ವಿಜಯಪುರ: ಜಿಲ್ಲೆಯಲ್ಲಿ ಜಲ, ವೃಕ್ಷ, ಶಿಕ್ಷಣ ಅಭಿಯಾನ ಯಶಸ್ವಿಯತ್ತ ಮುನ್ನೆಡೆದಿದ್ದು, ಗ್ರಾಮ-ಗ್ರಾಮಗಳಲ್ಲಿ ಈ ಕುರಿತು ಜಾಗೃತಿ ಮೂಡಿದೆ ಎಂದು ಮಾಜಿ ಸಚಿವ, ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲ ಹೇಳಿದರು.
ಸೋಮದೇವರ ಹಟ್ಟಿಯಲ್ಲಿ ತುಬಚಿ-ಬಬಲೇಶ್ವರ ಯೋಜನೆಯಡಿ ತುಂಬಿರುವ ಕೆರೆಗೆ ಬಾಗಿನ ಅರ್ಪಿಸಿ, ಸೋಮದೇವರಹಟ್ಟಿ ತಾಂಡಾ 1ರಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿತ ಕೆರೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಜಿಲ್ಲೆಯ ರೈತರು ಅರಣ್ಯ ಇಲಾಖೆ ನೀಡಿರುವ ಸಸಿಗಳನ್ನು ಜೂನ್ ಮೊದಲ ವಾರದಲ್ಲಿಯೇ ಖಾಲಿ ಮಾಡಿದರೂ ಇದು ಜಲ ಮತ್ತು ವೃಕ್ಷದ ಬಗ್ಗೆ ಆಸಕ್ತಿ ತೋರುತ್ತದೆ. ಜಿಲ್ಲೆಯಲ್ಲಿ ಇದೀಗ ಪ್ರತಿ ಗ್ರಾಮಗಳಲ್ಲೂ ಯುವಕರು ನೀರಿನ ಮಹತ್ವ ಅರಿತಿದ್ದಾರೆ. ಚೆಕ್ ಡ್ಯಾಂ ಬಾಂದಾರ್ ನಿರ್ಮಾಣದ ಕುರಿತು ಬೇಡಿಕೆ ಇಡುತ್ತಿದ್ದಾರೆ. ಇದು ಜಿಲ್ಲೆಯ ಮಟ್ಟಿಗೆ ಆಶಾದಾಯಕ ಬೆಳವಣಿಗೆ ಎಂದರು.
ಸೋಮದೇವರ ಹಟ್ಟಿ ಕೆರೆಗೆ ಹೊಂದಿಕೊಂಡಿರುವ ಬದುವಿನಲ್ಲಿ ಸಸಿಗಳಿಗೆ ನೀರುಣಿಸಲು ವೈಯಕ್ತಿಕವಾಗಿ 50 ಸಾವಿರ ರೂ. ನೀಡಿ ಪೈಪ್‌ಲೈನ್ ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಇದುವರೆಗೆ ದೇವಸ್ಥಾನ ಹಾಗೂ ಸಮುದಾಯ ಭವನಗಳಿಗೆ ಹೆಚ್ಚು ಒತ್ತು ನೀಡಲಾಗಿತ್ತು. ಕೋವಿಡ್ ಸಂಕಷ್ಟದಿಂದಾಗಿ ಆರೋಗ್ಯ ಕೇಂದ್ರಗಳಿಗೆ ಹೆಚ್ಚಿನ ಒತ್ತು ನೀಡಬೇಕಾದ ಅಗತ್ಯ ಇದೆ. ಮುಂದಿನ ದಿನಗಳಲ್ಲಿ ಶಾಲಾ ಕಟ್ಟಡಗಳಿಗೆ ಹಾಗೂ ಆಸ್ಪತ್ರೆಗಳಿಗೆ ಹೆಚ್ಚಿನ ಅನುದಾನ ಒದಗಿಸುವುದಾಗಿ ತಿಳಿಸಿದರು.
ನಂತರ ಬಿಜ್ಜರಗಿಯಲ್ಲಿ ಹೆಸ್ಕಾಂ ಶಾಖಾ ಕಚೇರಿಯ ನೂತನ ಕಟ್ಟಡ ಕಾಮಗಾರಿಗೆ ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ ಶಂಕುಸ್ಥಾಪನೆ ಹಾಗೂ ಹೆಸ್ಕಾಂ ಗ್ರಾಹಕರ 24×7 ಸೇವೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಈ ಭಾಗದಲ್ಲಿ ಹೆಚ್ಚಿನ ನೀರಾವರಿ ಆಗಿರುವುದರಿಂದ ಹೆಸ್ಕಾಂ ಮೇಲೆ ಒತ್ತಡ ಇದೆ. ಗ್ರಾಹಕರ ಎಲ್ಲ ದೂರುಗಳಿಗೆ ಹೆಸ್ಕಾಂ ಅಧಿಕಾರಿಗಳು ಸ್ಪಂದಿಸಬೇಕು ಎಂದರು.
ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಸೋಮನಾಥ ಬಾಗಲಕೋಟ, ತಾಪಂ ಅಧ್ಯಕ್ಷೆ ಪ್ರಭಾವತಿ ನಾಟೀಕಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದುಗೌಡನವರ, ತಾಪಂ ಅಧ್ಯಕ್ಷ ದಾನಪ್ಪ ಚೌದರಿ, ಜುಗನು ಮಹಾರಾಜ, ಮಲ್ಲಿಕಾರ್ಜುನ ಲೋಣಿ, ಬಿ.ಎಸ್. ಪಾಟೀಲ, ರಾಮಲಿಂಗ ಮಸಳಿ, ಭೀಮಪ್ಪ ಮಸಳಿ, ಶಂಕರಗೌಡ ಬಿರಾದಾರ, ತಾಪಂ ಇಒ ಬಿ.ಎಸ್. ರಾಠೊಡ, ಹೆಸ್ಕಾಂ ಎಇ ಎಂ.ಎಸ್. ಜೀರ, ಪಿಎಸೈ ಗಂಗೂಬಾಯಿ ಬಿರಾದಾರ, ಪಿಡಿಒ ಪದ್ಮಿನಿ ಬಿರಾದಾರ, ಆರ್.ಬಿ. ಬಡಿಗೇರ, ಗುತ್ತಿಗೆದಾರ ಶಂಕರ ನಾಯಕ, ಸದಾಶಿವ ಚಿಕರೆಡ್ಡಿ, ಮಾಳಪ್ಪ ಕವಿ ಇದ್ದರು.