Advertisement

ನವಜಾತ ಶಿಶು ಸಹಿತ 238 ಮಂದಿಗೆ ಚಿಕಿತ್ಸೆ, 121 ಸುರಕ್ಷಿತ ಹೆರಿಗೆ

09:58 PM May 06, 2021 | Team Udayavani |

ಮಹಾನಗರ: ಕೋವಿಡ್ ಸೋಂಕು ದೃಢಪಟ್ಟ ಗರ್ಭಿಣಿಯರು ಮತ್ತು ನವಜಾತ ಶಿಶುಗಳ ಚಿಕಿತ್ಸೆ, ಆರೈಕೆಗಾಗಿ ಮಂಗಳೂರಿನ ಸರಕಾರಿ ಲೇಡಿಗೋಶನ್‌ ಹೆರಿಗೆ ಆಸ್ಪತ್ರೆಯಲ್ಲಿಯೂ ಪ್ರತ್ಯೇಕ ವಾರ್ಡ್‌ವಿದ್ದು, ಇಲ್ಲಿ ಇದುವರೆಗೆ 238 ಮಂದಿಗೆ ಚಿಕಿತ್ಸೆ ನೀಡಲಾಗಿದೆ.

Advertisement

ಕೋವಿಡ್ ಮೊದಲ ಅಲೆಯ ಸಂದರ್ಭ ಕಳೆದ ವರ್ಷದ ಸೆಪ್ಟಂಬರ್‌ 10ರಂದು ಇಲ್ಲಿ ಕೋವಿಡ್‌ ವಾರ್ಡ್‌ನ್ನು ಆರಂಭಿಸಲಾಗಿತ್ತು. ಪ್ರಸ್ತುತ ಇಲ್ಲಿ 21 ಹಾಸಿಗೆಗಳ ಕೋವಿಡ್‌ ವಾರ್ಡ್‌ ಇದೆ. ಈ ಪೈಕಿ ಮೇ 6ರ ಮಧ್ಯಾಹ್ನ ವೇಳೆಗೆ 17 ಹಾಸಿಗೆಗಳು ಭರ್ತಿಯಾಗಿದ್ದವು. 21 ಬೆಡ್‌ಗಳ ಪೈಕಿ 15 ಆಕ್ಸಿಜನ್‌ ಹೊಂದಿರುವ ಬೆಡ್‌ಗಳು ಹಾಗೂ 5 ನಾರ್ಮಲ್‌ ಬೆಡ್‌, ಒಂದು ವೆಂಟಿಲೇಟರ್‌ ಹೊಂದಿರುವ ಬೆಡ್‌ ಇದೆ.

121 ಹೆರಿಗೆ :

ಕಳೆದ ವರ್ಷದ ಸೆಪ್ಟಂಬರ್‌ನಿಂದ ಈ ವರ್ಷದ ಮೇ 5ರ ವರೆಗೆ ಇಲ್ಲಿ 121 ಮಂದಿ ಕೊರೊನಾ ಸೋಂಕಿತ ಗರ್ಭಿಣಿಯರ ಹೆರಿಗೆಯಾಗಿದೆ. ಇದರಲ್ಲಿ 66 ಸಿಜೇರಿಯನ್‌ ಹಾಗೂ 55 ಸಹಜ ಹೆರಿಗೆ. ಎಲ್ಲರ ಹೆರಿಗೆ ಸುರಕ್ಷಿತವಾಗಿ ನಡೆದಿದೆ. ಸೆಪ್ಟಂಬರ್‌ನಲ್ಲಿ 36 ಮಂದಿ, ಅಕ್ಟೋಬರ್‌ನಲ್ಲಿ 33, ನವೆಂಬರ್‌ನಲ್ಲಿ 14, ಡಿಸೆಂಬರ್‌ನಲ್ಲಿ 10, ಜನವರಿಯಲ್ಲಿ 5, ಫೆಬ್ರವರಿಯಲ್ಲಿ 3, ಮಾರ್ಚ್‌ನಲ್ಲಿ 11, ಮೇಯಲ್ಲಿ (ಮೇ 5ರ ವರೆಗೆ) 6 ಮಂದಿ ಕೊರೊನಾ ಸೋಂಕಿತರ ಹೆರಿಗೆಯಾಗಿದೆ.

ಎಲ್ಲವೂ ಪ್ರತ್ಯೇಕ ವ್ಯವಸ್ಥೆ :

Advertisement

ಕೋವಿಡ್‌ ವಾರ್ಡ್‌ ಪ್ರತ್ಯೇಕವಾಗಿದ್ದು, ಅಲ್ಲಿ ಹೆರಿಗೆಗೆ ಪ್ರತ್ಯೇಕ ವ್ಯವಸ್ಥೆ ಇದೆ.  ಅಲ್ಲದೆ ಕೋವಿಡ್ ಸೋಂಕಿತರ ಚಿಕಿತ್ಸೆಗೂ ವ್ಯವಸ್ಥೆ ಇದೆ. ವೈದ್ಯರು, ದಾದಿಯರು, ಇತರ ಸಿಬಂದಿ ಕೂಡ ಕೋವಿಡ್‌ ವಾರ್ಡ್‌ಗೆ ಪ್ರತ್ಯೇಕವಾಗಿ ಇದ್ದಾರೆ. ಶಿಶುಗಳಿಗೂ ಪ್ರತ್ಯೇಕವಾದ ವಾರ್ಡ್‌ ಇದೆ. ಇದುವರೆಗೆ ಇಲ್ಲಿ ಒಂದು ನವಜಾತ ಶಿಶುವಿನಲ್ಲಿ ಮಾತ್ರ ಕೊರೊನಾ ದೃಢಪಟ್ಟಿದೆ. ಅದಕ್ಕೂ ಅಗತ್ಯ ಚಿಕಿತ್ಸೆ ನೀಡಲಾಗಿದೆ. ಇಲ್ಲಿ ತಿಂಗಳಿಗೆ ಸರಾಸರಿ 500ರಷ್ಟು ಹೆರಿಗೆಯಾಗುತ್ತದೆ. ಕಳೆದ ತಿಂಗಳು 750 ಹೆರಿಗೆಯಾಗಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ದಾಖಲೆಯ 800 ಹೆರಿಗೆಗಳಾಗಿವೆ. ಆಸ್ಪತ್ರೆಯಲ್ಲಿರುವ ಅಗತ್ಯ ಸೌಲಭ್ಯಗಳಿಂದಾಗಿ ಕೊರೊನಾ ಸಂದರ್ಭದಲ್ಲಿಯೂ ಸುರಕ್ಷಿತ ಹೆರಿಗೆ ಸಾಧ್ಯವಾಗುತ್ತಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.

ಸರಕಾರಿ ಲೇಡಿಗೋಶನ್‌ ಆಸ್ಪತ್ರೆಯಲ್ಲಿ 21 ಬೆಡ್‌ಗಳ ಪ್ರತ್ಯೇಕ ಕೋವಿಡ್‌ ವಾರ್ಡ್‌ ಇದ್ದು ಇಲ್ಲಿ ಎಲ್ಲ ಅಗತ್ಯ ಸೌಲಭ್ಯಗಳಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚುವರಿ ಬೆಡ್‌ಗಳನ್ನು ಸಿದ್ಧಪಡಿಸಲು ನಿರ್ಧರಿಸಿದ್ದೇವೆ. ಗರ್ಭಿಣಿಯರು ಹಾಗೂ ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಕೋವಿಡ್‌ ವಾರ್ಡ್‌ ಹೆರಿಗೆ ಆಸ್ಪತ್ರೆಯ ಇತರ ವಾರ್ಡ್‌ಗಳಿಂದ ಸಂಪೂರ್ಣವಾಗಿ ಪ್ರತ್ಯೇಕವಾಗಿಯೇ ಇದೆ.  -ಡಾ| ದುರ್ಗಾ ಪ್ರಸಾದ್‌ ಎಂ.ಆರ್‌., ವೈದ್ಯಕೀಯ ಅಧೀಕ್ಷಕರು, ಸರಕಾರಿ ಲೇಡಿಗೋಶನ್‌ ಆಸ್ಪತ್ರೆ

Advertisement

Udayavani is now on Telegram. Click here to join our channel and stay updated with the latest news.

Next