Advertisement
ಮೇಯರ್ ಬಿ.ಭಾಗ್ಯವತಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸರಳ ಸಮಾರಂಭದಲ್ಲಿ ಐಟಿಸಿ ಕಂಪನಿಯ ಪ್ರಮುಖರು ಹಾಗೂ ಪಾಲಿಕೆಯ ಪ್ರಮುಖರು ಒಡಂಬಡಿಕೆಗೆ ಸಹಿ ಹಾಕಿದರು. ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ(ಸಿಎಸ್‌ಆರ್) ಯೋಜನೆಯಡಿ ಮೂರು ವರ್ಷಗಳ ಅವಧಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದ್ದು, ಅದರಂತೆ ನಗರ ಪಾಲಿಕೆಯ ಎಲ್ಲಾ 65 ವಾರ್ಡ್‌ಗಳಲ್ಲಿ ಮಾಹಿತಿ, ಶಿಕ್ಷಣ ಹಾಗೂ ಸಂವಹನ(ಐಇಸಿ) ಚಟುವಟಿಕೆಗಳನ್ನು ಕೈಗೊಳ್ಳಲು ಪ್ರಸ್ತಾವನೆ ಸಲ್ಲಿಸಲಾಗಿದೆ.
Related Articles
Advertisement
ಒಡಂಬಡಿಕೆ ಪ್ರಕಾರ ಐಟಿಸಿ ಕಂಪನಿಯ ಸ್ವಯಂಸೇವಕರು ಪ್ರತಿನಿತ್ಯ ಬೆಳಗ್ಗೆ 6ರಿಂದ 10ರವರೆಗೆ 65 ವಾರ್ಡ್ ವ್ಯಾಪ್ತಿಯ ಮನೆಗಳಿಗೆ ಭೇಟಿ ನೀಡಿ, ಮೂಲದಲ್ಲೇ ತ್ಯಾಜ್ಯವನ್ನು ವಿಂಗಡಣೆ ಮಾಡುವ ಬಗ್ಗೆ ಅರಿವು ಮೂಡಿಸಲಿದ್ದಾರೆ. ಸದ್ಯ ಪಾಲಿಕೆ ವ್ಯಾಪ್ತಿಯ ವಲಯವಾರು ಈ ಕಾರ್ಯವನ್ನು ಆರಂಭಿಸಲಿದ್ದು, ಇದಕ್ಕಾಗಿ ಪ್ರತಿ ವಾರ್ಡ್‌ಗೆ 5-10 ಸ್ವಯಂಸೇವಕರನ್ನು ನೇಮಿಸಲಾಗಿದೆ.
ಅಲ್ಲದೆ ದೇಶದ ಹಲವು ರಾಜ್ಯಗಳಲ್ಲಿ 2014ರಿಂದ ಈ ರೀತಿಯ ಒಡಂಬಡಿಕೆಯನ್ನು ಮಾಡಿಕೊಂಡಿರುವ ಐಟಿಸಿ ಕಂಪನಿ, 1.5 ದಶಲಕ್ಷ ಮನೆಗಳಿಗೆ ಭೇಟಿ ನೀಡಿ ಅರಿವು ಮೂಡಿಸಲಾಗಿದ್ದು, 68 ಮೆಟ್ರಿಕ್ ಟನ್‌ಗಳಷ್ಟು ಒಣ ತ್ಯಾಜ್ಯವನ್ನು ಮೂಲದಲ್ಲೇ ವಿಂಗಡಣೆ ಮಾಡಲಾಗಿದೆ ಎಂದು ಐಟಿಸಿ ಕಂಪನಿಯ ಕರ್ನಾಟಕದ ಮುಖ್ಯಸ್ಥ ಅಪ್ಸರ್ ಅಹಮದ್ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.
ಈ ಸಂದರ್ಭದಲ್ಲಿ ಉಪ ಮೇಯರ್ ಇಂದಿರಾ, ಪಾಲಿಕೆ ಆಯುಕ್ತ ಜಿ.ಜಗದೀಶ್, ಪಾಲಿಕೆ ಸದಸ್ಯರಾದ ಕೆ.ಟಿ.ಚೆಲುವೇಗೌಡ, ಎಂ.ಜೆ.ರವಿಕುಮಾರ್, ಐಟಿಸಿ ಕಂಪನಿಯ ವ್ಯವಸ್ಥಾಪಕ ಜಿ.ಎನ್.ಮೂರ್ತಿ, ಘನತ್ಯಾಜ್ಯ ನಿರ್ವಹಣೆ ಸಲಹೆಗಾರ ರಮಾಕಾಂತ್ ಇನ್ನಿತರರು ಹಾಜರಿದ್ದರು.
ದೇಶದಲ್ಲೇ ಮೊದಲ ಬಾರಿಗೆ ಮೈಸೂರಿನಲ್ಲಿ ವೇಸ್ಟ್ ಸ್ಟ್ರೀಮ್ ಕಲೆಕ್ಷನ್ ಹೆಸರಿನಲ್ಲಿ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಚಿಂತನೆ ನಡೆಸಲಾಗಿದೆ. ವಾರಕ್ಕೆ ಒಮ್ಮೆ ಪಾಲಿಕೆ ವ್ಯಾಪ್ತಿಯ ಮನೆಗಳಿಗೆ ತೆರಳಿ ನಿರಪಯುಕ್ತವಾಗಿರುವ ಹಾಸಿಗೆ, ಬಟ್ಟೆ, ಟ್ಯೂಬ್‌ಲೈಟ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಸಂಗ್ರಹಿಸಲಾಗುವುದು. ಅಲ್ಲದೆ, ನಗರದ ಬ್ಯೂಟಿಪಾರ್ಲರ್‌ಗಳು, ಸಲೂನ್‌ಗಳಲ್ಲಿ ಸಂಗ್ರಹವಾಗುವ ಕೂದಲನ್ನು ಸಂಗ್ರಹಿಸುವ ಕಾರ್ಯಕ್ರಮ ಆರಂಭಿಸಲು ಚಿಂತನೆ ನಡೆಸಲಾಗಿದೆ.-ರಮಾಕಾಂತ್, ಘನತ್ಯಾಜ್ಯ ನಿರ್ವಹಣೆ ಸಲಹೆಗಾರ.