Advertisement
ಜಿಲ್ಲೆಯಲ್ಲಿ ಕಳೆದ 15 ದಿನಗಳಿಂದ ಸೋಂಕಿನ ತೀವ್ರತೆ ಹೆಚ್ಚಾಗಿದ್ದು, ಸಕ್ರಿಯ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಳ ಕಂಡಿದೆ. ಈ ನಡುವೆ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಲು ಸಜ್ಜಾಗಿದ್ದು, ನಗರದ ಕೆ.ಆರ್. ಆಸ್ಪತ್ರೆ, ಮೇಟಗಳ್ಳಿಯಲ್ಲಿರುವ ಜಿಲ್ಲಾಸ್ಪತ್ರೆ, ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗೆ ಹಾಸಿಗೆ ಮೀಸಲಿಡಲಾಗಿದೆ.
Related Articles
Advertisement
ನಗರದ ಜಿಲ್ಲಾ ಆಸ್ಪತ್ರೆಯಲ್ಲಿ 250 ಹಾಸಿಗೆಗಳಲ್ಲಿ 133 ಭರ್ತಿಯಾಗಿದ್ದು, 14 ವೆಂಟಿಲೇಟರ್ ಐಸಿಯು ಬೆಡ್ ಭರ್ತಿಯಾಗಿದೆ. ಹಾಗೆಯೇ ನಗರದ ಕೆ. ಆರ್.ಆಸ್ಪತ್ರೆಯಲ್ಲಿ 200 ಆಕ್ಸಿಜನ್ ಬೆಡ್, ಕಲ್ಲು ಬಿಲ್ಡಿಂಗ್‌ನಲ್ಲಿ 200 ಆಕ್ಸಿಜನ್ ಬೆಡ್, ಟ್ರಾಮಾ ಸೆಂಟರ್‌ನಲ್ಲಿ 100 ಆಕ್ಸಿಜನ್ ಬೆಡ್ ಸೇರಿ 500 ಬೆಡ್ ಹಾಗೂ 50 ವೆಂಟಿಲೇಟರ್ ಬೆಡ್‌ಗಳನ್ನು ಮೀಸಲಿಡಲಾಗಿದೆ. ಇದರ ಜೊತೆಗೆ ಜೆಎಸ್ ಎಸ್ ಆಸ್ಪತ್ರೆಯಲ್ಲೂ ಸೋಂಕಿತರ ಚಿಕಿತ್ಸೆಗೆ ಹಾಸಿಗೆ ಮೀಸಲಿರಿಸಲಾಗಿದ್ದು, ಸದ್ಯಕ್ಕೆ ನಗರದಲ್ಲಿ 1 ಸಾವಿರ ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಲಾಗಿದೆ. ಗ್ರಾಮಾಂತರ ಪ್ರದೇಶದ ಸೋಂಕಿತರಿಗೆ ಸಮಸ್ಯೆಯಾಗದಂತೆ ಎಲ್ಲಾ ತಾಲೂಕು ಆಸ್ಪತ್ರೆಗಳಿಗೂ ಈಗಾಗಲೇ ತಲಾ 4ರಂತೆ ವೆಂಟಿಲೇಟರ್ ನೀಡಲಾಗಿದ್ದು, 30 ಹಾಸಿಗೆ ಸೌಲಭ್ಯ ಕಲ್ಪಿಸಲಾಗಿದೆ. ಆಯಾ ತಾಲೂಕಿನಲ್ಲಿ ಸೋಂಕಿನ ತೀವ್ರತೆ ಆಧಾರದಲ್ಲಿ ಹಾಸಿಗೆ ಸೌಲಭ್ಯ ಹೆಚ್ಚಿಸಲಾಗುವುದು ಎಂದು ವೈದ್ಯಾಧಿಕಾರಿ ಪತ್ರಿಕೆಗೆ ತಿಳಿಸಿದ್ದಾರೆ.
ಮಹಾನ್‌ನೊಂದಿಗೆ ಒಪ್ಪಂದ:
45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಸಲುವಾಗಿ ಜಿಲ್ಲಾಡಳಿತ ಮಹಾನ್ (ಖಾಸಗಿ ಆಸ್ಪತ್ರೆಗಳ ಒಕ್ಕೂಟ)ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದು. ನಗರದ 65 ವಾರ್ಡ್‌ಗಳಲ್ಲಿ ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಲಸಿಕೆ ನೀಡುವ ಕೆಲಸದಲ್ಲಿ ಭಾಗಿಯಾಗಿದ್ದಾರೆ. ಸಿಬ್ಬಂದಿ ಕೊರತೆ: ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲೂ ವೈದ್ಯ, ನರ್ಸ್, ಫಾರ್ಮಾಸಿಸ್ಟ್, ಪೆಥಾಲಜಿಸ್ಟ್, ಡಿ. ಗ್ರೂಪ್ ನೌಕರರ ಕೊರತೆ ಇದ್ದು, ಅಗತ್ಯ ಸಿಬ್ಬಂದಿ ಇಲ್ಲದೆ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವುದು ಕೆಲ ಸರ್ಕಾರಿ ಆಸ್ಪತ್ರೆಗಳಿಗೆ ಸವಾಲಾಗಿದೆ. ಈ ಹಿನ್ನೆಲೆ ಹೊರಗುತ್ತಿಗೆ ಆಧಾರದ ಮೇಲೆ ಅಗತ್ಯ ಸಿಬ್ಬಂದಿ ನೇಮಕಕ್ಕೆ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸಜ್ಜಾಗಿದೆ.
- ಸತೀಶ್ ದೇಪುರ