ಬಾಗಲಕೋಟೆ: ನಗರದ ಬಿ.ವಿ.ವಿ. ಸಂಘದ ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆಯಲ್ಲಿ ಜಾನ್ಸನ್ ಆ್ಯಂಡ್ ಜಾನ್ಸನ್ ಸಂಸ್ಥೆಯಿಂದ ಒಂದು ದಿನದ ಶಸ್ತ್ರಚಿಕಿತ್ಸಾ ಸಂದರ್ಭದ ವಿವಿಧ ಕಾರ್ಯಚಟುವಟಿಕೆಗಳ ತರಬೇತಿ ಕಾರ್ಯಾಗಾರ ಜರುಗಿತು.
ಜಾನ್ಸನ್ ಆ್ಯಂಡ್ ಜಾನ್ಸನ್ ಸಂಸ್ಥೆಯು ಸುಸಜ್ಜಿತ ವಾಹನದಲ್ಲಿ ಈ ಸಂಚಾರಿ ತರಬೇತಿ ಕೇಂದ್ರವನ್ನು ಸ್ಥಾಪಿಸಿದ್ದು ದೇಶದ ವೈದ್ಯಕೀಯ ಕಾಲೇಜುಗಳಲ್ಲಿನ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಶಸ್ತ್ರಚಿಕಿತ್ಸಾ ತರಬೇತಿ ನೀಡುತ್ತಿದೆ. ಪರಿಣಿತ ತರಬೇತಿದಾರರೊಂದಿಗೆ ವೈದ್ಯಕೀಯ ಕಾಲೇಜುಗಳಿಗೆ ಭೇಟಿ ನೀಡಿ ಆಯಾ ಕಾಲೇಜುಗಳಲ್ಲಿ ಒಂದು ದಿನದ ಕಾರ್ಯಾಗಾರ ಆಯೋಜಿಸಿ ತರಬೇತಿ ನೀಡುವ ವಿನೂತನ ವ್ಯವಸ್ಥೆ ಇದಾಗಿದೆ ಎಂದು ಜಾನ್ಸನ್ ಆ್ಯಂಡ್ ಜಾನ್ಸನ್ ಸಂಸ್ಥೆಯ ಪರವಾಗಿ ಮ್ಯಾನೇಜರ್ ಅಶುತೋಷ್ ಕುಮಾರ ತಿಳಿಸಿದರು.
ಬಾಗಲಕೋಟೆಯ ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆಗೆ ಭೇಟಿ ನೀಡಿ ಇಲ್ಲಿನ ಶಸ್ತ್ರಚಿಕಿತ್ಸಾ ವಿಭಾಗ, ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗ ಹಾಗೂ ಎಲುಬು ಮತ್ತು ಕೀಲು ವಿಭಾಗದಲ್ಲಿನ ಸುಮಾರು 40 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಶಸ್ತ್ರಚಿಕಿತ್ಸೆ ಸಂದರ್ಭದ ವಿವಿಧ ಕಾರ್ಯಚಟುವಟಿಕೆಗಳಿಗೆ ಸಂಬಂಧಿಸಿದಂತೆ ತರಬೇತಿ ನೀಡಲಾಗುತ್ತಿದೆ. ಲ್ಯಾಪ್ರೊಸ್ಕೋಪಿಕ್ ಹೊಲಿಗೆ, ಹೊಲಿಗೆ ಹಾಕುವ ತಾಂತ್ರಿಕ ವಿಧಾನಗಳು, ಸ್ನಾಯು ಚಿಕಿತ್ಸೆ, ಶಸ್ತ್ರಚಿಕಿತ್ಸಾ ಕತ್ತರಿಸುವಿಕೆ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡು ವಿಶೇಷ ಪರಿಣತಿ ಪಡೆಯಬೇಕು ಎಂದು ಹೇಳಿದರು.
ಇದನ್ನೂ ಓದಿ: ಪೋರ್ನ್ ಹಬ್ ನಲ್ಲಿ ಗಣಿತ ಪಾಠ ಮಾಡುವ ಟೀಚರ್! ವರ್ಷಕ್ಕೆ 2 ಕೋಟಿ ರೂ. ಸಂಪಾದನೆ
ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ (ಬೇವೂರ) ಮಾತನಾಡಿ, ಜಾನ್ಸನ್ ಆ್ಯಂಡ್ ಜಾನ್ಸನ್ ಸಂಸ್ಥೆಯು ಸಂಚಾರಿ ತರಬೇತಿ ಕೇಂದ್ರ ಸ್ಥಾಪಿಸಿರುವುದು ವೈದ್ಯಕೀಯ ಕ್ಷೇತ್ರದಲ್ಲಿ ಇದೊಂದು ಹೊಸ ಪ್ರಯೋಗ. ವೈದ್ಯಕೀಯ ಕ್ಷೇತ್ರದಲ್ಲಿನ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡುತ್ತಿರುವ ಅವರ ಪ್ರಯೋಗ ಪ್ರಶಂಸನೀಯವಾಗಿದೆ. ಕಾರ್ಯಾಗಾರದಲ್ಲಿ ಪಾಲ್ಗೊಂಡ ಎಲ್ಲ ವಿದ್ಯಾರ್ಥಿಗಳು ಈ ತರಬೇತಿ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ತರಬೇತಿದಾರರಾದ ಚಂದ್ರಶೇಖರ ಮತ್ತು ಶ್ರೀನಿವಾಸ, ಸಹಾಯಕ ಸಿಬ್ಬಂದಿ ರಮೇಶ್ ಮತ್ತು ಅನಿಲಕುಮಾರ, ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ|ಅಶೋಕ ಮಲ್ಲಾಪುರ, ವೈದ್ಯಕೀಯ ಅಧೀಕ್ಷಕಿ ಡಾ| ಭುವನೇಶ್ವರಿ ಯಳಮಲಿ, ಡಾ| ಈಶ್ವರ ಕಲಬುರಗಿ, ಡಾ| ಆಶಾಲತಾ ಮಲ್ಲಾಪುರ, ಡಾ|ಸಿದ್ದಣ್ಣ ಪಟ್ಟೆದ, ಡಾ|ಸೊಲಬನ್ನವರ್ ಉಪಸ್ಥಿತರಿದ್ದರು.