ಗದಗ: ರಾಜ್ಯದಲ್ಲಿ ಕೋವಿಡ್ ಮಾರಿ ಸಮುದಾಯದಲ್ಲಿ ಹರಡುತ್ತಿದೆ. ಸೋಂಕಿತರ ಚಿಕಿತ್ಸೆಗಾಗಿ ಸರಕಾರ ಬಯಲು, ಕ್ರೀಡಾಂಗಣಗಳಲ್ಲಿ ವ್ಯವಸ್ಥೆ ಮಾಡಲು ಕೋವಿಡ್ ಸೋಂಕಿತರು ಜಾನುವಾರುಗಳಲ್ಲ ಎಂದು ಶಾಸಕ ಎಚ್.ಕೆ. ಪಾಟೀಲ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರ ಕೋವಿಡ್ ಚಿಕಿತ್ಸೆಗಾಗಿ ಗುರುತಿಸಿದ ಆಸ್ಪತ್ರೆಗಳಲ್ಲಿ ಹಾಸಿಗೆಗಳು ತುಂಬಿ ಹೋಗಿವೆ. ಹೆಚ್ಚಿನ ಆಸ್ಪತ್ರೆಗಳನ್ನು ವ್ಯವಸ್ಥೆ ಮಾಡಲು ಸರಕಾರ ಗಂಭೀರ ಪ್ರಯತ್ನ ಮಾಡದೇ, ಮೈದಾನ, ಕ್ರೀಡಾಂಗಣ, ಬಯಲು ಪ್ರದೇಶವನ್ನು ಹುಡುಕುತ್ತಿದೆ. ಬೆಂಗಳೂರಿನಲ್ಲಿ ಸೋಂಕಿತರ ಚಿಕಿತ್ಸೆಗಾಗಿ ಹಾಸಿಗೆಗಳಿಲ್ಲ ಎಂದು ತಿಳಿದು ಬಂದಿರುವ ಸಂದರ್ಭದಲ್ಲಿ ಸರಕಾರದ ಹಿರಿಯ ವಕ್ತಾರರೊಬ್ಬರು ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆಗಾಗಿ ಜಮೀನು ಹುಡುಕುತ್ತಿದ್ದೇವೆ ಎಂದು ಹೇಳಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಹರಿಹಾಯ್ದರು.
ಬೆಂಗಳೂರಿನಲ್ಲಿ ತ್ರೀ ಸ್ಟಾರ್ ಹಾಗೂ ಫೈವ್ ಸ್ಟಾರ್ ಹೋಟೆಲ್‌ಗಳನ್ನು ಸರಕಾರ ವಶಕ್ಕೆ ತೆಗೆದುಕೊಳ್ಳಬೇಕು. ಆ ಮೂಲಕ 30 ಸಾವಿರ ಹಾಸಿಗೆವುಳ್ಳ ಕೋವಿಡ್ ಕಾಳಜಿ ಕೇಂದ್ರಗಳನ್ನಾಗಿ ಮಾರ್ಪಡಿಸಬೇಕು. ಯಾವುದೇ ಕಾರಣಕ್ಕೂ ಬೆಂಗಳೂರನ್ನು ನ್ಯೂಯಾರ್ಕ್, ಇಟಲಿ ದೇಶದ ನಗರಗಳು ಎದುರಿಸಿದ ದುಸ್ಥಿತಿಗೆ ದೂಡಲು ಬಿಡುವುದಿಲ್ಲ. ಸ್ಥಿತಿವಂತರು, ರಿಯಲ್ ಎಸ್ಟೇಟ್ ಉದ್ಯಮಿಗಳ ಅನುಕೂಲಕ್ಕಾಗಿ ಸರಕಾರ ಸುಗ್ರಿವಾಜ್ಞೆ ಮೂಲಕ ಭೂ ಸುಧಾರಣೆ ಕಾಯ್ದೆ ತಿದ್ದುಪಡಿಗೆ ಮುಂದಾಗುತ್ತಿದೆ. ಆದರೆ ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಹೆಚ್ಚಿನ ಆಸ್ಪತ್ರೆ ಹೊಂದಲು, ವೈದ್ಯಕೀಯ ಸಿಬ್ಬಂದಿ, ವೈದ್ಯರ ನೇಮಕಾತಿ ವಿಚಾರದಲ್ಲಿ ಸುಗ್ರಿವಾಜ್ಞೆಗೆ ಹಿಂಜರಿಕೆ ಏಕೆ ಎಂದು ಖಾರವಾಗಿ ಪ್ರಶ್ನಿಸಿದರು.
33 ಸಾವಿರ ವೇಂಟಿಲೇಟರ್ ಒದಗಿಸುವಂತೆ ಕೇಂದ್ರಕ್ಕೆ ರಾಜ್ಯ ಸರಕಾರ ಪ್ರಸ್ತಾವನೆ ಸಲ್ಲಿಸಿದ್ದು, ಪೂರೈಕೆಯಾಗಿದ್ದು ಕೇವಲ 90 ಮಾತ್ರ. ರಾಜ್ಯ ಸರಕಾರ ಖರೀದಿಸಿದ ವೆಂಟಿಲೇಟರ್‌ಗಳು 24 ಗಂಟೆ, 40 ಗಂಟೆ ಕಾರ್ಯನಿರ್ವಹಿಸಿದ ವೆಂಟಿಲೇಟರ್‌ಗಳನ್ನು ಖರೀದಿಸಿ, ಅಕ್ರಮವೆಸಗಿದೆ. ಇನ್ನು ಕೋವಿಡ್ ವಾರ್ ರೂಮ್‌ನಲ್ಲಿ ಕಾರ್ಯನಿರ್ವಹಿಸುವ ವೈದ್ಯರು, ವೈದ್ಯಕೀಯ ಸಿಬ್ಬಂದಿಗೂ ಕೋವಿಡ್ ಸೋಂಕು ಹರಡುತ್ತಿರುವುದು ಆತಂಕಕಾರಿ ಬೆಳವಣಿಗೆ. ಇದು ಪಿಪಿಇ ಕಿಟ್‌ಗಳ ಲೋಪವೋ, ವೈದ್ಯಕೀಯ ಸಿಬ್ಬಂದಿಗೆ ಸೋಂಕು ಹರಡಿರುವ ಬಗ್ಗೆ ಪರಾಮರ್ಶಿಸಲು ಸರಕಾರ ಮನಸ್ಸು ಮಾಡುತ್ತಿಲ್ಲ ಎಂದು ಟೀಕಿಸಿದರು.
ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದರಿಂದ ತಕ್ಷಣವೇ ವಿಶೇಷವಾಗಿ ಕೋವಿಡ್ ಕರ್ತವ್ಯ ನಿರ್ವಹಣೆಗಾಗಿ ವೈದ್ಯರು, ನರ್ಸ್ ಹಾಗೂ ವೈದ್ಯಕೀಯ ಸಿಬ್ಬಂದಿ ನೇಮಕಾತಿ ನಡೆಸಬೇಕು. ವೈದ್ಯರಿಗೆ ಅಗತ್ಯ ಪ್ರಮಾಣದಲ್ಲಿ ಪಿಪಿಇ ಕಿಟ್ ಒದಗಿಸಬೇಕು. ಖಾಸಗಿ ವೈದ್ಯರೊಂದಿಗೆ ದರ ನಿಗದಿ ವಿಚಾರದಲ್ಲಿ ಸಂಘರ್ಷವನ್ನು ಬಿಟ್ಟು, ಮಾತುಕತೆ ನಡೆಸಬೇಕು. ಕೋವಿಡ್ 19 ನಿಯಂತ್ರಣಕ್ಕಾಗಿ ಸರಕಾರ ಯುದ್ಧೋಪಾದಿಯಲ್ಲಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಗುರಣ್ಣ ಬಳಗಾನೂರ, ಪ್ರಭು ಬುರಬುರೆ, ಅಶೋಕ ಮಂದಾಲಿ ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆಯಲ್ಲಿ 170 ಆಗಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಜಿಲ್ಲಾಡಳಿತ ತಕ್ಷಣವೇ 500 ಹಾಸಿಗೆಗಳ ವ್ಯವಸ್ಥೆ ಮಾಡಬೇಕು. ಜಿಲ್ಲೆಯಲ್ಲಿ ಗಣಿ ಇಲಾಖೆಯಿಂದ 25 ಲಕ್ಷ ರೂ. ಆಹಾರ ಕಿಟ್ ವಿತರಣೆ ಆಗಿದ್ದನ್ನು ಬಿಟ್ಟರೆ ಎನ್‌ಡಿಆರ್‌ಎಫ್, ಎಸ್ ಡಿಆರ್‌ಎಫ್ ಹಾಗೂ ಎಂಎಚ್ ಎಂನಿಂದ ಇಂತಹ ಕಷ್ಟಕಾಲದಲ್ಲಿ ಈವರೆಗೆ ನಯಾಪೈಸೆ ಅನುದಾನ ಬಂದಿಲ್ಲ.
– ಎಚ್.ಕೆ. ಪಾಟೀಲ, ಶಾಸಕ