Advertisement
ಜ್ಯಾನೆಟ್ಟಳ ಪರಿಚಯವಾದಾಗ ತಾನು “ಹಿಂದು-ಕ್ರಿಶ್ಚಿಯನ್’ ಎಂದಿದ್ದಳು. ಹಾಗೆಂದರೇನೆಂದು ಕೇಳಿದ್ದಕ್ಕೆ, “ಹಿಂದು-ಕ್ರಿಶ್ಚಿಯನ್ ಅಂದ್ರೆ ನಿಮಗೆ ಗೊತ್ತಿಲ್ಲವೇ?’ ಎಂದು ನನಗೇ ಮರುಪ್ರಶ್ನೆ ಹಾಕಿ ಅಚ್ಚರಿಪಟ್ಟಿದ್ದಳು. ಮುಂದೆ ಮಾತ್ರ ಹಬ್ಬ-ಹುಣ್ಣಿಮೆ, ದೇವರುದಿಂಡರ ಬಗ್ಗೆ ಅವಳೇ ನನಗೆ ಹೇಳಿಕೊಡುವಂತಾಯಿತು. ಇವತ್ತು ಆ ಹಬ್ಬವಲ್ಲವೆ, ಇವತ್ತು ಈ ಉಪವಾಸ ಉಂಟಲ್ಲ , ಎಂದು ನನಗೆ ಗೊತ್ತಿಲ್ಲದ ಎಷ್ಟೋ ಹಿಂದೂ ಪದ್ಧತಿಗಳನ್ನು, ಹಬ್ಬಗಳನ್ನು ಘೋಷಿಸಿ ನನ್ನನ್ನು ತಬ್ಬಿಬ್ಬುಗೊಳಿಸುತ್ತಿದ್ದಳು. ಅವಳ ಪ್ರಕಟಣೆಗಳು ನನ್ನ ಮಟ್ಟಿಗೆ ಹೊಸ ಮಾಹಿತಿಯಾದರೂ, ಅದನ್ನು ತೋರಿಸಿಕೊಳ್ಳದೆ, “ಹೌದೌದು’ ಎಂದು ಉತ್ತರಿಸುತ್ತಿದ್ದುದೂ ಇತ್ತು. ಅಂತೂ ಹಿಂದೂ-ಕ್ರಿಶ್ಚಿಯನ್ ಅಂದರೆ ಏಕಕಾಲಕ್ಕೆ ಹಿಂದುವೂ, ಕ್ರೈಸ್ತರೂ ಆಗಿರುವುದೆಂಬ ಸುಲಭದ ಉತ್ತರ ಕ್ರಮೇಣವಾಗಿ ದೊರಕಿತು.
Related Articles
Advertisement
ಇದಾಗಿ, ಕೆಲವು ದಿನಗಳಾಗಿದ್ದವು. ನಮ್ಮ ರಸ್ತೆಯ ತುದಿಯ ಆಂಡ್ರೂಸ್ ಇಗರ್ಜಿಯ ಬಳಿ ತಿರುಗಿ ಬ್ಯಾಂಡ್‌ಸ್ಟಾಂಡ್‌ನತ್ತ ಹೋಗುತ್ತಿರುವಾಗ, ಫಕ್ಕನೆ ಎಡಗಡೆಗೆ ದೃಷ್ಟಿ ಹೋಯಿತು. ಮಾರ್ಗದ ಬದಿಯ ಹುಣಸೆಮರದಲ್ಲಿನ ಪೊಟರೆಯ ಮೇಲ್ಭಾಗದಲ್ಲೊಂದು ಸಣ್ಣ ಶಿಲುಬೆ ಕಂಡಿತು. ಸುಮಾರು ಎಂಟಿಂಚು ಅಳತೆಯ ಆ ಪೊಟರೆಯೊಳಗೆ ಸಣ್ಣಸಣ್ಣ ಪ್ರತಿಮೆಗಳು ಮತ್ತು ಅದಕ್ಕೊಂದು ಹೂವಿನ ಹಾರ. ಹತ್ತಿರ ಹೋಗಿ ನೋಡಿದರೆ, ಮೇರಿ-ಜೋಸೆಫರ ಪ್ರತಿಮೆಗಳಂತಿದ್ದವು. ದಿನ ಸರಿದಂತೆ ಹೂವಿನಹಾರವು ಪ್ರತಿದಿನ ಬದಲಾಗುವುದನ್ನೂ ಗಮನಿಸಿದೆ. ಮುಂದೊಂದು ದಿನ ಅದಕ್ಕೊಂದು ಕಬ್ಬಿಣದ ನೆಟ್ಟೂ ಬಂತು.
ಪೊಟರೆಯ ಶಿಲುಬೆಯ ಬಗ್ಗೆ ಜ್ಯಾನೆಟ್ಟಳಿಗೆ ಹೇಳುವ ಸರದಿ ನನ್ನದಾಯಿತು. ಪ್ರತೀ ವಾರ ಇಗರ್ಜಿಗೆ ಹೋಗುತ್ತಿದ್ದರೂ ಅವಳು ಅದನ್ನು ಗಮನಿಸಿರಲಿಲ್ಲವೆಂದು ತಿಳಿದಾಗ ನನಗೆ ಯಾಕೋ ಎಲ್ಲಿಲ್ಲದ ಮುದವೆನಿಸಿತು. ಸಿಕ್ಕಿದ ಅವಕಾಶವನ್ನು ಬಿಟ್ಟುಕೊಡದೆ, ಹೆಮ್ಮೆಯಲ್ಲಿ ಅದರ ಬಗ್ಗೆ ವಿವರಿಸಿ ಹೇಳಿ, ಫೋಟೋ ತೋರಿಸಿ, ಹೋಗಿ ನೋಡುವಂತೆ ಅಗತ್ಯಕ್ಕಿಂತ ತುಸು ಹೆಚ್ಚೇ ಒತ್ತಾಯಿಸಿದೆ.
ಭವ್ಯ ದೇವಾಲಯಗಳಲ್ಲಿ, ಬೃಹತ್ ಇಗರ್ಜಿಗಳಲ್ಲಿ ಇರುವ ದೈವತ್ವವು ಹೊರಗೆ ಬಂದು ಬೀದಿಗಿಳಿದು ಮರದಡಿಯ ಗುಡಿಯಲ್ಲೋ, ಪೊಟರೆಯೊಳಗಿನ ಶಿಲುಬೆಯಲ್ಲೋ ನೆಲೆಸುವುದರಿಂದ ಜನಸಾಮಾನ್ಯರಿಗೆ ಸುಲಭವಾಗಿ ಲಭಿಸುವಂತಾಗುವುದೇನೋ ಹೌದು. ಬೆಳಗಿನ ಹೊತ್ತು ಕೆಲಸಕ್ಕೆ ಹೋಗುವ ಜನರು ಹತ್ತಿರದ ಬಸ್ಸು ನಿಲುಗಡೆಗೋ, ರೈಲು ನಿಲ್ದಾಣಕ್ಕೋ ಧಾವಿಸುವ ಗಡಿಬಿಡಿಯಲ್ಲಿ, ಇಂಥ ಗುಡಿಗಳೆದುರು ಅವಸರವಸರವಾಗಿ ರಸ್ತೆಯಲ್ಲೇ ಮೆಟ್ಟು ಜಾರಿಸಿ, ಕೈಜೋಡಿಸಿ ನಿಂತು, ದೈವತ್ವದ ಕ್ಷಣಿಕ ಅನುಭವವನ್ನು ಆನಂದಿಸಿ ಮುಂದೆ ಸರಿಯುವುದು ನಗರಗಳಲ್ಲಿ ಸಾಮಾನ್ಯ ದೃಶ್ಯ. ಹೆಚ್ಚಿನ ಪ್ರತಿಷ್ಠಿತ ದೇವಾಲಯಗಳಲ್ಲಿ ಒಳಗಿನವರೆಗೆ ಹೋಗಿ ಗರ್ಭಗುಡಿಯೆದುರು ನಿಂತು ಹಣಿಕಿದರಷ್ಟೇ ದರ್ಶನಭಾಗ್ಯ, ಅದರ ಮೇಲೆ ಉದ್ದಾನುದ್ದದ ಕ್ಯೂನಲ್ಲಿ ಸಮಯ ದಂಡ! ಬೀದಿಬದಿಯ ಭಗವಂತನಾದರೋ ಬಯಲು ಮತ್ತು ಆಲಯಗಳ ನಡುವೆ ಇರುವ ಜನರ ಕೈಗೆಟಕುವ ದೇವರು!
ಮಿತ್ರಾ ವೆಂಕಟ್ರಾಜ್