ಬೆಂಗಳೂರು: ಸಸ್ಯಕಾಶಿ ಲಾಲ್‌ಬಾಗ್ ಗಿನ್ನಿಸ್ ದಾಖಲೆ ಬರೆಯಲು ಸಜ್ಜಾಗಿದೆ! ಪರಿಸರ ಸಂರಕ್ಷಣೆ ಜಾಗೃತಿ ಮೂಡಿಸಲು 10 ಸಾವಿರ ವಿದ್ಯಾರ್ಥಿಗಳು “ಮರಗಳನ್ನು ಅಪ್ಪಿಕೊಂಡು’ ಗಿನ್ನಿಸ್ ದಾಖಲೆ ನಿರ್ಮಿಸಲಿದ್ದಾರೆ. ಡಿ.8ರಂದು ಬೆಳಗ್ಗೆ 8.30ಕ್ಕೆ ಲಾಲ್‌ಬಾಗ್‌ನಲ್ಲಿ “ಮೈ ಟ್ರೀ ಮೈ ಲೈಫ್’ ಕಾರ್ಯಕ್ರಮದಡಿ ಸುಮಾರು 10 ಸಾವಿರ ವಿದ್ಯಾರ್ಥಿಗಳು ಮರಗಳನ್ನು ಅಪ್ಪಿಕೊಳ್ಳಲಿದ್ದಾರೆ.
ವಿಶ್ವದಲ್ಲೇ ಅತ್ಯಧಿಕ ಮಂದಿ ಏಕಕಾಲದಲ್ಲಿ ಮರಗಳನ್ನು ಅಪ್ಪಿಕೊಳ್ಳುವ ಮೂಲಕ ಧ್ಯಾನಿಸುವ ಕಾರ್ಯಕ್ರಮ ಇದಾಗಿದ್ದು, ಗಿನ್ನಿಸ್ ದಾಖಲೆ ಸೃಷ್ಟಿಸುವ ಉದ್ದೇಶ ಹೊಂದಲಾಗಿದೆ ಎಂದು ರೋಟರಿ ಕ್ಲಬ್ ಆಫ್ ಬೆಂಗಳೂರು ನ್ಯಾಷನಲ್ ಪಾರ್ಕ್ ಅಧ್ಯಕ್ಷ ಡಾ.ಜೇಮ್ಸ್ ಥಾಮಸ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಇದೇ ವೇಳೆ ಮರಗಳ ಮಹತ್ವ, ವಾತಾವರಣ ಬದಲಾವಣೆಯಲ್ಲಿ ಮತಗಳ ಪಾತ್ರ, ಗಿಡಮರಗಳ ಆಹಾರ ತಯಾರಿಕೆ ಪ್ರಕ್ರಿಯೆ ಸೇರಿ ಹಲವು ತಾಂತ್ರಿಕ ಮಾಹಿತಿ, ಮರ ಸಂಸ್ಕೃತಿ ಕುರಿತು ಪರಿಸರ ತಜ್ಞರು ಮನವರಿಕೆ ಮಾಡಿಕೊಡಲಿದ್ದಾರೆ. ವಿದ್ಯಾರ್ಥಿಗಳು 2 ನಿಮಿಷ ಮರ ಅಪ್ಪಿಕೊಂಡು ಕಣ್ಣುಮುಚ್ಚಿ ನಿಶಬ್ಧವಾಗಿ ಧ್ಯಾನಿಸಲಿದ್ದಾರೆ.
ಈ ಹಿಂದೆ 7 ಸಾವಿರ ಮಕ್ಕಳು ಒಂದೆಡೆ ಒಂದು ವಿಷಯದ ಬಗ್ಗೆ ಆಲೋಚನೆ ಮಾಡಿದ್ದು, ಇದುವರೆಗಿನ ದಾಖಲೆಯಾಗಿದ್ದು, “ಮೈ ಟ್ರೀ ಮೈ ಲೈಫ್’ ಹೊಸ ದಾಖಲೆ ಬರೆಯಲಿದೆ ಎಂದರು. ಬೆಂಗಳೂರು, ಕೋಲಾರ ಜಿಲ್ಲೆಯ 60ಕ್ಕೂ ಹೆಚ್ಚು ಶಾಲೆಗಳ ಸರ್ಕಾರಿ ಹಾಗೂ ಖಾಸಗಿ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಕೋಲಾರದಿಂದ ಒಂದು ಸಾವಿರ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ ಎಂದ ಅವರು, ರೋಟರಿ ಕ್ಲಬ್ ಶಾಖೆಗಳಾದ ಬೆಂಗಳೂರು ಸೌತ್ ಎಂಡ್, ಕುವೆಂಪುನಗರ, ಕೋಲಾರ, ಲಾಲ್‌ಬಾಗ್, ವೈಟ್‌ಫೀಲ್ಡ್ ಸೆಂಟ್ರಲ್, ಬೆಂಗಳೂರು ಎನ್ವರ್ನ್ಮೆಂಟ್ ಟ್ರಸ್ಟ್ ಮತ್ತು ಸ್ನೇಹ ಸಂಸ್ಥೆಗಳು ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಪರಿಸರ ತಜ್ಞ ಡಾ.ಯಲ್ಲಪ್ಪ ರೆಡ್ಡಿ ಅವರು ಸಹಕಾರ ನೀಡಲಿದ್ದಾರೆ ಎಂದರು.