ಬೆಂಗಳೂರು: ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ 19 ಚಿಕಿತ್ಸೆ ಸಂಬಂಧ ದರಪಟ್ಟಿ ಸಿದ್ಧಗೊಂಡಿದ್ದು ಸಚಿವ ಸಂಪುಟದಲ್ಲಿ ಚರ್ಚಿಸಿ ಪ್ರಕಟಿಸಲು ತೀರ್ಮಾನಿಸಲಾಗಿದೆ. ವಿಧಾನಸೌಧದಲ್ಲಿ ಗುರುವಾರ ನಡೆದ ಕೋವಿಡ್ ಕಾರ್ಯಪಡೆ ಸಭೆಯಲ್ಲಿ ಕೋವಿಡ್ 19 ಸೋಂಕಿತರಿಗೆ ಚಿಕಿತ್ಸೆ ಸಂಬಂಧ ಸರ್ಕಾರವೇ ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸು ಮಾಡಿದರೆ ಎಷ್ಟು ದರ ಪಾವತಿಸಬೇಕು.
ಸಾರ್ವಜನಿಕರು ಸ್ವಯಂ ಇಚ್ಛೆಯಿಂದ ಖಾಸಗಿ ಆಸತ್ರೆಗಳಲ್ಲಿ ಕೋವಿಡ್ 19 ಚಿಕಿತ್ಸೆ ಪಡೆಬಯಸಿದರೆ ಎಷ್ಟು ದರ ನಿಗಮಾಡಬೇಕು ಎಂಬ ಬಗ್ಗೆ ಚರ್ಚೆಯಾಗಿ ದರಪಟ್ಟಿ ಸಿದ್ಧಪಡಿಸಲಾಗಿದೆ. ಸರ್ಕಾರಿ ಆಸ್ಪತ್ರೆಗೆ ದಾಖಲಾಗುವ ಬಡವರಿಗೆ ಅಲ್ಲಿ ಚಿಕಿತ್ಸೆ ನೀಡಲು ಅವಕಾಶ ಇಲ್ಲದಿದ್ದರೆ ಸರ್ಕಾರವೇ ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಶಿಫಾರಸು ಮಾಡಲಿದ್ದು, ದಿನಕ್ಕೆ ಜನರಲ್ ವಾರ್ಡ್‌ನಲ್ಲಿ 5200 ರೂ., ಆಕ್ಸಿಜನ್ ಜತೆ ಹಾಸಿಗೆಗೆ 7500 ರೂ., ರೆಸ್ಪಿರೇಟರ್ ಸಹಿತ ಚಿಕಿತ್ಸೆಗೆ 8500 ರೂ., ಐಸಿಯು ಚಿಕಿತ್ಸೆಗೆ 12000 ಸಾವಿರ ರೂ. ನಿಗದಿಪಡಿಸಲಾಗಿದೆ.
ಈ ಹಣ ಸರ್ಕಾರವೇ ಖಾಸಗಿ ಆಸ್ಪತ್ರೆಗಳಿಗೆ ಪಾವತಿಸುವುದಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಉದಾಹರಣೆಗೆ 100 ಹಾಸಿಗೆ ಇದ್ದರೆ ಶೇ.50 ಕೋವಿಡ್ ಹಾಸಿಗೆ ಕೋವಿಡ್ ಚಿಕಿತ್ಸೆಗೆ ಮೀಸಲಿಡಬೇಕಾ ಗುತ್ತದೆ ಎಂದು ಹೇಳಲಾಗಿದೆ. ಇದೇ ರೀತಿ ಸಾರ್ವಜನಿಕರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸ್ವಯಂ ಇಚ್ಛೆಯಿಂದ ದಾಖಲಾದರೆ ಎಷ್ಟು ದರ ಪಡೆಯಬೇಕು ಎಂಬ ಬಗ್ಗೆಯೂ ದರ ಪಟ್ಟಿ ಸಿದ್ಧಪಡಿಸಲಾಯಿತು.
ಆದರೆ, ಆ ಕುರಿತು ಸಂಪುಟದಲ್ಲಿ ಚರ್ಚೆ ನಂತರವಷ್ಟೇ ಅಂತಿಮಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ. ಸಭೆಯ ನಂತರ ಮಾತನಾಡಿದ ಆರೋಗ್ಯ ಸಚಿವ ಶ್ರೀರಾಮುಲು, ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ 19 ಚಿಕಿತ್ಸೆ ನೀಡಿದರೆ ಎಷ್ಟು ದರ ನಿಗದಿ ಎಂಬ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ರೀತಿಯ ದರ ಇದೆ. ಗುಜರಾತ್‌ನ ದರದ ಬಗ್ಗೆಯೂ ಚರ್ಚೆಯಾಗಿದೆ.
ವೈದ್ಯರ ಸಂಘವೂ ಇಂತಿಷ್ಟೇ ನಿಗದಿ ಮಾಡಿ ಎಂದು ಮನವಿ ಮಾಡಿದೆ. ಅದನ್ನೂ ಪರಿಶೀಲಿಸಿ ಅಂತಿಮವಾಗಿ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಮಾಡಲಾಗುವುದೆಂದರು. ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚು ಹಣ ಪಡೆಯಲಾಗುತ್ತಿದೆ ಎಂಬ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗಿ ಅದಕ್ಕೆ ಕಡಿವಾಣ ಹಾಕಲು ನಿಯಂತ್ರಣ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಮುಂದಿನ ಸಂಪುಟ ಸಭೆಯಲ್ಲಿ ಈ ಕುರಿತು ಸ್ಪಷ್ಟತೆ ಸಿಗಲಿದೆ ಎಂದು ತಿಳಿಸಿದರು.
ಕೋವಿಡ್ 19 ಚಿಕಿತ್ಸೆ ನೀಡುವ ವೈದ್ಯರು ಹಾಗೂ ನರ್ಸ್‌ಗಳಿಗೆ ಶಿಫ್ಟ್ ಆಧಾರದ ಮೇಲೆ ಕ್ವಾರಂಟೈನ್ ಮಾಡಲು ತೀರ್ಮಾನ ಮಾಡಲಾಗಿದೆ. ವಾರದ 7 ದಿನ ಕೆಲಸ ಮಾಡಿದರೆ ಮುಂದಿನ 7 ದಿನ ಕ್ವಾರಂಟೈನ್‌ನಲ್ಲಿ ಇರಬೇಕು.
-ಶ್ರೀರಾಮುಲು, ಆರೋಗ್ಯ ಸಚಿವ