ಸಾಗರ : ರಾಷ್ಟ್ರೀಯ ಹೆದ್ದಾರಿ 206 ಅಗಲೀಕರಣ ಹೆಸರಿನಲ್ಲಿ ರಸ್ತೆ ಇಕ್ಕೆಲಗಳಲ್ಲಿರುವ ಬೃಹತ್ ಮರಗಳನ್ನು ಕಡಿತಲೆ ಮಾಡುತ್ತಿರುವ ಅರಣ್ಯ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪರಿಸರ ವಿರೋದಿ ನೀತಿಯನ್ನು ಖಂಡಿಸಿ ಶನಿವಾರ ಪರಿಸರಾಸಕ್ತರು ಮತ್ತು ವಿವಿಧ ಸಂಘಟನೆಗಳ ಆಶ್ರಯದಲ್ಲಿ ಪ್ರವಾಸಿ ಮಂದಿರ ಸಮೀಪ ಘಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯ ಒಂದು ಹಂತದಲ್ಲಿ ಸ್ಥಳಕ್ಕೆ ಧಾವಿಸಿದ ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್. ಹಾಲಪ್ಪ ಹರತಾಳು ಪ್ರತಿಭಟನಕಾರರ ಜೊತೆ ಮಾತನಾಡಿ, ತಕ್ಷಣದಿಂದಲೇ ಮರಗಳ ಕಡಿತಲೆಯನ್ನು ನಿಲ್ಲಿಸಲಾಗುವುದು. ಮುಂದಿನ ೨೪ ಘಂಟೆಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೂ ಸೇರಿದಂತೆ ಎಲ್ಲ ಹಿತಾಸಕ್ತರ ಸಭೆಯನ್ನು ಸಾಗರದಲ್ಲಿ ನಡೆಸಲಾಗುವುದು ಎಂದು ಘೋಷಿಸಿದರು.
ಮೊದಲ ಹಂತದ ಪ್ರತಿಭಟನೆಯ ಸಂದರ್ಭದಲ್ಲಿ ಮಾತನಾಡಿದ ರಂಗಾಯಣದ ಮಾಜಿ ನಿರ್ದೇಶಕ ಚಿದಂಬರರಾವ್ ಜಂಬೆ, ಈಗಾಗಲೇ ಅಭಿವೃದ್ಧಿ ಹೆಸರಿನಲ್ಲಿ ನಾವು ಸಾಕಷ್ಟು ಪರಿಸರವನ್ನು ನಾಶ ಮಾಡಿದ್ದೇವೆ. ಅಳಿದುಳಿದ ಪರಿಸರ ಉಳಿಸಿಕೊಳ್ಳದೆ ಹೋದಲ್ಲಿ ಮನುಷ್ಯ ಆರೋಗ್ಯಪೂರ್ಣ ಜೀವನ ನಡೆಸಲು ಸಾಧ್ಯವಿಲ್ಲ. ಹೆದ್ದಾರಿ ಅಗಲೀಕರಣ ಹೆಸರಿನಲ್ಲಿ ಬೃಹತ್ ಮರಗಳನ್ನು ಕಡಿತಲೆ ಮಾಡುತ್ತಿರುವ ಅರಣ್ಯ ಇಲಾಖೆ ನೀತಿ ಖಂಡನೀಯ. ಪರಿಸರ ಉಳಿಸಿಕೊಂಡು ಅಭಿವೃದ್ದಿ ಮಾಡುವತ್ತ ಸಂಬಂಧಪಟ್ಟವರು ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಪರಿಸರ ಹೋರಾಟಗಾರ ಅಖಿಲೇಶ್ ಚಿಪ್ಳಿ ಮಾತನಾಡಿ, ಅರಣ್ಯ ಇಲಾಖೆ ಕುತಂತ್ರದ ರೂಪದಲ್ಲಿ ಮರ ಕಡಿತಲೆಗೆ ಮುಂದಾಗಿದೆ. ಕಳೆದ ತಿಂಗಳು ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮರ ಕಡಿತಲೆ ಮಾಡಬೇಕು ಎಂದು ಆಕ್ಷೇಪಣೆ ಸಲ್ಲಿಸಿದ್ದೇವೆ. ಆದರೆ ಅರಣ್ಯ ಇಲಾಖೆ ಏಕಾಏಕಿ ಸಾರ್ವಜನಿಕರ ಗಮನಕ್ಕೂ ತರದೆ ಎರಡು ದಿನಗಳ ಅವಧಿಯಲ್ಲಿ ನೂರಾರು ವರ್ಷಗಳಿಂದ ನೆಲೆ ಕಂಡುಕೊಂಡಿದ್ದ ಬೃಹತ್ ಮರಗಳನ್ನು ಕಡಿತಲೆ ಮಾಡುತ್ತಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಅರಣ್ಯ ಇಲಾಖೆ ಹೆದ್ದಾರಿ ಪ್ರಾಧಿಕಾರದ ಜೊತೆ ಶಾಮೀಲಾಗಿ ಪರಿಸರ ನಾಶಕ್ಕೆ ಮುಂದಾಗಿದೆ ಎಂದರು.
ಈಗಾಗಲೇ ಅಗಲೀಕರಣ ಹೆಸರಿನಲ್ಲಿ ಮಾವು, ಹಲಸು, ಹೊಂಗೆ, ಅರಳಿ, ಅತ್ತಿ ಸೇರಿದಂತೆ 120ಕ್ಕೂ ಹೆಚ್ಚು ಮರಗಳನ್ನು ಕಡಿತಲೆ ಮಾಡಿದೆ. ಇನ್ನೂ 300ಕ್ಕೂ ಹೆಚ್ಚು ಮರಗಳನ್ನು ಕಡಿತಲೆ ಮಾಡಲು ಯೋಜಿಸಿದೆ. ಹಿಂದೆ ಮೂರು ಬಾರಿ ಶಾಸಕರಿಗೆ ಮರ ಕಡಿತಲೆ ಮುನ್ನ ಸಾರ್ವಜನಿಕರ ಅಹವಾಲು ಕೇಳಿ ಎಂದು ಮನವಿ ಮಾಡಲಾಗಿತ್ತು. ಶಾಸಕರು ಸಹ ಹೆದ್ದಾರಿ ಪ್ರಾಧಿಕಾರಿದ ಅಧಿಕಾರಿಗಳನ್ನು ಕರೆಸಿ ಮಾತುಕತೆ ನಡೆಸುವುದಾಗಿ ಭರವಸೆ ನೀಡಿದ್ದರು. ಆದರೆ ಶಾಸಕರು ಮಾತು ತಪ್ಪಿದ್ದಾರೆ. ಯಾವುದೇ ಅಧಿಕಾರಿಗಳನ್ನು ಕರೆಸಿ ಮರ ಕಡಿತಲೆ ಮುನ್ನ ಯೋಚಿಸಿ ಎಂದು ಸೂಚನೆ ನೀಡಿಲ್ಲ. ಇನ್ನು ಉಳಿದ ಮುನ್ನೂರಕ್ಕೂ ಹೆಚ್ಚು ಮರಗಳನ್ನು ಯಾವುದೇ ಕಾರಣಕ್ಕೂ ಕಡಿಯಬಾರದು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ದಿನೇಶ್ ಡಿ., ಎಂ.ಜಿ.ರಾಘವನ್, ವಿದ್ಯಾರ್ಥಿನಿ ಸ್ಫೂರ್ತಿ ವೈ.ಎಚ್., ಕೆ.ವಿ.ಪ್ರವೀಣ್‌ಕುಮಾರ್, ಎಚ್.ಬಿ.ರಾಘವೇಂದ್ರ, ಯೇಸುಪ್ರಕಾಶ್, ಪ್ರತಿಭಾ ರಾಘವೇಂದ್ರ ಎಂ.ವಿ., ಕೆ.ಜಿ.ಕೃಷ್ಣಮೂರ್ತಿ, ಮುರಳಿ ಮಂಚಾಲೆ, ವಿರೂಪಾಕ್ಷ, ಮಂಜುನಾಥ ಜೇಡಿಕುಣಿ, ಪ್ರಕಾಶ್ ಗುಡಿಗಾರ್, ಸತೀಶ್ ಇನ್ನಿತರರು ಹಾಜರಿದ್ದರು.
ಸಿಗಂದೂರು ದೇವಿಯ ಮೇಲೆ ಆಣೆ; ಮರ ಉಳಿಸಲು ನಾನು ಬದ್ಧ: ಹಾಲಪ್ಪ
ಸಾಗರ: ಕಾಯಾ ವಾಚಾ ಮನಸಾ ಪರಿಸರ ರಕ್ಷಣೆಗೆ ನಾನು ಸದಾ ಬದ್ಧ. ನಾನೂ ಪರಿಸರ ಸ್ನೇಹಿತ. ಇಲ್ಲಿನ ಮರಗಳ ನಾಶದಿಂದ ನನಗೂ ನೋವಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ 206ರ ರಸ್ತೆ ವಿಸ್ತರಣೆಯ ಕಾರಣ ಎರಡು ಲೈನ್ ರಸ್ತೆಯ ಬದಲು ನಾಲ್ಕು ಲೈನ್ ಆಗುವಾಗ 500ಕ್ಕಿಂತ ಹೆಚ್ಚಿನ ಮರ ತೆಗೆಯಬೇಕಾಗುತ್ತದೆ ಎಂಬ ಮಾಹಿತಿಯಿತ್ತು. 200 ಮರಗಳನ್ನು ಉಳಿಸಲು ನಾನು ಸಲಹೆ ನೀಡಿದ್ದೆ. ನಾನು ನಂಬುವ ಸಿಗಂದೂರು ದೇವಿಯ ಮೇಲೆ ಪ್ರಮಾಣ ಮಾಡಿ ಹೇಳುತ್ತಿದ್ದೇನೆ, ಸಾಧ್ಯವಾದಷ್ಟೂ ಮರಗಳನ್ನು ಉಳಿಸುವ ಪ್ರಯತ್ನ ನಡೆಸುತ್ತೇನೆ ಎಂದು ಶಾಸಕ ಎಚ್. ಹಾಲಪ್ಪ ಹರತಾಳು ಪ್ರತಿಕ್ರಿಯಿಸಿದರು.
ಈ ಹಿಂದೆ ಕೂಡ ಅಧಿಕಾರಿಗಳ ಜೊತೆ ಚರ್ಚೆ ನಡೆಸಲು ಸಭೆ ನಿಗದಿಯಾಗಿತ್ತು. ಒಂದು ದಿನ ಸಂಜೆ ಏಳರ ಸಮಯದಲ್ಲಿ ನಾನು ಬೆಂಗಳೂರಿಗೆ ತೆರಳುವ ಗಡಿಬಿಡಿಯಲ್ಲಿದ್ದಾಗ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಪೂರ್ವಸೂಚನೆ ಇಲ್ಲದೆ ಬಂದಿದ್ದರು. ಅಂದು ಮಾತುಕತೆ ನಡೆಯಲಿಲ್ಲ. ಈಗ ಇದ್ದಕ್ಕಿದ್ದಂತೆ ಏಕಾಏಕಿ ಮರಗಳ ಕಡಿತಲೆಯನ್ನು ಆರಂಭಿಸಿದ್ದಾರೆ. ಬ್ಯೂರೋಕ್ರಾಟ್, ಟೆಕ್ನೋಕ್ರಾಟ್ ಸರಿಯಾಗಿ ಚಿಂತಿಸಿದರೆ ಮಾತ್ರ ಪರಿಸರ ಉಳಿಸಬಹುದು ಎಂದರು.