ಸಾಗರ: ರಸ್ತೆಯಲ್ಲಿ ಸಂಚರಿಸುವ ಜನ, ವಾಹನಗಳಿಗೆ ಅಪಾಯ ಆಗುತ್ತದೆ ಎಂಬ ಸೂಚನೆ ಸಿಕ್ಕ ತಕ್ಷಣ ಬೃಹತ್ ಮರಗಳನ್ನು ಕಡಿಯುವ ಪ್ರಕ್ರಿಯೆಗೆ ಚಾಲನೆ ನೀಡುವಅರಣ್ಯ ಇಲಾಖೆ, ರಸ್ತೆ ಪಕ್ಕದಲ್ಲಿರುವ ಒಣ ಮರಗಳನ್ನು ಕಟಾವು ಮಾಡುವಂತೆ ಕೋರಿ ಹತ್ತಾರು ಅರ್ಜಿ ಸಲ್ಲಿಸಿದರೂ ಗಮನ ಹರಿಸದಿರುವುದು ಕಲ್ಮನೆ ಗ್ರಾಪಂ ವ್ಯಾಪ್ತಿಯ ಜನರಿಗೆ ಅಚ್ಚರಿಯುಂಟು ಮಾಡಿದೆ.
ಸಾಗರದಿಂದ ಸಿಗಂದೂರು ಕಡೆಗೆ ಪಯಣಿಸಲಿರುವ ಆವಿನಹಳ್ಳಿ ರಸ್ತೆ ಸದಾಜನ, ವಾಹನಗಳಿಂದ ಕೂಡಿರುತ್ತದೆ. ಅಲ್ಲಿ ಒಣಗಿ ಬೀಳುವ ಮರಗಳಿಂದ ಅಪಾಯ ಇದ್ದೇ ಇದೆ. ಈ ಹಿಂದೆ ಹಲವು ಸಂದರ್ಭಗಳಲ್ಲಿ ಇಂತಹ ಘಟನೆ ನಡೆದಿದೆ. ಈ ಮಾರ್ಗದಲ್ಲಿ ಚಿಪ್ಪಳಿ ಲಿಂಗದಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹತ್ತಿರ ಹಾಗೂ ಸಾರಿಗೆ ಇಲಾಖೆ ಕಚೇರಿಗೆ ಹೋಗುವ ರಸ್ತೆ ಸೇರುವಲ್ಲಿ ಒಣ ಮರಗಳು ಹತ್ತಾರು ತಿಂಗಳಿನಿಂದ ರಸ್ತೆ ಪಕ್ಕದಲ್ಲಿವೆ. ಅದನ್ನು ತೆರವುಗೊಳಿಸುವ ವಿಚಾರದಲ್ಲಿ ಸಾರ್ವಜನಿಕರು ಹಲವು ಬಾರಿ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆದರೆ ಆ ಮರಗಳ ವಿಚಾರದಲ್ಲಿ ಅರಣ್ಯ ಇಲಾಖೆ ಸ್ವಲ್ಪವೂ ತಲೆಕೆಡಿಸಿಕೊಂಡಂತಿಲ್ಲ.
ಈ ಹಿಂದೆ ಇದೇ ಆರ್‌ಟಿಒ ಅಧಿಕಾರಿಗಳ ಮೇಲೆ ಈಗ ಒಣಗಿ ನಿಂತಿರುವ ಮರದ ಸಮೀಪವೇ ಸಾಲು ಮರದ ರೆಂಬೆ ಆರ್ ಟಿಒ ಜೀಪಿನ ಮೇಲೆ ಬಿದ್ದು ಇಲಾಖೆಯ ಹಲವರಿಗೆ ಗಾಯಗಳಾಗಿತ್ತು. ಒಣ ಮಾವಿನ ಮರದಿಂದ ಅನತಿ ದೂರದಲ್ಲಿ ಇನ್ನೊಂದು ಒಣ ಮರ 2 ವರ್ಷಗಳ ಹಿಂದೆ ಬೈಕ್ ಮೇಲೆ ಬಿದ್ದು ಯುವಕನೋರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ನಡೆದಿತ್ತು. ಇತ್ತ ಇದೇ ರಸ್ತೆಯಲ್ಲಿನ ಪೆಟ್ರೋಲ್‌ಬಂಕ್ ಎದುರು ಇರುವ ರಂಜಲು ಜಾತಿಯ ಆರೋಗ್ಯವಂತ ಮರದ ಮೇಲೆ ಅರಣ್ಯ ಇಲಾಖೆ ಕಣ್ಣುಬಿದ್ದಿದೆ. ಇದು ಅಕ್ಕಪಕ್ಕದ ಮನೆಗಳಿಗೆ ಅಪಾಯ ಒಡ್ಡಲಿದೆ ಎಂಬ ಅರ್ಜಿ ರೂಪಿಸಿ, ಮರವನ್ನು ಕಡಿತಲೆಗೆ ಯೋಜನೆ ರೂಪಿಸಲಾಗಿದೆ. ಯಾರ ಗಮನಕ್ಕೂ ಬಾರದಂತೆ ಕಡಿತಲೆಗೆ ಅನುಮತಿಸಿ, ಕಟಾವಿಗೆ ಹರಾಜು ಹಾಕಲಾಗಿದೆ ಎಂದು ಸಾಗರದ ಪರಿಸರಾಸಕ್ತರು ದೂರಿದ್ದಾರೆ.
ಬೆಳ್ಳಂಬೆಳಗ್ಗೆ ಜನ ಕಣ್ಣುಜ್ಜಿಕೊಂಡು ಮನೆಯಿಂದ ಹೊರಬೀಳುವ ಮುನ್ನವೇ ಯಂತ್ರಗಳು ಅದನ್ನು ಕತ್ತರಿಸಿಹಾಕಿದ್ದವು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬೇಸರ ವ್ಯಕ್ತಪಡಿಸಿರುವ ಪರಿಸರ ಪ್ರೇಮಿ, ಸ್ವಾನ್ ಆ್ಯಂಡ್ ಮ್ಯಾನ್ ಸಂಸ್ಥೆಯ ಅಖೀಲೇಶ್ ಚಿಪ್ಳಿ, ಜನ ಅರಣ್ಯ ಇಲಾಖೆಯವರನ್ನು ದೂರುವುದಕ್ಕೂ, ಅವರು ಮಾಡುವುದಕ್ಕೂ ಸರಿಯಾಗಿದೆ. ಸಾಗರದಿಂದ ಆವಿನಹಳ್ಳಿಗೆ ಹೋಗುವ ರಸ್ತೆಯಲ್ಲಿ ಕಳೆದ ಐದು ವರ್ಷಗಳಿಂದ ಒಣಗಿದ ಮಾವಿನ ಮರ ರಸ್ತೆಗೆ ವಾಲಿ ನಿಂತಿದೆ. ಅದನ್ನು ಮುಟ್ಟದ ಅರಣ್ಯ ಇಲಾಖೆ ಇಲ್ಲಿಂದ ಒಂದೈವತ್ತು ಮೀಟರ್ ಸಾಗರದ ಕಡೆಗೆ ಹೋದರೆ ಸಿಗುವ 30, 40 ವರ್ಷದ, ಹಣ್ಣು ಬಿಡುತ್ತಿದ್ದ ರಂಜಲ ಮರವನ್ನು ಕಡಿದಿದ್ದಾರೆ. ಇದನ್ನು ಪ್ರಶ್ನಿಸಿದರೆ ನಾವು ಗುತ್ತಿಗೆದಾರರಿಗೆ ಪರಿಸರ ವ್ಯಾಧಿಗಳಾಗುತ್ತೇವೆ ಎಂದು ವಿಷಯ ಪ್ರಸ್ತಾಪಿಸಿದ್ದಾರೆ.
ಅರಣ್ಯ ಇಲಾಖೆ ಮರ ಕಡಿತಲೆಯ ವಿಚಾರದಲ್ಲಿ ಪಾರದರ್ಶಕತೆ ಯನ್ನು ಕಾಪಾಡ ದಿರುವುದೇ ಆ ಇಲಾಖೆಯಲ್ಲಿನ ಭ್ರಷ್ಟಾಚಾರವನ್ನು ಎತ್ತಿ ತೋರಿಸುತ್ತದೆ. ರಾಜ್ಯ ಸರ್ಕಾರ ಅರಣ್ಯ ಇಲಾಖೆಯನ್ನು ರದ್ದುಗೊಳಿಸಿ ಜನರಿಗೇ ಮರಗಳ ರಕ್ಷಣೆಯ ಹೊಣೆ ವಹಿಸಿದರೇ ಹೆಚ್ಚಿನ ಅರಣ್ಯ ಉಳಿಯುತ್ತದೆ ಎನಿಸುತ್ತದೆ!
–ಜಯಪ್ರಕಾಶ್ ಗೋಳಿಕೊಪ್ಪ, ಪರಿಸರ ಕಾರ್ಯಕರ್ತ