ಮಹಾನಗರ: ಮಂಗಳಾ ದೇವಿಯಲ್ಲಿ ಜೂನ್ 8ರಂದು ಮರದ ಗೆಲ್ಲು ಬಿದ್ದು ಗಾಯಗೊಂಡಿದ್ದ ಮಹಿಳೆ ಮಾರ್ನಮಿಕಟ್ಟೆಯ ಸುರೇಖಾ ಕೋಟ್ಯಾನ್ (53) ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. 68 ದಿನಗಳಿಂದ ಆಸ್ಪತ್ರೆಯ ಹಾಸಿಗೆಯಲ್ಲಿಯೇ ಇದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಜೂನ್ 8ರಂದು ಶ್ರೀ ಮಂಗಳಾ ದೇವಿ ದೇವಸ್ಥಾನದ ಎದುರಿನ ನಾಗನ ಕಟ್ಟೆಯ ಬೃಹತ್ ಅಶ್ವತ್ಥ ಮರದ ದೊಡ್ಡ ಗಾತ್ರದ ಗೆಲ್ಲೊಂದು ಬಿರುಗಾಳಿ ಮಳೆಗೆ ದಿಢೀರನೆ ಮುರಿದು ಬಿದ್ದು ನಂದಿಗುಡ್ಡೆಯ ಪ್ರವೀಣ್ ಸುವರ್ಣ (49), ಮಾರ್ನಮಿಕಟ್ಟೆಯ ಸುರೇಖಾ ಕೋಟ್ಯಾನ್ (53) ಮತ್ತು ತೇಜಸ್ವಿನಿ (20) ಹಾಗೂ ಜೆಪ್ಪು ಕುಡುಪಾಡಿಯ ರಿಕ್ಷಾ ಚಾಲಕ ನವೀನ್ ಮಡಿವಾಳ (45) ಅವರು ಗಾಯಗೊಂಡಿದ್ದರು.
ಸುರೇಖಾ ಅವರನ್ನು ಹೊರತುಪಡಿಸಿ ಉಳಿದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೆಲವೇ ದಿನಗಳಲ್ಲಿ ಮನೆಗೆ ಮರಳಿದ್ದರು. ಸುರೇಖಾ ಅವರ ತಲೆ, ಕುತ್ತಿಗೆ ಮತ್ತು ಕಾಲುಗಳಿಗೆ ಗಾಯಗಳಾಗಿದ್ದು, ಅತ್ತಾವರ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಕಾಲಿಗೆ ಶಸ್ತ್ರ ಚಿಕಿತ್ಸೆ ಮಾಡಿದ್ದು, ಅದು ಗುಣವಾಗಿದೆ. ತಲೆಯ ಗಾಯವೂ ಗುಣಮುಖವಾಗಿದೆ. ಆದರೆ ಕುತ್ತಿಗೆಗೆ ಆಗಿರುವ ಪೆಟ್ಟಿನಿಂದ ಚೇತರಿಸಿಲ್ಲ. ಅದನ್ನು ಸರಿಪಡಿಸಲು ಟ್ರಾಕ್ಷನ್ ಅಳವಡಿಸಲಾಗಿದ್ದು, ಈಗಾಗಲೇ ಆರು ವಾರ ಕಳೆದಿವೆ.
ಅವರ ಆರೈಕೆಯನ್ನು ಪತಿ ಮಾಜಿ ಸೈನಿಕ ರತ್ನಾಕರ ಕೋಟ್ಯಾನ್, ಪುತ್ರರಾದ ರೋಶನ್, ಸುಶಾನ್ ನೋಡಿಕೊಳ್ಳುತ್ತಿದ್ದಾರೆ. ಬೆಂಗಳೂರಿನಲ್ಲಿದ್ದ ಕಿರಿಯ ಪುತ್ರ ಸುಶಾನ್ ತಾಯಿಯ ಆರೈಕೆ ಮಾಡಲು ಉದ್ಯೋಗವನ್ನು ತೊರೆದು ಬಂದಿದ್ದಾರೆ. ಚಿಕಿತ್ಸೆಯ ವೆಚ್ಚ ಭರಿಸಲು ರತ್ನಾಕರ ಕೋಟ್ಯಾನ್ ಹರಸಾಹಸ ಪಡುತ್ತಿದ್ದಾರೆ. ತಮ್ಮ ವಿಮಾ ಸೌಲಭ್ಯವನ್ನು ಬಳಸಿಯೂ ಸಾಕಾಗದ ಕಾರಣ ಸರಕಾರದ ನೆರವನ್ನು ಯಾಚಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ, ಶಾಸಕ ವೇದವ್ಯಾಸ ಕಾಮತ್, ಮಾಜಿ ಶಾಸಕ ಜೆ.ಆರ್. ಲೋಬೋ ಅವರು ಆಸ್ಪತ್ರೆಗೆ ಭೇಟಿ ನೀಡಿ ಸಹಾಯ ಒದಗಿಸುವ ಭರವಸೆ ನೀಡಿದ್ದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ರಾಮಕೃಷ್ಣ ರಾವ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ ಆಸ್ಪತ್ರೆ ಬಿಲ್‌ನಲ್ಲಿ ಕಡಿತ ಮಾಡುವಂತೆ ಕೆಎಂಸಿ ಆಸ್ಪತ್ರೆಯ ಆಡಳಿತಕ್ಕೆ ಮನವಿ ಮಾಡಿದ್ದು, ‘ಆಸ್ಪತ್ರೆ ಬಿಲ್ ಕಡಿಮೆ ಮಾಡುವ ಬಗ್ಗೆ ಅಲ್ಲಿನ ಆಡಳಿತ ಭರವಸೆ ನೀಡಿದೆ. ಅವರಿಗೆ ನೆರವಾಗುವ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ’ ಎಂದು ತಿಳಿಸಿದ್ದಾರೆ.
‘ಮಂಗಳಾ ದೇವಿ ದೇವಸ್ಥಾನದ ವತಿಯಿಂದ 20,000 ರೂ. ನೀಡಲಾಗಿದ್ದು, ರಾಜ್ಯ ಸರಕಾರದ ಧಾರ್ಮಿಕ ದತ್ತಿ ಇಲಾಖೆಯಿಂದ 12,500 ರೂ. ನೆರವು ಲಭಿಸಿದೆ. ಆದರೆ ಆಸ್ಪತ್ರೆ ಬಿಲ್ ಈಗಾಗಲೇ 4.5 ಲಕ್ಷ ರೂ. ದಾಟಿದ್ದು, 5 ಲಕ್ಷ ರೂ. ಗಳಾಗುವ ಸಾಧ್ಯತೆ ಇದೆ. ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ಬಳಿಕವೂ ಕೆಲವು ತಿಂಗಳ ಚಿಕಿತ್ಸೆ ಬೇಕಾಗಬಹುದು. ಸರಕಾರದ ವತಿಯಿಂದ ಹೆಚ್ಚುವರಿ ನೆರವು ಒದಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಜನ ಪ್ರತಿನಿಧಿಗಳು ಆಸ್ಪತ್ರೆಗೆ ಭೇಟಿ ನೀಡಿ ಭರವಸೆ ನೀಡಿದ್ದರೂ ಇದುವರೆಗೆ ಹೆಚ್ಚುವರಿ ನೆರವು ಲಭಿಸಿಲ್ಲ ಎಂದು ರತ್ನಾಕರ ಕೋಟ್ಯಾನ್ ತಿಳಿಸಿದ್ದಾರೆ. ಸಾರ್ವಜನಿಕರ ನೆರವನ್ನು ಅವರು ಯಾಚಿಸಿದ್ದು, ಸಿಂಡಿಕೇಟ್ ಬ್ಯಾಂಕಿನ ಖಾತೆ ಸಂಖ್ಯೆ 01422030001407 ಇದಕ್ಕೆ ಕಳುಹಿಸಬಹುದು ಎಂದವರು ಮನವಿ ಮಾಡಿದ್ದಾರೆ.