Advertisement

ಕೋವಿಡ್‌ 19 ಹೆಚ್ಚಿದರೆ ವಸತಿ ಶಾಲೆಗಳಲ್ಲಿ ಚಿಕಿತ್ಸೆ

07:05 AM Jul 02, 2020 | Lakshmi GovindaRaj |

ದೊಡ್ಡಬಳ್ಳಾಪುರ: ನಗರದ ಆಸ್ಪತ್ರೆಯಲ್ಲಿ ಕೋವಿಡ್‌ 19 ಸೋಂಕಿತರ ಚಿಕಿತ್ಸೆಗೆ ಸದ್ಯ 40 ಹಾಸಿಗೆಗಳಿದ್ದು, ಸೋಂಕು ಹೆಚ್ಚಿದರೆ ನಗರದ ಹೊರವಲಯದ ವಸತಿ ಶಾಲೆಗಳಲ್ಲಿ ಚಿಕಿತ್ಸೆ ನೀಡುವ ಅನಿವಾರ್ಯ ಎದುರಾಗಲಿದೆ ಎಂದು  ಆರೋಗ್ಯಾಧಿಕಾರಿ ಡಾ.ಪರಮೇಶ್ವರ ತಿಳಿಸಿದರು. ತಾಪಂ ಸಭಾಂಗಣದಲ್ಲಿ ಡಿ.ಸಿ.ಶಶಿಧರ್‌ ಅಧ್ಯಕ್ಷತೆಯಲ್ಲಿ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿ, ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಸ್ತುತ 20  ಹಾಸಿಗೆಗಳು ಕೋವಿಡ್‌ 19 ಸೋಂಕಿತರ ಚಿಕಿತ್ಸೆಗೆ ಲಭ್ಯವಿದೆ.

Advertisement

ಹೆಚ್ಚುವರಿ 20 ಹಾಸಿಗೆ ಸಿದಟಛಿಗೊಳಿಸಲಾಗುತ್ತಿದೆ. ನಗರದ ಹೊರ ವಲಯದ ವಸತಿ ಶಾಲೆಗಳಲ್ಲಿ ಚಿಕಿತ್ಸೆ ನೀಡಬೇಕಾಗುವುದು.  ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯವಿದೆ  ಎಂದರು. ಅಧ್ಯಕ್ಷ ಡಿ.ಸಿ.ಶಶಿಧರ್‌ ಮಾತನಾಡಿ, ಕೋವಿಡ್‌ 19 ಸೋಂಕು ತಡೆಗೆ ತಾಪಂ ಸದಸ್ಯರ ಸಂಪೂರ್ಣ ಸಹಕಾರವಿದ್ದು, ತಡೆಗೆ ಜನಜಾಗೃತಿ ಮೂಡಿಸಲಾಗುವುದು. ತಾಪಂಗೆ ಅನುಬಂಧಿತ ಅನುದಾನ 2 ಕೋಟಿ ಬಂದಿದ್ದು, ಸದಸ್ಯರ  ಸಲಹೆ ಮೇರೆಗೆ ಅಭಿವೃದ್ಧಿ ಕಾಮಗಾರಿಗೆ ಬಳಸಲಾಗುವುದು ಎಂದರು.

ನೂತನ ಅಂಗನವಾಡಿ ಕಟ್ಟಡಗಳಿಗೆ ವಿದ್ಯುತ್‌ ಮೀಟರ್‌ ಅಳವಡಿಕೆಗೆ ಮೀಸಲಾಗಿದ್ದ 5 ಲಕ್ಷ ಅನುದಾನ ಬಳಕೆಯಾಗದೆ, ಸರ್ಕಾರಕ್ಕೆ ವಾಪಸ್ಸಾಗಿದೆ.  ಅಧಿಕಾರಿಗಳನ ನಡುವಿನ ಸಮ ನ್ವಯದ ಕೊರತೆ ಅಥವಾ ಬೇಜವಾಬ್ದಾರಿ ಕಾರಣವೋ? ಎಂದು ಸದಸ್ಯ ಶಂಕರಪ್ಪ,ನಾರಾಯಣಗೌಡ, ಕಣಿವೇಪುರ ಸುನೀಲ್‌ ಕುಮಾರ್‌ ಬೇಸರಿಸಿದರು. ಅನುದಾನ ಸಿಗುವುದು ಕಷ್ಟ. ಅಂಥದ್ದರಲ್ಲಿ  ಬಂದ ಅನು  ದಾನ ವಾಪಸ್‌ ತೆರಳಿರುವುದಕ್ಕೆ ಹೊಣೆಯಾರು? ಎಂದು ನಾರಾಯಣಗೌಡ ಪ್ರಶ್ನಿಸಿದರು.

ಮಧ್ಯ ಪ್ರವೇಶಿಸಿದ ತಾಪಂ ಅಧ್ಯಕ್ಷ ಡಿ.ಸಿ.ಶಶಿಧರ್‌, ಮಾ.31ರವರೆಗೂ ಕಾಯದೆ ಅನುದಾನ ಸಮರ್ಪಕವಾಗಿ ಬಳಸಿಕೊಂಡು  ತಾಲೂಕಿನ ಅಭಿವೃದ್ಧಿಗೆ ಅಧಿಕಾರಿಗಳು ಶ್ರಮಿಸಬೇಕಿದೆ ಎಂದರು. ಬಾಲ್ಯವಿವಾಹ ತಡೆಗೆ ದೂರು ಬಂದರೆ ಕ್ರಮಕೈಗೊಳ್ಳದೇ ಸ್ಥಳೀಯ ಅಂಗನವಾಡಿ, ಆಶಾ ಕಾರ್ಯಕರ್ತೆಯರ ನೆರವು ಪಡೆದು ಬಾಲ್ಯವಿವಾಹ ತಡೆಗೆ ಒತ್ತು  ನೀಡುವಂತೆ ಸಿಡಿಪಿಒ ಅನಿತಾ ಅವರಿಗೆ ಸದಸ್ಯರು ಒತ್ತಾಯಿಸಿದರು.

ಬಿಇಒ ಬೈಯಪ್ಪರೆಡ್ಡಿ ಮಾಹಿತಿ ನೀಡಿ, ಶಾಲಾ ಆಸ್ತಿಗಳ ಬಗ್ಗೆ ತಕರಾರಿದ್ದು, ಶೇ.60ರಷ್ಟು ಸರ್ಕಾರಿ ಶಾಲೆ ನೋಂದಣಿಯಾಗಿಲ್ಲ. ಕೆಲ ದಾನಿಗಳು 30-40 ವರ್ಷಗಳ  ಹಿಂದೆ ಕೊಟ್ಟಿರುವುದು ನೋಂದಣಿಯಾಗದೆ ಉಳಿದಿದೆ. ದಾನ ನೀಡಿರುವವರು ಕಾಲವಾಗಿ ಪ್ರಸ್ತುತ ವಾರಸುದಾರರು ಶಾಲೆ ಸ್ವಾಧೀನಕ್ಕೆ ಒಪ್ಪುತ್ತಿಲ್ಲ. ತಾಲೂಕಿನಲ್ಲಿ ಅಂತಹ 80 ಪ್ರಕರಣಗಳಿವೆ. ಅದರಲ್ಲಿ 7 ಪ್ರಕರಣಗಳನ್ನು ನೋಂದಣಿಗೆ  ಒಪ್ಪಿಸಲಾಗಿದೆ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಶಶಿಧರ್‌, ಸಮಸ್ಯೆ ಬಗೆಹರಿಸಲು 80 ಶಾಲೆಗಳ ಪಟ್ಟಿ ಪಡೆದು ಸಿಇಒ ಮೂಲಕ ಡೀಸಿಗೆ ತಲುಪಿಸಲಾಗುವುದು ಎಂದು ಭರವಸೆ ನೀಡಿದರು.

Advertisement

ಅರಣ್ಯ ಇಲಾಖೆಯಿಂದ ಶಾಲಾ ಕಾಲೇಜುಗಳ ವ್ಯಾಪ್ತಿಯ ಆವರಣದಲ್ಲಿ ಗಿಡ ನೆಡುವುದು, ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಬೋರ್‌ವೆಲ್‌ ಕೊರೆಸುವುದು, ಅಥವಾ ಟ್ಯಾಂಕರ್‌ನಿಂದ ನೀರು ಪೂರೈಕೆಗೆ ಕ್ರಮ ಮತ್ತಿತರ ವಿಚಾರ ಚರ್ಚಿಸಲಾಯಿತು. ಉಪಾಧ್ಯಕ್ಷೆ ಪದ್ಮಾವತಿ ಅಣ್ಣಯ್ಯಪ್ಪ,  ಇಒ ಮುರುಡಯ್ಯ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಚೆನ್ನಮ್ಮ ರಾಮಲಿಂಗಯ್ಯ, ಸಹಾಯಕ ನಿರ್ದೇಶಕಿ ಸಿ.ಗೀತಾ ಮಣಿ ಸೇರಿ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next