Advertisement

ಮರ ಸ್ಥಳಾಂತರ: ದೊರೆಯದ ಪೂರ್ಣ ಫ‌ಲ

11:19 PM Jun 05, 2019 | sudhir |

ಉಡುಪಿ: ನಗರದ ಬನ್ನಂಜೆ ಎಸ್‌ಪಿ ಕಚೇರಿ ಪಕ್ಕದಲ್ಲಿ ರಾಷ್ಟ್ರೀಯ ಹೆದ್ದಾರಿ 169ಎಗೆ ಹೊಂದಿ ಕೊಂಡಂತೆ ನಿರ್ಮಾಣಗೊಳ್ಳುತ್ತಿರುವ ಕೆಎಸ್‌ಆರ್‌ಟಿಸಿ ನೂತನ ಬಸ್‌ನಿಲ್ದಾಣಕ್ಕಾಗಿ ತೆರವುಗೊಳಿಸಲಾದ ಮರಗಳ ಪೈಕಿ ಕೆಲವು ಮರಗಳನ್ನು ಸ್ಥಳಾಂತರಗೊಳಿಸಿ ಮರುಜೀವ ನೀಡುವ ಪರಿಸರ ಕಾರ್ಯಕರ್ತರ ಪ್ರಯತ್ನಕ್ಕೆ ಪೂರ್ಣಫ‌ಲ ಸಿಕ್ಕಿಲ್ಲ.

Advertisement

ಬಸ್‌ ನಿಲ್ದಾಣ ಕಟ್ಟಡ ನಿರ್ಮಾಣಗೊಳ್ಳುವ ಸ್ಥಳ ಮತ್ತು ಆವರಣ ಪರಿಸರದಲ್ಲಿ 25ರಷ್ಟು ಮರಗಳಿದ್ದು ಅವುಗಳ ಪೈಕಿ 9 ಮರಗಳ ತೆರವಿಗೆ ಅರಣ್ಯ ಇಲಾಖೆ ಅನುಮತಿ ನೀಡಿತ್ತು. ಅದರಂತೆ ಕಳೆದ ವರ್ಷದ ಅಕ್ಟೋಬರ್‌ ತಿಂಗಳ ವೇಳೆಗೆ ಮರಗಳನ್ನು ತೆರವುಗೊಳಿಸುವ ಕಾರ್ಯ ಆರಂಭಗೊಂಡಿತ್ತು.

ಇದಕ್ಕೆ ಪರಿಸರವಾದಿಗಳಿಂದ ವಿರೋಧ ವ್ಯಕ್ತವಾಗಿತ್ತು. ಕೆಲವು ಮಂದಿ ಪರಿಸರ ಕಾರ್ಯಕರ್ತರು 9 ಮರಗಳ ಪೈಕಿ ಮೂರನ್ನು ಕ್ರೇನ್‌ ಮೂಲಕ ಅಲ್ಲಿಯೇ ಪಕ್ಕಕ್ಕೆ ಸ್ಥಳಾಂತರಗೊಳಿಸಿ ಮರುಜೀವ ನೀಡುವ ಯತ್ನ ನಡೆಸಿದ್ದರು. ಹೀಗೆ ಸ್ಥಳಾಂತರ ಮಾಡಿ 8 ತಿಂಗಳುಗಳು ಕಳೆದಿವೆ. ಆದರೆ ಎರಡು ಮರಗಳು ಪೂರ್ಣ ಒಣಗಿ ಹೋಗಿವೆ. “ಒಂದು ಮರದಲ್ಲಿ ಕೆಲವು ಸಮಯದವರೆಗೆ ಚಿಗುರು ಕಾಣುತ್ತಿತ್ತು. ಈಗ ಅದು ಕೂಡ ಕಾಣುತ್ತಿಲ್ಲ. ಆದರೆ ಈ ಮರ ಜೀವವಿದೆ. ಮಳೆನೀರು ಬಿದ್ದರೆ ಮತ್ತೆ ಚಿಗುರಬಹುದು’ ಎಂಬ ಆಶಾಭಾವ ಪರಿಸರ ಕಾರ್ಯಕರ್ತರದ್ದು.

ನೀರಿನ ಕೊರತೆ ಕಾರಣ?
ಇಲ್ಲಿಯೇ ಪಕ್ಕದ ನೀರಿನ ಟ್ಯಾಂಕ್‌ನಲ್ಲಿ ಓವರ್‌ಫ್ಲೋ ಆದಾಗ ಹೊರಬರುವ ನೀರನ್ನು ಈ ಮರಗಳ ಬುಡಗಳಿಗೆ ಹಾಯಿಸಲಾಗುತ್ತಿತ್ತು. ಆದರೆ ಅನಂತರ ಓವರ್‌ಫ್ಲೋ ನಿಂತಿತು. ಆ ಬಳಿಕ ಟ್ಯಾಂಕರ್‌ ಮೂಲಕ ನೀರನ್ನು ತಂದು ಹಾಕಲಾಯಿತು. ನೀರಿನ ಅಲಭ್ಯತೆಯಿಂದ ಟ್ಯಾಂಕರ್‌ ನೀರು ಹಾಕುವುದು ಕೂಡ ನಿಂತು ಹೋಯಿತು. “ನೀರಿನ ವ್ಯವಸ್ಥೆ ಇದ್ದರೆ ಎಲ್ಲ ಮರಗಳು ಬದುಕುತ್ತಿದ್ದವು. ಇಲ್ಲಿನ ಮತ್ತೆ ಎರಡು ಮರಗಳನ್ನು ಈ ಮಳೆಗಾಲದಲ್ಲಿ ಸ್ಥಳಾಂತರಗೊಳಿಸುವ ಚಿಂತನೆ ಇದೆ. ಇದಕ್ಕೆ ಸಂಘ ಸಂಸ್ಥೆಗಳ ಪ್ರೋತ್ಸಾಹವೂ ಬೇಕಾಗಿದೆ’ ಎನ್ನುತ್ತಾರೆ ಪರಿಸರ ಕಾರ್ಯಕರ್ತರಾದ ವಿನಯಚಂದ್ರ ಸಾಸ್ತಾನ ಅವರು.

ಬಸ್‌ ನಿಲ್ದಾಣ ಪರಿಸರದಲ್ಲಿ 25ರಷ್ಟು ಮರಗಳಿವೆ. ಈ ಪೈಕಿ 9 ಮರಗಳ ತೆರವಿಗೆ ಮಾತ್ರ ಅನುಮತಿ ನೀಡಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಕ್ಲಿಫ‌ರ್ಡ್‌ ಲೋಬೋ ತಿಳಿಸಿದ್ದಾರೆ.

Advertisement

ಮರ ಸ್ಥಳಾಂತರಕ್ಕೆ ಬೇಡಿಕೆ
ಒಂದು ವರ್ಷದ ಹಿಂದೆ ಉಡುಪಿ ಎಸ್‌ಪಿ ಕಚೇರಿ ಎದುರಿದ್ದ ಒಂದು ಮರವನ್ನು ಮಣಿಪಾಲ ಮಾಹೆ ಕ್ಯಾಂಪಸ್‌ನ ಒಳಗೆ ಸ್ಥಳಾಂತರ ಮಾಡಿದ್ದೆವು. ಅದು ಬದುಕಿದೆ. ಈ ಮಳೆಗಾಲದಲ್ಲಿ ಬ್ರಹ್ಮಾವರದಲ್ಲಿ ಒಂದು ಮನೆ ಕಟ್ಟುವವರು ಕೋವೆ ಮರವನ್ನು ಸ್ಥಳಾಂತರಿಸಲು ಬೇಡಿಕೆಯಿಟ್ಟಿದ್ದಾರೆೆ. ಇದೇ ರೀತಿ 2-3 ಕಡೆ ಮರ ಸ್ಥಳಾಂತರಿಸಲು ಬೇಡಿಕೆ ಬಂದಿದೆ. ಮರ ಸ್ಥಳಾಂತರ ಮಾಡುವ ಕೆಲಸಕ್ಕೆ ಸಾರ್ವಜನಿಕರು, ಸಂಘ ಸಂಸ್ಥೆಗಳಿಂದ ಹೆಚ್ಚಿನ ಪ್ರೋತ್ಸಾಹ ಬೇಕಾಗಿದೆ.
– ವಿನಯಚಂದ್ರ ಸಾಸ್ತಾನ, ಪರಿಸರ ಕಾರ್ಯಕರ್ತರು

Advertisement

Udayavani is now on Telegram. Click here to join our channel and stay updated with the latest news.

Next