Advertisement

ಅಡಕೆ ಬೆಳೆಗಾರನ “ಚಿಗುರಿದ ಕನಸು’

12:05 PM Jul 02, 2019 | Sriram |

ಬಿ.ಎಸ್ಸಿ ಓದಿ, ನೌಕರಿಯ ಹಿಂದೆ ಬೀಳದೆ ಅಡಕೆ ಕೃಷಿಯಲ್ಲಿ ತೊಡಗಿಸಿಕೊಂಡವರು ಬಂಟ್ವಾಳದ ಗಣಪತಿ ಭಟ್‌. ಅವರು ಅಭಿವೃದ್ಧಿಪಡಿಸಿರುವ ಅಡಕೆ ಮರ ಹತ್ತುವ ಯಂತ್ರದಿಂದಾಗಿ ಅವರು ಕೃಷಿಕರಷ್ಟೇ ಅಲ್ಲ ವಿಜ್ಞಾನಿ ಕೂಡಾ ಎಂಬುದು ಸಾಬೀತಾಗಿದೆ. ಅವರು ಉದಯವಾಣಿಗೆ ಅವರು ನೀಡಿದ ಪುಟ್ಟ ಸಂದರ್ಶನ ಯುವಕರನ್ನು ನಾಚಿಸುವುದು ಮಾತ್ರವಲ್ಲ ಪ್ರೇರಣೆ ನೀಡುವಂತಿದೆ…

Advertisement

ಇತ್ತೀಚೆಗೆ ಇಡೀ ಭಾರತದ ದೃಷ್ಟಿ ಬಂಟ್ವಾಳದ ಕೋಮಾಲು ಎಂಬ ಗ್ರಾಮದ ಮೇಲೆ ಬಿದ್ದಿತ್ತು. ಅದಕ್ಕೆ ಕಾರಣವಾಗಿದ್ದು ಬಹುಕೋಟಿ ಮೊತ್ತದ ಮಹಿಂದ್ರಾ ಕಂಪನಿಯ ಮಾಲೀಕರಾದ ಆನಂದ್‌ ಮಹೀಂದ್ರಾ ಅವರು ಮಾಡಿದ್ದ ನಾಲ್ಕೈದು ಸಾಲಿನ ಒಂದೇ ಒಂದು ಟ್ವೀಟ್‌. ಅದರಲ್ಲಿ ಅವರು, ಅಡಕೆ ಮರ ಹತ್ತುವ ಯಂತ್ರೋಪಕರಣವೊಂದನ್ನು ಮನೆಯಲ್ಲೇ ತಯಾರಿಸಿದ್ದ ಬಂಟ್ವಾಳದ ಕೃಷಿಕರೊಬ್ಬರನ್ನು ಉದಾಹರಿಸುತ್ತಾ, ಆ ಯಂತ್ರವನ್ನು ಅಭಿವೃದ್ದಿಪಡಿಸುವಂತೆ ಪರಿಚಿತರೋರ್ವರಿಗೆ ಟ್ಯಾಗ್‌ ಮಾಡಿದ್ದರು. ಈ ಉಪಕರಣದ ರೂವಾರಿ, ಅಡಕೆ ಬೆಳೆಗಾರ ಗಣಪತಿ ಭಟ್‌.

ಮರಳಿ ಯತ್ನ ಮಾಡುವುದೇ ಯಶಸ್ಸು
ವಿದ್ಯುತ್‌ ಬಲ್ಬ್ ಕಂಡುಹಿಡಿದ ವಿಜ್ಞಾನಿ ಥಾಮಸ್‌ ಆಲ್ವಾ ಎಡಿಸನ್‌, ತನ್ನ ಆವಿಷ್ಕಾರದ ಹಿಂದೆ ಸಾವಿರ ವಿಫ‌ಲ ಪ್ರಯತ್ನಗಳಿದ್ದವು ಎಂದಿದ್ದ,. ಅಂದರೆ 1001ನೇ ಬಾರಿ ಯತ್ನಿಸುವಾಗಲೂ ಯಶಸ್ಸು ಸಿಗುತ್ತದೆ ಎನ್ನುವ ಖಾತರಿ ಅವನಿಗಿರಲಿಲ್ಲ ಎಂದಾಯ್ತಲ್ಲವೆ? ಅದೇ ರೀತಿ ಗಣಪತಿಯವರ ಈ ಯಶಸ್ಸಿನ ಹಿಂದೆ ಎರಡು ಮೂರು ವರ್ಷಗಳ ಸುದೀರ್ಘ‌ ಪರಿಶ್ರಮವಿದೆ, ಅಸಂಖ್ಯ ವಿಫ‌ಲ ಪ್ರಯತ್ನಗಳಿವೆ. ಈ ಪಯಣದಲ್ಲಿ ಅವರಿಗೆ ಹಲವು ಮಂದಿ ತಂತ್ರಜ್ಞರು, ಸಲಹೆಗಾರರು, ಅಷ್ಟೇ ಯಾಕೆ; ಕುಟುಂಬದವರು ಕೂಡಾ ಜತೆಯಾಗಿದ್ದಾರೆ. ಅವರೆಲ್ಲರನ್ನೂ ಗಣಪತಿ ಅವರು ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತಾರೆ.

Neccessary is the mother of invention ಎನ್ನುವ ಮಾತೊಂದಿದೆ. ಅದರರ್ಥ “ಅಗತ್ಯವೇ ಆವಿಷ್ಕಾರಕ್ಕೆ ಮೂಲ ಪ್ರೇರಣೆ’. ಅದೇ ರೀತಿ ಗಣಪತಿಯವರು ಚಿಕ್ಕಂದಿನಿಂದಲೂ ಅಡಕೆ ಮರ ಏರುವಾಗ ಜನರು ಎದುರಿಸುವ ಸಮಸ್ಯೆಗಳನ್ನು ನೋಡುತ್ತಾ ಬಂದಿದ್ದರು. ದಶಕಗಳ ಹಿಂದೆ ಮೈಸೂರಿನ ಯುವರಾಜ ಕಾಲೇಜಿನಲ್ಲಿ ಬಿ.ಎಸ್ಸಿ ಮುಗಿಸಿದ ಮೇಲೆ ಬಹುತೇಕರಂತೆ ನೌಕರಿಯ ಹಿಂದೆ ಅವರು ಹೋಗಲಿಲ್ಲ. ಅವರ ಒಲವಿದ್ದದ್ದು ಕೃಷಿಯ ಕಡೆಗೆ. ಅಲ್ಲಿಂದ ನೇರವಾಗಿ ಸ್ವಂತ ಊರು ಕೋಮಾಲಿಗೆ ಹಿಂತಿರುಗಿ ಕೃಷಿಯಲ್ಲಿ ತೊಡಗಿಸಿಕೊಂಡರು.

ಒಂದು ರುಪಾಯಿ ಲಾಭ ಬೇಡ
ಈಗ ಇಂಟರ್‌ನೆಟ್‌ನಲ್ಲಿ ಪ್ರಚಾರ ಸಿಕ್ಕ ನಂತರ ಅನೇಕ ಸಂಸ್ಥೆಗಳು ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಆದರೆ ಇಷ್ಟು ವರ್ಷ ತನ್ನ ಜತೆ ಇದ್ದವರೇ ಸಾಕು ಎನ್ನುವ ಭಾವನೆ ಗಣಪತಿಯವರದು. ತಂತ್ರಜ್ಞಾನಗಳನ್ನು ತಮ್ಮದಾಗಿಸಿಕೊಂಡು ಅದನ್ನು ಲಾಭದಾಯಕ ಉದ್ದಿಮೆಯನ್ನಾಗಿ ಮಾಡುವ ಸಂಸ್ಥೆಗಳತ್ತ ಅವರು ಕಿಡಿ ಕಾರುತ್ತಾರೆ. ಗಣಪತಿವರ ಉದ್ದೇಶ ಸ್ವಾರ್ಥರಹಿತವಾದದ್ದು. ಅತ್ಯಂತ ಕಡಿಮೆ ಖರ್ಚಿನಲ್ಲಿ ಅಡಕೆ ಬೆಳೆಗಾರರಿಗೆ ಈ ಉಪಕರಣವನ್ನು ದೊರೆಯುವಂತೆ ಮಾಡಬೇಕು ಎನ್ನುವುದಷ್ಟೇ ಅವರ ಕಾಳಜಿ. ಇಲ್ಲಿಯವರೆಗೆ ಏನಿಲ್ಲವೆಂದರೂ 4 ಲಕ್ಷ ಹಣವನ್ನು ಅದಕ್ಕಾಗಿ ವಿನಿಯೋಗಿಸಿದ್ದಾರೆ. ಆದಾಗ್ಯೂ ಇನ್ನು ಮುಂದೆಯೂ ಮರ ಹತ್ತುವ ಉಪಕರಣವನ್ನು ಸುಧಾರಣೆಗೆ ಒಳಪಡಿಸಲು ವೆಚ್ಚ ಮಾಡಲು ಸಿದ್ಧ ಎಂದು ಹುರುಪು ತೋರುತ್ತಾರೆ.

Advertisement

ಯಂತ್ರ ಹೇಗೆ ಕಾರ್ಯಾಚರಿಸುತ್ತದೆ?
ಈ ಯಂತ್ರದಲ್ಲಿ ಪ್ರಮುಖ ವಿಭಾಗವೆಂದರೆ ಬ್ರೇಕಿಂಗ್‌ ಸಿಸ್ಟಮ್‌, ಸೀಟ್‌ ಮತ್ತು ಹ್ಯಾಂಡಲ್‌. ಬ್ರೇಕಿಂಗ್‌ ಸಿಸ್ಟಮ್‌ ಎಂದರೆ ಯಂತ್ರ ಮರಕ್ಕೆ ಕಟ್ಟಿಕೊಳ್ಳುವ ಭಾಗ. ಸೀಟ್‌ನಲ್ಲಿ ಕುಳಿತು ಸುರಕ್ಷತಾ ಬೆಲ್ಟನ್ನು ಹ್ಯಾಂಡಲ್‌ ಭಾಗಕ್ಕೆ ಸಿಕ್ಕಿಸಬೇಕು. ಬಟನ್‌ ಪ್ರಸ್‌ ಮಾಡಿದರೆ ಯಂತ್ರ ಚಾಲೂ ಆಗುತ್ತದೆ. ಹ್ಯಾಂಡಲ್‌ ದ್ವಿಚಕ್ರವಾಹನದಂತೆಯೇ ಕೆಲಸ ನಿರ್ವಹಿಸುತ್ತದೆ. ಆ್ಯಕ್ಸೆಲೇಟರ್‌ ತಿರುಗಿಸಿದರೆ ಯಂತ್ರ ಮೇಲಕ್ಕೆ ಚಲಿಸುತ್ತದೆ. ಆಕ್ಯಕ್ಸೆಲೇಟರ್‌ ತಿರುಗಿಸದೇ ಹಾಗೆಯೇ ಬಿಟ್ಟರೆ ನಿಂತಲ್ಲಿಯೇ ನಿಲ್ಲುತ್ತದೆ. ಯಂತ್ರ ಮೇಲಿಂದ ಕೆಳಕ್ಕೆ ಇಳಿಯಬೇಕೆಂದರೆ ಕ್ಲಚ್‌ ಮಾತ್ರ ಹಿಡಿದರೆ ಸಾಕಾಗುತ್ತದೆ. ನಿಧಾನಕ್ಕೆ ಕ್ಲಚ್‌ ಹಿಡಿದರೆ ಸಾವಧಾನವಾಗಿ ಕೆಳಕ್ಕೆ ಬರುತ್ತದೆ..

ಆಗಬೇಕಾದ ಸುಧಾರಣೆಗಳು
– ಮರಕ್ಕೆ ಗಾಯವಾಗದಂತೆ ಬ್ರೇಕಿಂಗ್‌ ಸಿಸ್ಟಮ್‌(ಗ್ರಿಪ್‌)ಅನ್ನು ಬಲಪಡಿಸುವುದು
– ಮಳೆಗಾಲದಲ್ಲಿ ಮರಗಳು ಜಾರುವಾಗಲೂ ಯಂತ್ರ ಕಾರ್ಯ ನಿರ್ವಹಿಸುವಂತೆ ಮಾಡುವುದು
– ಭಾರ ತಡೆಯುವ ಸಾಮರ್ಥ್ಯವನ್ನು ಹೆಚ್ಚಿಸುವುದು
– 30 ಸೆಕೆಂಡಿಗಿಂತಲೂ ವೇಗ ಹೆಚ್ಚಿಸುವುದು
– ನಿರ್ಮಾಣ ವೆಚ್ಚವನ್ನು ಇನ್ನಷ್ಟು ತಗ್ಗಿಸುವುದು

ನಮ್ಮಲ್ಲಿ ಅಡಕೆ ಕೃಷಿಗೆ ಸಂಬಂಧಿಸಿದ ಅನೇಕ ಸಂಘಸಂಸ್ಥೆಗಳಿವೆ, ಸಂಶೋಧನಾ ಕೇಂದ್ರಗಳೂ ಇವೆ. ಎಲ್ಲಾ ಇದ್ದೂ ಅಡಕೆ ಮರ ಹತ್ತುವಂಥ ಒಂದೇ ಒಂದು ಪರಿಣಾಮಕಾರಿ ಯಂತ್ರವನ್ನು ಕಂಡುಹಿಡಿಯಲಾಗಲಿಲ್ಲ ಎಂದರೆ ಏನರ್ಥ? ಹೀಗಾಗಿ ಇತರರನ್ನು ಅವಲಂಬಿಸದೆ ಇಡೀ ಅಡಕೆ ಬೆಳೆಗಾರರ ಸಮುದಾಯಕ್ಕೆ ಏನಾದರೊಂದು ಕೊಡುಗೆ ಕೊಡಬೇಕೆಂಬುದೇ ನನ್ನ ತುಡಿತವಾಗಿತ್ತು. ಅದೀಗ ಭಾಗಶಃ ಈಡೇರಿದೆ. ಕೆಲಸ ಮುಗಿದಿಲ್ಲ. ಅದನ್ನು ಇನ್ನೂ ಸುಧಾರಿಸಬೇಕು.
– ಗಣಪತಿ ಭಟ್‌

– ಹರ್ಷವರ್ಧನ್‌ ಸುಳ್ಯ

ಸಂಪರ್ಕ: 9632774159

Advertisement

Udayavani is now on Telegram. Click here to join our channel and stay updated with the latest news.

Next