್ತಿದೆ. ಅರಣ್ಯ ಇಲಾಖೆಯ ಕರ್ನಾಟಕ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಈ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಹೀಗಾಗಿ ಹೆದ್ದಾರಿ ಬದಿಗೆ ನೆರಳು ನೀಡಿದ್ದ ಮರಗಳನ್ನು ಕಳೆದುಕೊಂಡ ಈ ಭಾಗದ ಜನರು ಇದೀಗ ಮತ್ತೇ ಹೆದ್ದಾರಿ ಬದಿಗೆ ಮರಗಳನ್ನು ನೋಡುವ ಅವಕಾಶ ಒದಗಿ ಬಂದಂತಾಗಿದೆ.

ಯಾವ ಮರಗಳು: ಹೆದ್ದಾರಿ ಬದಿಗೆ ಬೇವು, ಆಲ, ಅರಳೆ, ಪೋಲ್ವೋ ಫ್ಲವರ್‌, ಆಕಾಶ ಮಲ್ಲಿಗೆ, ಮಹಾಗನಿ, ನೇರಳೆ, ಚಳ್ಳೆ, ರೇನ್‌ಟ್ರೀ, ತಾಡಸಿ, ಅತ್ತಿ, ಹೊಂಗೆ ಮುಂತಾದ ಸಸಿಗಳನ್ನು ನೆ‌ಡುವ ಕಾರ್ಯ ಭರದಿಂದ ಸಾಗಿದೆ. ಈಗಾಗಲೇ ಕೊಣ್ಣೂರು ಕಡೆಗೆ ಅಲ್ಲಿಭಾಯಿ ನಗರದಿಂದ ಬಂಡೆಮ್ಮ ನಗರವರೆಗೆ ಸಸಿ ನೆಡಲಾಗಿದೆ. ಹೆದ್ದಾರಿ ಎರಡೂ ಬದಿಗೆ ಮರಗಳನ್ನು ಬೆಳೆಸಲಾಗುತ್ತಿದೆ. ಹೆದ್ದಾರಿ 13 ಮೀಟರ್‌ ಅಗಲದ ವ್ಯಾಪ್ತಿಯ ಹೊರಗಡೆಗೆ ಸಸಿ ನೆಡಬೇಕಾಗಿದೆ. ಕೆಲವೊಂದು ಕಡೆಗೆ ರೈತರ ಜಮೀನಿನ ಬದುವಿಗೆ ಸಸಿ ನೆಡಬೇಕಾಗುತ್ತಿದೆ. ಈ ಸಂದರ್ಭದಲ್ಲಿ ರೈತರು ಸಹಕರಿಸಲಿ ಎಂಬುದು ಅರಣ್ಯ ಇಲಾಖೆ ಅಧಿಕಾರಿಗಳ ಆಶಯವಾಗಿದೆ.

Advertisement

ಒಟ್ಟಾರೆ ಕಲಕೇರಿ ಗ್ರಾಮದಿಂದ ಕೊಣ್ಣೂರವರೆಗೆ 263 ಬೃಹತ್‌ ಮರಗಳನ್ನು ಬಲಿ ತೆಗೆದುಕೊಂಡ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ಬಳಿಕ ಮತ್ತೇ ಹೆದ್ದಾರಿ ಎರಡೂ ಬದಿಗೆ ಮರಗಳನ್ನು ಬೆಳೆಸಲು ಅರಣ್ಯ ಇಲಾಖೆ ಚಾಲನೆ ನೀಡಿದ್ದು, ನೆಟ್ಟ ಸಸಿಗಳನ್ನು ಪಾಲನೆ ಪೋಷಣೆ ಮಾಡುವಲ್ಲಿ ಕೂಡ ಅರಣ್ಯ ಇಲಾಖೆ ಅಧಿಕಾರಿಗಳು ಮುತುವರ್ಜಿ ವಹಿಸಬೇಕಾಗಿದೆ.

7800 ಸಸಿ ನೆಡಲು ಯೋಜನೆ:

ಹಿಂದೆ ಹೆದ್ದಾರಿ ಅಗಲೀಕರಣಕ್ಕೆ 263 ಮರಗಳನ್ನು ತೆರವು ಮಾಡಲಾಗಿತ್ತು. ಇದೀಗ ಕಲಕೇರಿ ಗ್ರಾಮದಿಂದ ಕೊಣ್ಣೂರವರೆಗೆ ಹೆದ್ದಾರಿ ಎರಡೂ ಬದಿಗೆ 7800 ಸಸಿಗಳನ್ನು ನೆಡುವ ಯೋಜನೆ ರೂಪಿಸಿ ಚಾಲನೆ ನೀಡಲಾಗಿದೆ. ಇದಕ್ಕೆ ಸಮುದಾಯದ ಸಹಕಾರವೂ ಸಿಗಲಿ. • ಸತೀಶ ಮಾಲಾಪೂರ, ಉಪ ವಲಯ ಅರಣ್ಯಾಧಿಕಾರಿ
•ಸಿದ್ಧಲಿಂಗಯ್ಯ ಮಣ್ಣೂರಮಠ
Advertisement

Udayavani is now on Telegram. Click here to join our channel and stay updated with the latest news.

Next