Advertisement

ಎಂಡೋಪೀಡಿತರ ಮನೆ ಬಾಗಿಲಿಗೆ ತೆರಳಿ ಚಿಕಿತ್ಸೆ

09:57 PM Mar 09, 2020 | Sriram |

ಉಡುಪಿ: ಎಂಡೋ ಪೀಡಿತರ ಅಂಗವಿಕಲರ ನ್ಯೂನತೆಗಳನ್ನು ಸಂಪೂರ್ಣವಾಗಿ ತೊಡೆದು ಹಾಕುವುದು ಅಸಾಧ್ಯವಾದರೂ ಅವರಿಗೆ ಸೂಕ್ತ ಚಿಕಿತ್ಸಾ ವಿಧಾನ ಮತ್ತು ತರಬೇತಿ ನೀಡಿದಲ್ಲಿ ಒಂದಷ್ಟು ಸುಧಾರಣೆ ಕಾಣಬಹುದು. ಇದನ್ನು ಮನಗಂಡ ಆರೋಗ್ಯ ಇಲಾಖೆ ಎಂಡೋಪೀಡಿತ ಅಂಗವಿಕಲರಿಗೆ ಫಿಸಿಯೋಥೆರಪಿ ಚಿಕಿತ್ಸೆ ನೀಡಲು ಮುಂದಾಗಿದೆ.

Advertisement

ಮುಂದಿನ ವಾರದಿಂದ
ಮೊದಲ ಬಾರಿಗೆ ಎಂಡೋಪೀಡಿತರ ಫಿಸಿಯೋಥೆರಪಿ ಮೊಬೈಲ್‌ ಕ್ಲಿನಿಕ್‌ ಸೇವೆ ಉಡುಪಿ ಜಿಲ್ಲೆಯಲ್ಲಿ ಮುಂದಿನ ವಾರದಿಂದ ಕಾರ್ಯಾರಂಭಿಸಲಿದೆ. ಎಂಡೋಸಲ್ಫಾನ್‌ ಸಂತ್ರಸ್ತರ ಪುನರ್ವಸತಿ ಯೋಜನೆಯಡಿ ಸಂಚಾರಿ ಘಟಕ ಕೆಲಸ ನಿರ್ವಹಿಸಲಿದೆ.

ಸಂಚಾರಿ ಘಟಕ ತೆರಳಲಿರುವ ಪ್ರದೇಶಗಳು
ಜಿಲ್ಲೆಯ ಮೂರು ತಾಲೂಕುಗಳಲ್ಲಿ ಹಾಸಿಗೆ ಹಿಡಿದ ಹಲವು ಮಂದಿ ಎಂಡೋಪೀಡಿತರಿದ್ದಾರೆ. ಅವರಿಗೆ ಪಾಲನೆ ಕೇಂದ್ರಕ್ಕೆ ಅಥವಾ ಆಸ್ಪತ್ರೆಗಳಿಗೆ ಬರಲಾಗುತಿಲ್ಲ. ಸಾೖಬರಕಟ್ಟೆ, ಹಿರಿಯಡ್ಕ, ಮಂದರ್ತಿ, ಕುಕ್ಕೆಹಳ್ಳಿ, ಕಾರ್ಕಳ ತಾಲೂಕಿನ ಇರ್ವತ್ತೂರು, ಹೆಬ್ರಿ, ದೊಂಡೆರಂಗಡಿ, ನಿಟ್ಟೆ, ಬೈಲೂರು, ಈದು, ಕುಂದಾಪುರ ತಾಲೂಕಿನ ಕಂಡೂÉರು, ಹಾಲಾಡಿ, ಬಿದ್ಕಲ್‌ ಕಟ್ಟೆ, ಕೆದೂರು, ಬೆಳ್ವೆ, ಹಕ್ಲಾಡಿ ಶಿರೂರು, ಕಿರಿಮಂಜೇಶ್ವರ, ವಂಡ್ಸೆ ಮೊದಲಾದ ಕಡೆಗಳಲ್ಲಿ ಎಂಡೋಪೀಡಿತರಿದ್ದಾರೆ. ಇವರೆಲ್ಲರೂ ಫಿಸಿಯೋಥೆರಪಿ ಸಂಚಾರಿ ಕ್ಲಿನಿಕ್‌ ಪ್ರಯೋಜನ ಪಡಕೊಳ್ಳಲಿದ್ದಾರೆ.

ನಾಲ್ವರ ತಂಡ
ಸಂಚಾರಿ ಘಟಕ ತೆರೆಯಲು ವೈದ್ಯಕೀಯ ಮತ್ತು ಫಿಸಿಯೋಥೆರಫಿ ಸಾಧನ ಸಲಕರಣೆ ಖರೀದಿಗೆ 2020ರ ಜ.1ರಂದು ದರ ಪಟ್ಟಿ ಆಹ್ವಾನಿಸಲಾಗಿತ್ತು. ಮಾ.5ರಂದು ಟೆಂಡರ್‌ ಪ್ರಕ್ರಿಯೆ ಅಂತಿಮಗೊಂಡಿದೆ. ಬೆಳಗಾವಿ ತಾಲೂಕು ಹುಕ್ಕೇರಿಯ ಕರ್ನಾಟಕ ರೂರಲ್‌ ಎಜ್ಯುಕೇಶನ್‌ ಸೊಸೈಟಿ ಹಿಡಕಲ್‌ ಡಾಮ್‌ ಸೊಸೈಟಿ ಘಟಕ ತೆರೆ ಯುವ ಗುತ್ತಿಗೆ ವಹಿಸಿಕೊಂಡಿದೆ. ಆರೋಗ್ಯ ಇಲಾಖೆ ನೀಡಿರುವ ಎಂಡೋಪೀಡಿತರ ಪಟ್ಟಿಯಲ್ಲಿರುವ ಸಂತ್ರಸ್ತರ ಮನೆಗಳಿಗೆ ಈ ಸಂಚಾರಿ ಘಟಕ ತೆರಳಿ ಚಿಕಿತ್ಸೆ ನೀಡಲಿದೆ. ಫಿಸಿಯೋಥೆರಪಿ ತಜ್ಞರು, ಶುಶ್ರೂಷಕಿ, ಅಸಿಸ್ಟೆಂಟ್‌, ಚಾಲಕ ಇರಲಿದ್ದಾರೆ.

ಜಿಲ್ಲಾ ಕೇಂದ್ರ ವಿಳಂಬಕ್ಕೆ ಪರ್ಯಾಯ ವ್ಯವಸ್ಥೆ
ದ.ಕ. ಜಿಲ್ಲೆಯಲ್ಲಿ ಎಂಡೋಪೀಡಿತರಿಗೆ ಫಿಸಿಯೋಥೆರಪಿ ಚಿಕಿತ್ಸೆಗೆ 5 ಘಟಕಗಳು ಕಾರ್ಯನಿರ್ವಹಿಸುತ್ತಿದ್ದರೂ, ಉಡುಪಿ ಜಿಲ್ಲೆಯಲ್ಲಿ ಒಂದು ಘಟಕವೂ ಇರಲಿಲ್ಲ. ಉಡುಪಿ ಜಿಲ್ಲಾ ಕೇಂದ್ರದಲ್ಲಿ ಫಿಸಿಯೋಥೆರಪಿ ಕೇಂದ್ರ ಸ್ಥಾಪನೆ ವಿಚಾರ ಪ್ರಸ್ತಾವನೆಯಲ್ಲಿದೆ. ಅದಿನ್ನೂ ಅನುಷ್ಠಾನಕ್ಕೆ ಬಂದಿಲ್ಲ. ಇದಕ್ಕೆ ಸಂಬಂದಿಸಿದ ಕಡತ ಜಿಲ್ಲಾಧಿಕಾರಿ ಕಚೇರಿಗೆ ಅನುಮೋದನೆಗೆ ಹೋಗಿದೆ. ಜಾಗದ ಸಮಸ್ಯೆ ಇತ್ಯಾದಿಗಳಿಂದ ಪ್ರಕ್ರಿಯೆ ವಿಳಂಬವಾಗಿದೆ. ಅದು ನಿವಾರಣೆಗೆಯಾಗಲು ಸಮಯ ತೆಗೆದುಕೊಳ್ಳಲಿದೆ. ವಿಳಂಬವಾಗುವುದನ್ನು ಮನಗಂಡು ಸಂಚಾರಿ ಘಟಕ ಕಾರ್ಯಾರಂಭಿಸಲು ಇಲಾಖೆ ಮುಂದಾಗಿದೆ. ಫಿಜಿಯೋಥೆರಪಿಗಾಗಿ ಸಂತ್ರಸ್ತರು ಇನ್ನು ಮುಂದೆ ಅಲೆದಾಡುವ ಕಷ್ಟ ತಪ್ಪಲಿದೆ.

Advertisement

ಕಾರ್ಯಾದೇಶ ಪತ್ರ
ಜಿಲ್ಲೆಯಲ್ಲಿ ಮೂರು ತಾಲೂಕು ವ್ಯಾಪ್ತಿಯಲ್ಲಿ ಕಾರ್ಯಾಚರಿಸಲು ಫಿಸಿಯೋಥೆರಪಿ ಸಂಚಾರಿ ಘಟಕ ತೆರೆಯಲು ಟೆಂಡರ್‌ ಕರೆಯಲಾಗಿತ್ತು. ಅದರಂತೆ ಬೆಳಗಾವಿಯ ಸಂಸ್ಥೆ ಗುತ್ತಿಗೆಯಲ್ಲಿ ಭಾಗವಹಿಸಿ ಗುತ್ತಿಗೆ ಪಡೆದುಕೊಂಡಿದೆ. ಘಟಕಕ್ಕೆ ಕಾರ್ಯಾರಂಭಿಸಲು ಕಾರ್ಯಾದೇಶ ಪತ್ರ ನೀಡಲಾಗಿದೆ.
-ಸತೀಶ್‌, ಹಿರಿಯ ಆರೋಗ್ಯ ಸಹಾಯಕರು,
ಉಡುಪಿ ಜಿಲ್ಲಾಸ್ಪತ್ರೆ.

ಗುತ್ತಿಗೆದಾರರಿಗೆ ಸೂಚನೆ
ಜಿಲ್ಲೆಯಲ್ಲಿ ಎಂಡೋಸಲ್ಫಾನ್‌ ಪೀಡಿತರಿಗಾಗಿ ಫಿಸಿಯೋಥೆರಪಿ ಕೇಂದ್ರ ತೆರೆಯುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಇನ್ನೂ ಅನುಮೋದನೆ ಸಿಕ್ಕಿಲ್ಲ. ಅದಕ್ಕೆ ಕಾಯದೆ ಫಿಸಿಯೋಥೆರಪಿ ಮೊಬೈಲ್‌ ಕ್ಲಿನಿಕ್‌ ಘಟಕ ಆರಂಭಿಸಲು ನಿರ್ಧರಿಸಿದ್ದೇವೆ. ಗುತ್ತಿಗೆ ನೀಡಲಾಗಿದೆ. ಜಿಲ್ಲೆಯ ಎಲ್ಲ ತಾಲೂಕುಗಳ ಎಂಡೋಪ್ರದೇಶಗಳಿಗೆ ತೆರಳಿ ಘಟಕ ಚಿಕಿತ್ಸೆ ನೀಡಲಿದೆ. ವಾರದೊಳಗೆ ಘಟಕ ಕಾರ್ಯಾರಂಭಿಸಲು ಕಾರ್ಯಾದೇಶದಲ್ಲಿ ಗುತ್ತಿಗೆದಾರರಿಗೆ ಸೂಚಿಸಲಾಗಿದೆ.
-ಡಾ| ಸುಧೀರ್‌ಚಂದ್ರ ಸೂಡ,
ಡಿಎಚ್‌ಒ, ಜಿಲ್ಲಾ ಆರೋಗ್ಯ ಇಲಾಖೆ, ಉಡುಪಿ.

-ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next